

ಮುಂಬೈ: ಪ್ರತಿಭಾನ್ವಿತ ಕ್ರಿಕೆಟಿಗನಾಗಿದ್ದರೂ ದುಶ್ಚಟಗಳಿಂದಾಗಿ ವೃತ್ತೀಜಿವನದಲ್ಲಿ ನಿರೀತ ಸಾಧನೆ ತೋರಿಸದೆ ಆರ್ಥಿಕ ಮುಗ್ಗಟ್ಟಿಗೂ ಸಿಲುಕಿದ್ದ ವಿನೋದ್ ಕಾಂಬ್ಳಿ ಈಗ ತೀವ್ರ ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮಾಡಲು 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರು ಮುಂದಾಗಿದ್ದಾರೆ.
"ಕಾಂಬ್ಳಿ ನನಗೆ ಮಗನಿದ್ದಂತೆ. ಅವರ ಆರೈಕೆಗೆ ನಾವು ಸಿದ್ಧರಿದ್ದೇವೆ. ಇದೇ ರೀತಿ ಸಂಕಷ್ಟದಲ್ಲಿರುವ ಇತರ ಕ್ರಿಕೆಟಿಗರಿಗೂ ಸಹಾಯ ಮಾಡುವ ಯೋಜನೆ ಇದೆ' ಎಂದು 83ರ ತಂಡದ ಸದಸ್ಯ ಸುನೀಲ್ ಗಾವಸ್ಕರ್ ಹೇಳಿದ್ದಾರೆ. 83ರ ತಂಡದ ನಾಯಕ ಕಪಿಲ್ ದೇವ್ ಕೂಡ 52 ವರ್ಷದ ಕಾಂಬ್ಳಿ ಸಹಾಯಕ್ಕೆ ಸಿದ್ಧರಿದ್ದೇವೆ. ಆದರೆ ಕಾಂಬ್ಳಿ ಮದ್ಯವ್ಯಸನದಿಂದ ಹೊರಬರಲು ಮೊದಲಿಗೆ ತಾವೇ ಸ್ವತ@ ಮುಂದೆ ಬರಬೇಕೆಂಬ ಷರತ್ತು ಹಾಕಿದ್ದಾರೆ. ಕುಡಿತದ ಚಟದಿಂದ ಹೊರಬರಲು ಕಾಂಬ್ಳಿ ಇದುವರೆಗೆ 14 ಬಾರಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರೂ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಕೋಚ್ ರಮಾಕಾಂತ್ ಆಚ್ರೇಕರ್ ಗೌರವಾರ್ಥ ಸಮಾರಂಭದಲ್ಲಿ ಬಾಲ್ಯದ ಗೆಳೆಯ ಸಚಿನ್ ತೆಂಡುಲ್ಕರ್ ಜತೆ ಕಾಂಬ್ಳಿ ಭಾಗವಹಿಸಿದಾಗ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು.
ಕಳೆದ ಕೆಲವರ್ಷಗಳಿಂದ ಕಾಂಬ್ಳಿ ಭಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಸಿಐನಿಂದ ಮಾಜಿ ಕ್ರಿಕೆಟಿಗರ ನಿವೃತ್ತಿವೇತನವಾಗಿ ಮಾಸಿಕ 30 ಸಾವಿರ ರೂ. ಪಡೆಯುವ ಕಾಂಬ್ಳಿ, ಮುಂಬೈನಲ್ಲಿ 8 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಆದರೆ ಅದರ ಬ್ಯಾಂಕ್ ಸಾಲ ಮತ್ತು ನಿರ್ವಹಣಾ ವೆಚ್ಚವನ್ನು ಸರಿಯಾಗಿ ಪಾವತಿಸದ ಕಾರಣ ಅದರ ಮಾರಾಟ ದುಸ್ತರವೆನಿಸಿದೆ. ಸದ್ಯ ನಿರುದ್ಯೋಗಿಯಾಗಿರುವ ಕಾಂಬ್ಳಿ, ತನ್ನ ಮದ್ಯವ್ಯಸನದಿಂದಾಗಿ ಸಿಕ್ಕ ಕೆಲಸಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾಂಬ್ಳಿ ದುಶ್ಚಟಗಳಿಂದಾಗಿ ಬಾಲ್ಯದ ಗೆಳೆಯ ಸಚಿನ್ ಕೂಡ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ.