

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅಂತರ್ಜಾಲದಲ್ಲಿ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ ನಂತರದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮ ಸ್ಥಾನ ಪಡೆದಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ಕೂಡ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡವೆನಿಸಿದೆ.
ಸೆಮ್ರಶ್ ಸಾಫ್ಟ್ವೇರ್ ಸಂಸ್ಥೆಯ ಅಧ್ಯಾಯನದ ಪ್ರಕಾರ, ವಿರಾಟ್ ಕೊಹ್ಲಿ ಈ ವರ್ಷ ಜನವರಿಯಿಂದ ಜೂನ್ವರೆಗೆ ಆನ್ಲೈನ್ನಲ್ಲಿ ಪ್ರತಿ ತಿಂಗಳಿಗೆ 16.2 ಲಕ್ಷ ಸರಾಸರಿಯಲ್ಲಿ ಸರ್ಚ್ಗೆ ಒಳಗಾಗಿದ್ದಾರೆ. ಇದೇ ಅವಧಿಯಲ್ಲಿ ಟೀಮ್ ಇಂಡಿಯಾ ಸರಾಸರಿ 2.4 ಲಕ್ಷ ಬಾರಿ ಸರ್ಚ್ಗೆ ಒಳಗಾಗಿದೆ.
ರೋಹಿತ್ ಶರ್ಮ, ಎಂಎಸ್ ಧೋನಿ, ಜಾರ್ಜ್ ಮೆಕಾಯ್, ಜೋಶ್ ರಿಚರ್ಡ್, ಹಾರ್ದಿಕ್ ಪಾಂಡ್ಯ, ಸಚಿನ್ ತೆಂಡುಲ್ಕರ್, ಕ್ರಿಸ್ ಮ್ಯಾಥ್ಯೂಸ್, ಶ್ರೇಯಸ್ ಅಯ್ಯರ್ ಟಾಪ್ 10 ಪಟ್ಟಿಯಲ್ಲಿರುವ ಇತರ ಕ್ರಿಕೆಟಿಗರಾಗಿದ್ದಾರೆ. ಈ ಕ್ರಿಕೆಟಿಗರು 2020ರ ಜನವರಿಯಿಂದ ಜೂನ್ವರೆಗೆ ಸರಾಸರಿ 9.7, 9.4, 9.1, 7.1, 6.7, 5.4, 4.1 ಮತ್ತು 3.4 ಲಕ್ಷ ಬಾರಿ ಸರ್ಚ್ಗೆ ಒಳಗಾಗಿದ್ದಾರೆ.
ಅತಿ ಹೆಚ್ಚು ಸರ್ಚ್ಗೆ ಒಳಗಾಗಿರುವ ಕ್ರಿಕೆಟ್ ತಂಡಗಳ ಪೈಕಿ ಭಾರತ ತಂಡದ ನಂತರದಲ್ಲಿ ಇಂಗ್ಲೆಂಡ್ (0.66 ಲಕ್ಷ), ಆಸ್ಟ್ರೇಲಿಯಾ (0.33 ಲಕ್ಷ), ವೆಸ್ಟ್ ಇಂಡೀಸ್ (0.29 ಲಕ್ಷ), ಪಾಕಿಸ್ತಾನ (0.23 ಲಕ್ಷ), ದಕ್ಷಿಣ ಆಫ್ರಿಕಾ (0.16 ಲಕ್ಷ), ಬಾಂಗ್ಲಾದೇಶ (0.12 ಲಕ್ಷ), ನ್ಯೂಜಿಲೆಂಡ್ (0.12 ಲಕ್ಷ), ಶ್ರೀಲಂಕಾ (0.09 ಲಕ್ಷ), ಐರ್ಲೆಂಡ್ (0.05 ಲಕ್ಷ), ಅಫ್ಘಾನಿಸ್ತಾನ (0.04 ಲಕ್ಷ) ಮತ್ತು ಜಿಂಬಾಬ್ವೆ (0.03 ಲಕ್ಷ)ತಂಡಗಳಿವೆ.
ಪುರುಷ ಕ್ರಿಕೆಟಿಗರ ಜತೆಗೆ ಮಹಿಳಾ ಕ್ರಿಕೆಟಿಗರು ಕೂಡ ಸಾಕಷ್ಟು ಆನ್ಲೈನ್ನಲ್ಲಿ ಸಾಕಷ್ಟು ಸರ್ಚ್ಗೆ ಒಳಗಾಗಿದ್ದಾರೆ. ಭಾರತದ ಸ್ಮೃತಿ ಮಂದನಾ ಮತ್ತು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಕ್ರಮವಾಗಿ 12 ಮತ್ತು 20ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಅವರು ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಅವರಂಥ ಸ್ಟಾರ್ಗಳನ್ನೇ ಹಿಂದಿಕ್ಕಿದ್ದಾರೆ.