

ಪ್ಯಾರಿಸ್: ಎಂಟು ಗಂಟೆಗಳ ಅಂತರದಲ್ಲಿ ಮೂರು ಪಂದ್ಯಗಳಲ್ಲಿ ತನಗಿಂತ ಉನ್ನತ ಶ್ರೇಯಾಂಕಿತರನ್ನು ಎದುರಿಸುವ ಸವಾಲು ಗೆದ್ದ ಅನುಭವಿ ಕುಸ್ತಿಪಟು ವಿನೇಶ್ ಪೋಗಟ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ವಿುಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ. ಒಲಿಂಪಿಕ್ಸ್ ನಲ್ಲಿ ಫೈನಲ್ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿನೇಶ್, ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ 7ನೇ ಕುಸ್ತಿಪಟು ಎಂಬ ಸಾಧನೆ ಮಾಡಿದ್ದಾರೆ. ಪ್ಯಾರಿಸ್ನಲ್ಲಿ ಭಾರತಕ್ಕೆ ತ್ರಿವಳಿ ಕಂಚಿನ ಬಳಿಕ 4ನೇ ಪದಕ ರೂಪದಲ್ಲಿ ಚಿನ್ನ ಅಥವಾ ಬೆಳ್ಳಿ ಒಲಿಯುವುದು ಖಚಿತವೆನಿಸಿದೆ.
ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್ಗೆ ಮುನ್ನಡೆದರು. ಸ್ವರ್ಣ ಪದಕದ ಹೋರಾಟ ಬುಧವಾರ ರಾತ್ರಿ ನಡೆಯಲಿದೆ.
ವಿನೇಶ್ಗೆ ಸ್ಪರ್ಧಿಸಿದ 3ನೇ ಒಲಿಂಪಿಕ್ಸ್ನಲ್ಲಿ ಚೊಚ್ಚಲ ಪದಕ ಒಲಿದಿದೆ. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್ಫೈನಲ್ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು. ಪ್ಯಾರಿಸ್ನಲ್ಲಿ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಅವಕಾಶ ಹೊಂದಿರುವ ವಿನೇಶ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಸಾಕ್ಷಿ ಮಲಿಕ್ ಕಂಚು ಜಯಿಸಿರುವುದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.
8ರ ಘಟ್ಟದಲ್ಲಿ ಹೋರಾಟಯುತ ಜಯ : ಕಳೆದ ಒಂದು ವರ್ಷದಿಂದ ಭಾರತೀಯ ಕುಸ್ತಿ ಒಕ್ಕೂಟ ಹಾಗೂ ಆಯ್ಕೆ ಟ್ರಯಲ್ಸ್ ವಿವಾದಗಳಿಂದ ಸುದ್ದಿಯಾಗಿದ್ದ ವಿನೇಶ್, ಕ್ವಾರ್ಟರ್ಫೈನಲ್ನಲ್ಲಿ 7-5 ಅಂತರದಿಂದ ಯೂಕ್ರೇನ್ನ ಒಕ್ಸಾನ ಲಿವಾಚ್ ಎದುರು ಹೋರಾಟಯುತ ಗೆಲುವು ಒಲಿಸಿಕೊಂಡರು. ವಿನೇಶ್ ತನ್ನ ಪರಿಣಾಮಕಾರಿ ಆಟದೊಂದಿಗೆ ಕ್ವಾರ್ಟರ್ಫೈನಲ್ನಲ್ಲಿ ಪ್ರಾಬಲ್ಯ ಸಾಧಿಸಿದರು. ಆದರೆ ಪಂದ್ಯದ ಅಂತಿಮ 45 ಸೆಕೆಂಡ್ಗಳಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಒಕ್ಸಾನ ಎದುರು ಉತ್ತಮ ಪ್ರದರ್ಶನ ನೀಡಿದ ವಿನೇಶ್, ಅಂತಿಮ 20 ಸೆಕೆಂಡುಗಳಲ್ಲಿ ನಾಲ್ಕು ಪಾಯಿಂಟ್ ಗಳಿಸಿ ಗೆಲುವಿನ ಅಂತರ ಹಿಗ್ಗಿಸಿಕೊಂಡರು.
ವಿವಾದಗಳ ನಂತರ ಸಾಧನೆಯ ಹಾದಿ: ವಿನೇಶ್ ಪೋಗಟ್ ಕಳೆದ ಒಂದೂವರೆ ವರ್ಷದಿಂದ ಕುಸ್ತಿ ಅಖಾಡದ ಹೊರಗೆಯೇ ಹೆಚ್ಚು ಸುದ್ದಿಯಲ್ಲಿದ್ದರು. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಹೋರಾಟದಲ್ಲಿ ಭಾಗವಹಿಸಿದ ಪ್ರಮುಖ ಕುಸ್ತಿಪಟುಗಳಲ್ಲಿ ವಿನೇಶ್ ಕೂಡ ಒಬ್ಬರಾಗಿದ್ದರು. ಹೊಸ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಜತೆಗೂ ಸಂಘರ್ಷ ನಡೆಸಿದ್ದರು. ನಂತರ ಖೇಲ್ರತ್ನ, ಅರ್ಜುನ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಮರಳಿಸಲು ಯತ್ನಿಸಿ, ರಾಷ್ಟ್ರಪತಿ ಭವನದ ಎದುರು ಅವನ್ನು ಇಟ್ಟುಹೋಗಿದ್ದರು. ಈ ವಿವಾದ ತಣ್ಣಗಾದ ಬಳಿಕ ಕುಸ್ತಿ ಅಖಾಡಕ್ಕೆ ಮರಳಿದ ವಿನೇಶ್ ಇಲ್ಲೂ ಪಟ್ಟುಬಿಟ್ಟುಕೊಡದೆ, ಪದಕ ಬೇಟೆಯಾಡಿರುವುದು ವಿಶೇಷವೆನಿಸಿದೆ.
ವಿಶ್ವ ಚಾಂಪಿಯನ್ಗೆ ಶಾಕ್: ಎಂಟರ ಘಟ್ಟಕ್ಕೆ ಮುನ್ನ ನಡೆದ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ವಿನೇಶ್ 3-2ರಿಂದ ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಜಪಾನ್ನ ಯುಯಿ ಸುಸಾಕಿಗೆ ಶಾಕ್ ನೀಡಿದರು. ಇದರೊಂದಿಗೆ ಜಪಾನ್ ಕುಸ್ತಿಪಟುಗಳನ್ನು ಹೊರತುಪಡಿಸಿ ಸುಸಾಕಿಯನ್ನು ಮಣಿಸಿದ ಮೊದಲ ಅಂತಾರಾಷ್ಟ್ರೀಯ ಕುಸ್ತಿಪಟು ಎನಿಸಿದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಎದುರಾಳಿಗೆ ಕನಿಷ್ಠ ಒಂದು ಅಂಕವೂ ನೀಡದೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಸುಸಾಕಿ ಮೊದಲ ಸುತ್ತಿನಲ್ಲಿಯೇ ಆಘಾತ ಕಂಡರು. 25 ವರ್ಷದ ಸುಸಾಕಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ 82-0 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. ಪಂದ್ಯದ ಅಂತಿಮ 17 ಸೆಕೆಂಡ್ಗಳಲ್ಲಿ ಕಾರ್ಯತಂತ್ರ ಬದಲಾಯಿಸಿದ ವಿನೇಶ್, ಐದು ಸೆಕೆಂಡ್ಗಳ ಅಂತರದಲ್ಲಿ 3 ಪಾಯಿಂಟ್ ಗಳಿಸಿ ಹಾಲಿ ಚಾಂಪಿಯನ್ ಅನ್ನು ಕೂಟದಿಂದ ಹೊರದಬ್ಬಿದರು.
ನೀರಜ್ಗೆ ಸತತ 2ನೇ ಚಿನ್ನದ ನಿರೀಕ್ಷೆ: ಟೋಕಿಯೊದಲ್ಲಿ ಚಿನ್ನದ ಪದಕ ಗೆದ್ದು ಭಾರತೀಯರ ಪಾಲಿಗೆ ಚಿನ್ನದ ಹುಡುಗ ಎನಿಸಿದ್ದ ನೀರಜ್ ಚೋಪ್ರಾ ಪ್ಯಾರಿಸ್ನಲ್ಲೂ ಇದನ್ನು ಮರುಕಳಿಸಿ ಅವಳಿ ಒಲಿಂಪಿಕ್ಸ್ ಚಿನ್ನದ ಒಡೆಯರಾಗುವ ನಿರೀಕ್ಷೆ ಬಿತ್ತಿದ್ದಾರೆ. ಮಂಗಳವಾರ ನಡೆದ ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿ ನೀರಜ್ ಮೊದಲ ಎಸೆತದಲ್ಲೇ 89.34 ಮೀ. ದೂರಕ್ಕೆ ಭರ್ಜಿ ಎಸೆದು ನೇರವಾಗಿ ಫೈನಲ್ಗೇರಿದ್ದಲ್ಲದೆ, ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನವನ್ನೂ ಅಲಂಕರಿಸಿದರು. ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್ ಜೆನಾ ಗರಿಷ್ಠ 80.73 ಮೀ. ಭರ್ಜಿ ಎಸೆದು ಫೈನಲ್ಗೇರಲು ವಿಫಲರಾದರು.
1 ವಿನೇಶ್ ಪೋಗಟ್ ಇಂದು ಚಿನ್ನ ಗೆದ್ದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಮತ್ತು ಕುಸ್ತಿಪಟು ಎನಿಸಲಿದ್ದಾರೆ.
2 ವಿನೇಶ್ ಪೋ ಗಟ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ 2ನೇ ಮಹಿಳಾ ಕುಸ್ತಿಪಟು ಎನಿಸಿದ್ದಾರೆ. ಸಾಕ್ಷಿ ಮಲಿಕ್ (2016) ಮೊದಲ ಸಾಧಕಿ.
5 ಭಾರತ 2008ರಿಂದ ಸತತ 5ನೇ ಒಲಿಂಪಿಕ್ಸ್ನಲ್ಲಿ ಕುಸ್ತಿಸ್ಪರ್ಧೆಯಲ್ಲಿ ಕನಿಷ್ಠ 1 ಪದಕ ಗೆದ್ದ ಸಾಧನೆ ಮಾಡಿದೆ.
3 ವಿನೇಶ್ ಪೋಗಟ್ ಒಲಿಂಪಿಕ್ಸ್ ನಲ್ಲಿ ಫೈನಲ್ಗೇರಿದ ಭಾರತದ 3ನೇ ಕುಸ್ತಿಪಟು ಎನಿಸಿದ್ದಾರೆ. ಸುಶೀಲ್ ಕುಮಾರ್ ಮತ್ತು ರವಿ ಕುಮಾರ್ ದಹಿಯಾ ಮೊದಲಿಬ್ಬರು.
7 ವಿನೇಶ್ ಪೋಗಟ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ 7ನೇ ಕುಸ್ತಿಪಟು. ಕೆಡಿ ಜಾಧವ್ (1952 ಕಂಚು), ಸುಶೀಲ್ ಕುಮಾರ್ (2008 ಕಂಚು, 2012 ಬೆಳ್ಳಿ), ಯೋಗೇಶ್ವರ್ ದತ್ (2012 ಕಂಚು), ಸಾಕ್ಷಿ ಮಲಿಕ್ (2016 ಕಂಚು), ರವಿಕುಮಾರ್ ದಹಿಯಾ (2021 ಬೆಳ್ಳಿ) ಹಾಗೂ ಭಜರಂಗ್ ಪೂನಿಯಾ (2021 ಕಂಚು) ಈ ಹಿಂದಿನ ಸಾಧಕರು.