

ವಡೋದರ: ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (102 ರನ್, 99 ಎಸೆ, 15 ಬೌಂಡರಿ, 2 ಸಿಕ್ಸರ್) ಆಸ್ಟ್ರೆಲಿಯಾ ಪ್ರವಾಸದಿಂದ ಮರಳಿದ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಸಿಡಿಸಿದ ಶತಕ ಮತ್ತು ಬೌಲರ್ಗಳ ಸಂಟಿತ ದಾಳಿಯ ಬಲದಿಂದ 4 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ 3ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ ಆತಿಥೇಯ ಬರೋಡ ವಿರುದ್ಧ 5 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು.
ಮೋತಿಬಾಗ್ ಸ್ಟೇಡಿಯಂನಲ್ಲಿ ನಡೆದ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ, 8 ವಿಕೆಟ್ಗೆ 281 ರನ್ ಪೇರಿಸಿತು. ಪ್ರತಿಯಾಗಿ ಬರೋಡ ಒಂದು ಹಂತದಲ್ಲಿ 2 ವಿಕೆಟ್ಗೆ 185 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ ನಂತರ ರಾಜ್ಯದ ಬೌಲರ್ಗಳು ನೀಡಿದ ತಿರುಗೇಟಿನಿಂದಾಗಿ, ಯುವ ಆರಂಭಿಕ ಶಾಶ್ವತ್ ರಾವತ್ (104) ಸಿಡಿಸಿದ ಶತಕದ ನಡುವೆಯೂ 49.5 ಓವರ್ಗಳಲ್ಲಿ 276 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ಶಾಶ್ವತ್ ಮತ್ತು ಅತಿತ್ ಸೇಥ್ (56) 2ನೇ ವಿಕೆಟ್ಗೆ 99 ರನ್ ಸೇರಿಸಿ ಬರೋಡ ಚೇಸಿಂಗ್ಗೆ ಬಲ ತುಂಬಿದ್ದರು. ನಂತರ ನಾಯಕ ಕೃನಾಲ್ ಪಾಂಡ್ಯ ಜತೆಗೆ ಶಾಶ್ವತ್ 3ನೇ ವಿಕೆಟ್ಗೆ ಮತ್ತೆ 55 ರನ್ ಸೇರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ರಾಜ್ಯದ ಬೌಲರ್ಗಳಾದ ವಾಸುಕಿ ಕೌಶಿಕ್ (39ಕ್ಕೆ 2), ಪ್ರಸಿದ್ಧ ಕೃಷ್ಣ (60ಕ್ಕೆ 2), ಅಭಿಲಾಷ್ ಶೆಟ್ಟಿ (70ಕ್ಕೆ 2), ಶ್ರೇಯಸ್ ಗೋಪಾಲ್ (38ಕ್ಕೆ 2) ಬರೋಡಗೆ ಕಡಿವಾಣ ಹಾಕಿದರು. ಕೊನೇ ಓವರ್ನಲ್ಲಿ ಬರೋಡಗೆ 13 ರನ್ ಬೇಕಿತ್ತು. ಆಗ ದಾಳಿಗಿಳಿದ ಎಡಗೈ ವೇಗಿ ಅಭಿಲಾಷ್ ಶೆಟ್ಟಿ 5 ಎಸೆತಗಳಲ್ಲಿ 7 ರನ್ (1, ರನೌಟ್, 1, 4, 1+ರನೌಟ್) ಮಾತ್ರ ನೀಡಿದರೆ, ಬರೋಡ ರನೌಟ್ ಮೂಲಕ ಕೊನೇ 2 ವಿಕೆಟ್ ಕಳೆದುಕೊಂಡು ಮಣಿಯಿತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯದ ಕಾರಣ ಬರೋಡ ಹಿನ್ನಡೆ ಅನುಭವಿಸಿತು.
