

ವಡೋದರ: ಟೂರ್ನಿಯುದ್ದಕ್ಕೂ ಬಲಿಷ್ಠ ನಿರ್ವಹಣೆ ತೋರುತ್ತ ಬಂದಿರುವ ಮತ್ತು ಭರ್ಜರಿ ಫಾರ್ಮ್ನಲ್ಲಿರುವ ಬ್ಯಾಟರ್ಗಳ ನೇತೃತ್ವ ಹೊಂದಿರುವ ಕರ್ನಾಟಕ ಮತ್ತು ವಿದರ್ಭ ತಂಡಗಳು ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಮಯಾಂಕ್ ಅಗರ್ವಾಲ್ ಬಳಗ 5 ವರ್ಷಗಳ ಬಳಿಕ ಮತ್ತು 5ನೇ ಬಾರಿಗೆ ದೇಶೀಯ ಏಕದಿನ ಕ್ರಿಕೆಟ್ ಚಾಂಪಿಯನ್ ಪಟ್ಟ ಅಲಂಕರಿಸುವ ಹಂಬಲದಲ್ಲಿದೆ.
ಟೂರ್ನಿಯಲ್ಲಿ 5 ಶತಕ ಸಹಿತ 752ರ ಸರಾಸರಿಯಲ್ಲಿ ರನ್ ಸುನಾಮಿ ಹರಿಸಿರುವ ಕನ್ನಡಿಗ ಕರುಣ್ ನಾಯರ್ ಎದುರಾಳಿ ವಿದರ್ಭ ತಂಡದ ಸಾರಥ್ಯ ವಹಿಸಿಕೊಂಡಿದ್ದು, ಅವರನ್ನು ಕಟ್ಟಿಹಾಕುವುದು ಕರ್ನಾಟಕದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇದೇ ಮೊದಲ ಬಾರಿಗೆ ಫೈನಲ್ಗೇರಿರುವ ವಿದರ್ಭ ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸಿನಲ್ಲಿದೆ.
ಕರ್ನಾಟಕ ಈ ಹಿಂದೆ 4 ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಾಗಲೂ ಮಯಾಂಕ್-ಕರುಣ್ ಇಬ್ಬರೂ ತಂಡದಲ್ಲಿದ್ದರು. ಆದರೆ ಶನಿವಾರ ಕೋಟಂಬಿ ಸ್ಟೇಡಿಯಂನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಟ್ರೋಫಿ ಎತ್ತಿಹಿಡಿಯುವ ಅದೃಷ್ಟ ಒಲಿಯಲಿದೆ.
ಬ್ಯಾಟಿಂಗ್ನಲ್ಲಿ ರಾಜ್ಯಕ್ಕೆ ಯುವ ಬ್ಯಾಟರ್ಗಳಾದ ಆರ್. ಸ್ಮರಣ್ (340), ಕೆವಿ ಅನೀಶ್ (417) ಮತ್ತು ವಿಕೆಟ್ ಕೀಪರ್&ಬ್ಯಾಟರ್ ಕೆಎಲ್ ಶ್ರೀಜಿತ್ (225) ಬಲ ತುಂಬಿರುವ ನಡುವೆ ಬೌಲಿಂಗ್ನಲ್ಲಿ ವೇಗಿಗಳಾದ ವಾಸುಕಿ ಕೌಶಿಕ್ (15 ವಿಕೆಟ್), ಎಡಗೈ ವೇಗಿ ಅಭಿಲಾಷ್ ಶೆಟ್ಟಿ (14) ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ (18) ಶಕ್ತಿ ತುಂಬಿದ್ದಾರೆ. ಆಸೀಸ್ ಪ್ರವಾಸದ ನಂತರ ದೇವದತ್ ಪಡಿಕ್ಕಲ್ (188) ಮತ್ತು ವೇಗಿ ಪ್ರಸಿದ್ಧ ಕೃಷ್ಣ ನಾಕೌಟ್ಗೆ ಲಭ್ಯರಾಗಿರುವುದು ಕೂಡ ರಾಜ್ಯದ ಬಲ ಹೆಚ್ಚಿಸಿದೆ.
ಮಯಾಂಕ್-ಕರುಣ್ ಕಾದಾಟ
ಮಾಜಿ ಸಹ-ಆಟಗಾರರಾದ ಕರುಣ್ ನಾಯರ್ (752) ಮತ್ತು ಮಯಾಂಕ್ ಅಗರ್ವಾಲ್ (619) ಟೂರ್ನಿಯಲ್ಲಿ ಅಗ್ರ ಇಬ್ಬರು ಗರಿಷ್ಠ ರನ್ಸ್ಕೋರರ್ಗಳಾಗಿದ್ದು, ಫೈನಲ್ನಲ್ಲೂ ಇವರಿಬ್ಬರು ರನ್ಪ್ರವಾಹ ಮುಂದುವರಿಸುವ ಹಂಬಲದಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಜ್ಯದ ಟಿ20 ಟೂರ್ನಿ ಮಹಾರಾಜ ಟ್ರೋಫಿಯಲ್ಲೂ ಕರುಣ್ (ಮೈಸೂರು ವಾರಿಯರ್ಸ್) ಮತ್ತು ಮಯಾಂಕ್ (ಬೆಂಗಳೂರು ಬ್ಲಾಸ್ಟರ್ಸ್) ನಾಯಕತ್ವದ ತಂಡಗಳೇ ಫೈನಲ್ನಲ್ಲಿ ಮುಖಾಮುಖಿ ಆಗಿದ್ದವು. ಆಗ ಕರುಣ್ ಗೆದ್ದಿದ್ದರೆ, ಈ ಬಾರಿ ರಾಜ್ಯ ತಂಡವನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳುವ ಅವಕಾಶ ಮಯಾಂಕ್ ಮುಂದಿದೆ.
*ಆರಂಭ: ಮಧ್ಯಾಹ್ನ 1.30.
*ನೇರಪ್ರಸಾರ: ಜಿಯೋಸಿನಿಮಾ.
*79: ಕರುಣ್ ನಾಯರ್ ಫೈನಲ್ನಲ್ಲಿ 79 ರನ್ ಗಳಿಸಿದರೆ, ವಿಜಯ್ ಹಜಾರೆ ಟ್ರೋಫಿಯ ಆವೃತ್ತಿಯೊಂದರಲ್ಲಿ (2022&23) ಸರ್ವಾಧಿಕ 830 ರನ್ ಗಳಿಸಿದ ತಮಿಳುನಾಡಿನ ಎನ್. ಜಗದೀಶನ್ ದಾಖಲೆ ಮುರಿಯಲಿದ್ದಾರೆ.