

ವಿಜಯವಾಣಿ ಸುದ್ದಿಜಾಲ, ಬೆಂಗಳೂರು
ಆರಂಭಿಕರಾದ ದೇವದತ್ ಪಡಿಕಲ್ (145*ರನ್, 125 ಎಸೆತ, 9 ಬೌಂಡರಿ, 9 ಸಿಕ್ಸರ್) ಹಾಗೂ ಸಮರ್ಥ್.ಆರ್ (130*ರನ್, 118 ಎಸೆತ, 17 ಬೌಂಡರಿ) ಜೋಡಿಯ ಶತಕದಾಟದ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ 4ನೇ ಜಯದೊಂದಿಗೆ ಎಂಟರಘಟ್ಟಕ್ಕೇರಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಲೀಗ್ ಹಂತದ 5ನೇ ಹಾಗೂ ನಿರ್ಣಾಯಕ ಮುಖಾಮುಖಿಯಲ್ಲಿ ಕರ್ನಾಟಕ ತಂಡ 10 ವಿಕೆಟ್‌ಗಳಿಂದ ರೈಲ್ವೇಸ್ ತಂಡವನ್ನು ಸೋಲಿಸಿತು. ಇದರಿಂದ ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4ನೇ ಜಯ ದಾಖಲಿಸಿದ ಕರ್ನಾಟಕ ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಟಾಸ್ ಜಯಿಸಿದ ಕರ್ನಾಟಕ ತಂಡ ಎದುರಾಳಿ ರೈಲ್ವೇಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ (41ಕ್ಕೆ 3) ಹಾಗೂ ಜೆ.ಸುಚಿತ್ (72ಕ್ಕೆ 2) ಜೋಡಿಯ ಮಾರಕ ದಾಳಿ ನಡುವೆಯೂ ಪ್ರಥಮ್ ಸಿಂಗ್ (129ರನ್, 138 ಎಸೆತ, 12 ಬೌಂಡರಿ, 3 ಸಿಕ್ಸರ್) ಶತಕದಾಟದ ನೆರವಿನಿಂದ ರೈಲ್ವೇಸ್ ತಂಡ 9 ವಿಕೆಟ್‌ಗೆ 284 ರನ್ ಕಲೆಹಾಕಿತು. ಪ್ರತಿಯಾಗಿ ಕರ್ನಾಟಕ ತಂಡ, ಸಮರ್ಥ್ ಹಾಗೂ ಪಡಿಕಲ್ ಜೋಡಿಯ ಭರ್ಜರಿ ಜತೆಯಾಟದ ನೆರವಿನಿಂದ 40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 ರನ್ ಪೇರಿಸಿ ಜಯದ ನಗೆ ಬೀರಿತು.
ರೈಲ್ವೇಸ್: 9 ವಿಕೆಟ್‌ಗೆ 284 (ಪ್ರಥಮ್ ಸಿಂಗ್ 129, ಅರಿಂಧಂ ಘೋಷ್ 36, ಅಮಿತ್ ಮಿಶ್ರಾ 25*, ಶ್ರೇಯಸ್ ಗೋಪಾಲ್ 41ಕ್ಕೆ 3, ಜೆ.ಸುಚಿತ್ 72ಕ್ಕೆ 2, ವೈಶಾಕ್ ವಿಜಯ್‌ಕುಮಾರ್ 59ಕ್ಕೆ 1, ಪ್ರಸಿದ್ಧ್ ಕೃಷ್ಣ 60ಕ್ಕೆ 1, ಮಿಥುನ್ 31ಕ್ಕೆ 1), ಕರ್ನಾಟಕ: 40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 (ಸಮರ್ಥ್.ಆರ್ 130*, ದೇವದತ್ ಪಡಿಕಲ್ 145*).