ಪ್ರಧಾನಿ ಮೋದಿಗೆ ವಿಶೇಷ ಸಂದೇಶ ಕಳುಹಿಸಿದ ಕೊಹ್ಲಿ! ತಿಳಿಸಿದ ವಿಷಯ ಹೀಗಿದೆ

ವಿಜಯವಾಣಿ - 2024-07-04T175827.697
Published on

ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್ಸ್​ ಟೀಮ್ ಇಂಡಿಯಾ ಇಂದು (ಜುಲೈ 04) ಬಿಸಿಸಿಐ ಏರ್ಪಡಿಸಿದ್ದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿಯಿತು. ಗುರುವಾರ ಬೆಳಗ್ಗೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಆಟಗಾರರಿಗೆ ಬಿಸಿಸಿಐ ಅಧಿಕಾರಿಗಳು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಇನ್ನು ಹೊಸ ಜೆರ್ಸಿಯಲ್ಲಿ ಕಂಗೊಳಿಸಿದ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಭೇಟಿ ಮಾಡಿದರು.

ಟಿ20 ವಿಶ್ವಕಪ್​ ಗೆದ್ದ ಚಾಂಪಿಯನ್ ಪಡೆಗೆ ಎರಡು ಸ್ಟಾರ್​ ಸೇರಿಸಿದ ಹೊಸ ಟೀಮ್ ಇಂಡಿಯಾ ಜೆರ್ಸಿಯನ್ನು ಇಂದು ಬಿಸಿಸಿಐ ಆಟಗಾರರಿಗೆ ಹಸ್ತಾಂತರಿಸಿತು. ಈ ನೂತನ ಜೆರ್ಸಿ ಧರಿಸಿದ ಹೆಡ್​ ಕೋಚ್ ರಾಹುಲ್ ದ್ರಾವಿಡ್,​ ನಾಯಕ ರೋಹಿತ್ ಶರ್ಮ, ಉಪನಾಯಕ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಜಸ್ಪೀತ್ ಬುಮ್ರಾ ಸೇರಿದಂತೆ ತಂಡದ ಇತರೆ ಆಟಗಾರರು ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು.

ವಿಶ್ವಕಪ್​ ಗೆದ್ದ ವೀರರನ್ನು ಕೊಂಡಾಡಿದ ಪ್ರಧಾನಿ ಮೋದಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸಹ ಆಟಗಾರರಿಗೆ ಬೆನ್ನುತಟ್ಟಿ, ವಿಶೇಷವಾಗಿ ಅಭಿನಂದಿಸಿದರು. ಈ ಖುಷಿಯನ್ನು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ವ್ಯಕ್ತಪಡಿಸಿದ ರನ್ ಮಷಿನ್​, "ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಎಂತಹ ದೊಡ್ಡ ಗೌರವ. ನಮ್ಮನ್ನು ಪ್ರಧಾನ ಮಂತ್ರಿಗಳ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು ಸರ್" ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net