More

    ಐಪಿಎಲ್​ ಪ್ರಾಯೋಜಕತ್ವ ವಹಿಸಲು ಪತಂಜಲಿ ಆಸಕ್ತಿ!

    ನವದೆಹಲಿ: ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್​ ಕಂಪನಿ ವಿವೋ ಹಿಂದೆ ಸರಿದಾಗ ಸಾಮಾಜಿಕ ಜಾಲತಾಣಗಳಲ್ಲಿ, ಬಾಬಾ ರಾಮ್​ದೇವ್​ ಅವರ ಪತಂಜಲಿ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂದು ತಮಾಷೆ ಮಾಡಲಾಗಿತ್ತು. ಇದೀಗ ಇದು ಕೇವಲ ತಮಾಷೆಯಾಗಿ ಉಳಿಯದೆ ನಿಜವಾಗುವ ಸಾಧ್ಯತೆ ಕಾಣಿಸಿದೆ. ಹೌದು, ಐಪಿಎಲ್​ 13ನೇ ಆವೃತ್ತಿಯ ಪ್ರಾಯೋಜಕತ್ವಕ್ಕೆ ಬಿಡ್​ ಸಲ್ಲಿಸಲು ಪತಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ತೋರಿದೆ.

    ಹರಿದ್ವಾರ ಮೂಲದ ಪತಂಜಲಿ ಸಂಸ್ಥೆಯ ವಕ್ತಾರ ಎಸ್​ಕೆ ತಿಜರವಾಲಾ ಅವರು ಐಪಿಎಲ್​ ಪ್ರಾಯೋಜಕತ್ವಕ್ಕೆ ಬಿಡ್​ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಪತಂಜಲಿ ಸಂಸ್ಥೆಯನ್ನು ಜಾಗತಿಕ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಐಪಿಎಲ್​ ಟೂರ್ನಿ ನೆರವಾಗುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ನಿಂದ ವಿವೋ ಔಟ್, ಚೀನಾ ಕಂಪನಿ ಪ್ರಾಯೋಜಕತ್ವ ಕೈಬಿಟ್ಟ ಬಿಸಿಸಿಐ

    ಆದರೆ ಬಿಡ್​ ಸಲ್ಲಿಸುವ ಬಗ್ಗೆ ಪತಂಜಲಿ ಸಂಸ್ಥೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಜರವಾಲಾ ಸ್ಪಷ್ಟಪಡಿಸಿದ್ದಾರೆ. ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಆಗಸ್ಟ್​ 14ರೊಳಗೆ ಬಿಡ್​ ಸಲ್ಲಿಸಬೇಕೆಂದು ಬಿಸಿಸಿಐ ಈಗಾಗಲೆ ತಿಳಿಸಿದೆ.

    ಲಡಾಕ್​ ಗಡಿ ಗಲಾಟೆಯ ಬಳಿಕ ದೇಶದಲ್ಲಿ ಚೀನಾ ವಿರುದ್ಧ ಜನಾಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿವೋ ಕಂಪನಿ ಐಪಿಎಲ್​ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಆದರೆ ಅದು 2020ರ ಆವೃತ್ತಿಯ ಪ್ರಾಯೋಜಕತ್ವವನ್ನು ಮಾತ್ರ ತ್ಯಜಿಸಿದ್ದು, 2021ರಿಂದ ಮತ್ತೆ 3 ವರ್ಷಗಳಿಗೆ ಒಪ್ಪಂದ ಮುಂದುವರಿಸುವ ಸಾಧ್ಯತೆ ಇದೆ. ವಿವೋ ಕಂಪನಿ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕ 440 ಕೋಟಿ ರೂ. ಮೊತ್ತ ಪಾವತಿಸುತ್ತಿತ್ತು.

    ಪತಂಜಲಿ ಸಂಸ್ಥೆ ವಾರ್ಷಿಕ 10,500 ಕೋಟಿ ರೂ. ಮೊತ್ತದ ವ್ಯವಹಾರ ಹೊಂದಿದೆ ಎಂದು ಅಂದಾಜಿಸಲಾಗಿದೆ. ಪತಂಜಲಿ ಸಂಸ್ಥೆ 2018-19ರ ವಿತ್ತ ವರ್ಷದಲ್ಲಿ 8,329 ಕೋಟಿ ರೂ. ಆದಾಯ ಗಳಿಸಿತ್ತು.

    ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ ವಹಿಸಲಿ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts