ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ, ಕುಸ್ತಿ ಪಟು ವಿನೇಶ್​ ಪೋಗಟ್​ಗೆ ಕರೊನಾ

vinesh phogat for web
Published on

ನವದೆಹಲಿ: ಭಾರತದ ಅಗ್ರಮಾನ್ಯ ರೆಸ್ಲರ್​ ವಿನೇಶ್​ ಪೋಗಟ್​ ಅವರಿಗೆ ಕೋವಿಡ್​-19 ಸೋಂಕು ಕಾಣಿಸಿಕೊಂಡಿದೆ. ಪ್ರಸಕ್ತ ವರ್ಷದ ಖೇಲ್​ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದರು. ಏಷ್ಯಾಡ್​ ಹಾಗೂ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ವಿಜೇತರಾಗಿರುವ ವಿನೇಶ್​ ಪೋಗಟ್​, ಹರಿಯಾಣದ ಸೋನೆಪತ್​ ಜಿಲ್ಲೆಯಲ್ಲಿರುವ ಸ್ವಗ್ರಾಮದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಇದೀಗ ಶನಿವಾರ ನಡೆಯಲಿರುವ ವರ್ಚುವಲ್​ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಉಳಿಯಲಿದ್ದಾರೆ.

ನನಗೆ ಕೋವಿಡ್​-19 ಕಾಣಿಸಿಕೊಂಡಿದೆ. ಸೋನೆಪತ್​ನಲ್ಲಿ ಸ್ಯಾಂಪಲ್​ ಪರೀಕ್ಷೆಗೆ ಕೊಟ್ಟಿದ್ದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೂರ್ವಭಾವಿಯಾಗಿ ಡ್ರೆಸ್​ ನೋಡಲು ಹೋಗಿದ್ದ ವೇಳೆ ಪರೀಕ್ಷೆಗೆ ಒಳಪಟ್ಟಿದೆ. ನಾನು ಬೇಗ ಹುಷಾರಾಗಲಿದ್ದೇನೆ. ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಲಿದ್ದೇನೆ ಎಂದು ವಿನೇಶ್​ ತಿಳಿಸಿದ್ದಾರೆ. ಪ್ರಸಕ್ತ ವರ್ಷ ನೀಡಲಾಗುತ್ತಿರುವ ಪ್ರತಿಷ್ಠಿತ ಖೇಲ್​ರತ್ನ ಪುರಸ್ಕಾರಕ್ಕೆ ಆಯ್ಕೆಯಾದ ಐವರು ಕ್ರೀಡಾಪಟುಗಳಲ್ಲಿ ವಿನೇಶ್​ ಕೂಡ ಒಬ್ಬರು.

ಗುರುವಾರವಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಷಟ್ಲರ್​ ಸಾತ್ವಿಕ್​ ಸಾಯಿರಾಜ್​ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪಡೆದಿರುವ ಮೂವರಿಗೆ ಕೋವಿಡ್​-19 ಸೋಂಕು ಕಾಣಿಸಿಕೊಂಡಿತ್ತು. ಶನಿವಾರ ನಡೆಯಲಿರುವ ವರ್ಚುವಲ್​ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ಪ್ರಶಸ್ತಿ ಪುರಸ್ಕೃತ 74 ಮಂದಿ ಪೈಕಿ 65 ಜನ ಹಾಜರಿರಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ವರ್ಚುವಲ್​ನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ರಾಷ್ಟ್ರಪತಿ ಭವನದಿಂದ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಎಲ್ಲ ಸಾಯ್​ ಕೇಂದ್ರಗಳಲ್ಲಿ ಪ್ರಶಸ್ತಿ ಪುರಸ್ಕೃತರು ಹಾಜರಿದ್ದು, ಪ್ರಶಸ್ತಿ ಪಡೆಯಲಿದ್ದಾರೆ. ಕ್ರೀಡಾ ಸಚಿವ ಕಿರಣ್​ ರಿಜಿಜು, ಇನ್ನಿತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಕುಳಿತು ಸಮಾರಂಭ ವೀಸುವರು. ದೂರದರ್ಶನದಲ್ಲಿ ಕಾರ್ಯಕ್ರಮ ನೇರ ಪ್ರಸಾರ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net