ವಿನೇಶ್​ ಪೋಗಟ್​ಗೆ ಇನ್ನೂ ಇದೆ ಪ್ಯಾರಿಸ್​ ಒಲಿಂಪಿಕ್ಸ್ ರಜತ ಪದಕ ಗೆಲ್ಲುವ ಅವಕಾಶ! ಮುಂದಿನ ಕ್ರಮ ಹೀಗಿದೆ...

web vinesh
Published on

ನವದೆಹಲಿ: ಅಧಿಕ ದೇಹತೂಕದಿಂದಾಗಿ ಒಲಿಂಪಿಕ್ಸ್​ ಕುಸ್ತಿ ಫೈನಲ್​ನಿಂದ ಅನರ್ಹಗೊಂಡಿದ್ದ ವಿನೇಶ್​ ಪೋಗಟ್​ ಜಂಟಿ ರಜತ ಪದಕಕ್ಕಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್​) ಬುಧವಾರ ತಿರಸ್ಕರಿಸಿತು. ಇದರ ಹೊರತಾಗಿಯೂ ವಿನೇಶ್​ಗೆ ಒಲಿಂಪಿಕ್ಸ್​ ಪದಕ ಒಲಿಸಿಕೊಳ್ಳುವ ಅವಕಾಶ ಇನ್ನೂ ಜೀವಂತ ಇದೆ ಎನ್ನಲಾಗಿದೆ.

ವಿನೇಶ್​ಗೆ ಪದಕ ನಿರಾಕರಿಸಿ ಸಿಎಎಸ್​ ಬುಧವಾರ ಒಂದು ವಾಕ್ಯದ ತೀರ್ಪನ್ನಷ್ಟೇ ಪ್ರಕಟಿಸಿದೆ. ಅದು ಮುಂದಿನ 10-15 ದಿನಗಳಲ್ಲಿ ಸಕಾರಣ ಸಹಿತ ಸಮಗ್ರ ತೀರ್ಪನ್ನು ಪ್ರಕಟಿಸಲಿದೆ. ನಂತರ ಈ ತೀರ್ಪಿನ ವಿರುದ್ಧ 30 ದಿನಗಳ ಒಳಗಾಗಿ ಸ್ವಿಸ್​ ಫೆಡರಲ್​ ನ್ಯಾಯಮಂಡಳಿಯ ಮೆಟ್ಟಿಲೇರಲು ವಿನೇಶ್​ಗೆ ಅವಕಾಶವಿದೆ. ಒಂದು ವೇಳೆ ಸ್ವಿಸ್​ ಫೆಡರಲ್​ ನ್ಯಾಯಮಂಡಳಿ ವಿನೇಶ್​ ಪರವಾಗಿ ತೀರ್ಪು ನೀಡಿದರೆ ಆಗ ಅವರಿಗೆ ಒಲಿಂಪಿಕ್ಸ್​ ರಜತ ಪದಕ ಒಲಿಸಿಕೊಳ್ಳುವ ಅವಕಾಶವಿರುತ್ತದೆ ಎಂದು ವಿನೇಶ್​ ಅವರ ಪರ ವಕೀಲ ವಿದುಷ್ಪತ್​ ಸಿಂಘಾನಿಯಾ ತಿಳಿಸಿದ್ದಾರೆ.

ಆದರೆ ಅದಕ್ಕೆ ಮುನ್ನ ಸಿಎಎಸ್​ ತನ್ನ ಸಮಗ್ರ ಮಾಹಿತಿಯ ತೀರ್ಪಿನಲ್ಲಿ ಏನು ಹೇಳಲಿದೆ ಎಂಬುದು ಪ್ರಮುಖವಾಗಲಿದೆ. ಪದಕ ನಿರಾಕರಿಸಿದ್ದಕ್ಕೆ ಸಿಎಎಸ್​ ನೀಡುವ ಕಾರಣವೂ ಮಹತ್ವದ್ದಾಗಿರಲಿದೆ. ಅದರಲ್ಲಿ ನ್ಯಾಯಬದ್ಧತೆ ಇರದಿದ್ದರೆ ಆಗ ಅದನ್ನು ಪ್ರಶ್ನಿಸಿ ಸ್ವಿಸ್​ ಫೆಡರಲ್​ ನ್ಯಾಯಮಂಡಳಿ ಮೆಟ್ಟಿಲೇರಲು ಸಾಧ್ಯವಾಗಲಿದೆ. ಸ್ವಿಸ್ ಫೆಡರಲ್​ ನ್ಯಾಯಮಂಡಳಿ ಮೆಟ್ಟಿಲೇರಲು 30 ದಿನಗಳ ಕಾಲಾವಕಾಶವಿದ್ದು, ಅದರ ದಿನಗಣನೆ ಸಮಗ್ರ ತೀರ್ಪು ಬಂದ ನಂತರದಲ್ಲೇ ಶುರುವಾಗಲಿದೆ. ಸಮಗ್ರ ತೀರ್ಪಿನ ಬಳಿಕ ಮತ್ತೋರ್ವ ಹಿರಿಯ ವಕೀಲ ಹರೀಶ್​ ಸಾಳ್ವೆ ಅವರ ಮಾರ್ಗದರ್ಶನದಲ್ಲಿ ಮೇಲ್ಮನವಿ ಸಲ್ಲಿಸುವೆವು ಎಂದು ಸಿಂಘಾನಿಯಾ ವಿವರಿಸಿದ್ದಾರೆ.

ವಿನೇಶ್​ ಮೊದಲ ಪ್ರತಿಕ್ರಿಯೆ

ಸಿಎಎಸ್​ ರಜತ ಮನವಿಯನ್ನು ತಿರಸ್ಕರಿಸಿದ ಬಳಿಕ ವಿನೇಶ್​ ಪೋಗಟ್​, ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮ್ಯಾಟ್​ ಮೇಲೆ ಮಲಗಿ ಮುಖವನ್ನು ಕೈಯಿಂದ ಮುಚ್ಚಿಕೊಂಡಿರುವ ಪೋಸ್ಟ್​ನೊಂದಿಗೆ ವಿನೇಶ್​, ಏನನ್ನೂ ಬರೆದುಕೊಂಡಿರದಿದ್ದರೂ, "ತುಟ್ಟಾ ಹಿ ರೆಹ್​ಗಯಾ' ಎಂಬ ಜನಪ್ರಿಯ ಗಾಯಕ ಬಿ ಪ್ರಾಕ್​ ಅವರ ಪಂಜಾಬಿ ಗೀತೆಯನ್ನು ಹಿನ್ನೆಲೆಯಲ್ಲಿ ಮೊಳಗಿಸಿ, ತನ್ನ ಹೃದಯ ಭಗ್ನವಾಗಿಯೇ ಉಳಿಯಿತು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಹಾಡಿನ ಸಂಪೂರ್ಣ ಸಾಹಿತ್ಯ ಭಗ್ನಪ್ರೇಮಿಯ ವೇದನೆಯಿಂದ ಕೂಡಿದ್ದು, ವಿನೇಶ್​ರ ಹಾಲಿ ಪರಿಸ್ಥಿತಿಗೆ ಅತ್ಯಂತ ಹೊಂದಿಕೆಯಾಗುವಂಥದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net