ಪಡಿಕ್ಕಲ್ ಸೆಂಚುರಿ ಕಮಾಲ್
ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದ ಬಳಿಕ ಉಳಿದ 4 ಪಂದ್ಯಗಳಿಗೆ ಬೆಂಚು ಕಾಯಿಸಿದ್ದರೂ, ಉತ್ತಮ ಲಯದಲ್ಲಿ ಕಾಣಿಸಿದ 24 ವರ್ಷದ ದೇವದತ್ ಪಡಿಕ್ಕಲ್ ಶತಕ ಸಿಡಿಸಿ ಆಸರೆಯಾದರು. ಟೂರ್ನಿಯ ಲೀಗ್ ಹಂತದಲ್ಲಿ 4 ಶತಕ ಸಹಿತ 613 ರನ್ ಸಿಡಿಸಿ ಮಿಂಚಿದ್ದ ನಾಯಕ ಮಯಾಂಕ್ ಅಗರ್ವಾಲ್ (6) ನಾಕೌಟ್ನಲ್ಲಿ ಬೇಗನೆ ಔಟಾದರು. ಆಗ ಜತೆಗೂಡಿದ ಪಡಿಕ್ಕಲ್ ಮತ್ತು ಕೆವಿ ಅನೀಶ್ (52) 2ನೇ ವಿಕೆಟ್ಗೆ 133 ರನ್ ಜತೆಯಾಟವಾಡಿ ಚೇತರಿಕೆ ಒದಗಿಸಿದರು. 94 ಎಸೆತಗಳಲ್ಲಿ ಶತಕ ಪೂರೈಸಿದ ಬಳಿಕ ಪಡಿಕ್ಕಲ್ ಯುವ ವೇಗಿ ರಾಜ್ ಲಿಂಬಾನಿ ಎಸೆತದಲ್ಲಿ ಔಟಾದರು. ನಂತರದಲ್ಲಿ ಆರ್. ಸ್ಮರಣ್ (28), ಕೆಎಲ್ ಶ್ರೀಜಿತ್ (28), ಅಭಿನವ್ ಮನೋಹರ್ (21) ಉಪಯುಕ್ತ ಕೊಡುಗೆ ನೀಡಿ ಮೊತ್ತ ಏರಿಸಿದರು. ಕೊನೆಯಲ್ಲಿ 51 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡ ಕರ್ನಾಟಕ 300ರ ಗಡಿ ದಾಟುವ ಆಸೆ ಕೈಚೆಲ್ಲಿತು.
ಕರ್ನಾಟಕ: 8 ವಿಕೆಟ್ಗೆ 281 (ಮಯಾಂಕ್ 6, ಪಡಿಕ್ಕಲ್ 102, ಅನೀಶ್ 52, ಸ್ಮರಣ್ 28, ಶ್ರೀಜಿತ್ 28, ಅಭಿನವ್ 21, ಹಾರ್ದಿಕ್ ರಾಜ್ 0, ಶ್ರೇಯಸ್ 16, ಪ್ರಸಿದ್ಧ 12*, ಲಿಂಬಾನಿ 47ಕ್ಕೆ 3, ಸೇಥ್ 41ಕ್ಕೆ 3, ಕೃನಾಲ್ 42ಕ್ಕೆ 1). ಬರೋಡ: 49.5 ಓವರ್ಗಳಲ್ಲಿ 276 (ಶಾಶ್ವತ್ ರಾವತ್ 104, ಅತಿತ್ ಸೇಥ್ 56, ಕೃನಾಲ್ ಪಾಂಡ್ಯ 30, ವಿಷ್ಣು ಸೋಲಂಕಿ 1, ಭಾನು ಪುನಿಯಾ 22, ಲಿಂಬಾನಿ 10, ಭಾರ್ಗವ್ ಭಟ್ 20, ವಿ ಕೌಶಿಕ್ 39ಕ್ಕೆ 2, ಪ್ರಸಿದ್ಧ ಕೃಷ್ಣ 60ಕ್ಕೆ 2, ಅಭಿಲಾಷ್ ಶೆಟ್ಟಿ 70ಕ್ಕೆ 2, ಶ್ರೇಯಸ್ 38ಕ್ಕೆ 2). ಪಂದ್ಯಶ್ರೇಷ್ಠ: ದೇವದತ್ ಪಡಿಕ್ಕಲ್
*9: ಲಿಸ್ಟ್ ಎ ಏಕದಿನ ಕ್ರಿಕೆಟ್ನಲ್ಲಿ ಆಡಿದ 30ನೇ ಇನಿಂಗ್ಸ್ನಲ್ಲಿ ದೇವದತ್ ಪಡಿಕ್ಕಲ್ 9ನೇ ಶತಕ ಸಿಡಿಸಿದರು. 30 ಇನಿಂಗ್ಸ್ಗಳಲ್ಲಿ ಒಟ್ಟಾರೆ 20ನೇ ಬಾರಿ ಅವರು 50 ಪ್ಲಸ್ ರನ್ ಬಾರಿಸಿದರು.
ಇಂದಿನ ಕ್ವಾರ್ಟರ್ಫೈನಲ್ಸ್
ಗುಜರಾತ್-ಹರಿಯಾಣ
ವಿದರ್ಭ-ರಾಜಸ್ಥಾನ
ಆರಂಭ: ಬೆಳಗ್ಗೆ 9.00
ನೇರಪ್ರಸಾರ: ಜಿಯೋಸಿನಿಮಾ
ಹರಿಯಾಣ/ಗುಜರಾತ್ ಸೆಮೀಸ್ ಎದುರಾಳಿ
ಕರ್ನಾಟಕ ತಂಡ ಇನ್ನು ಜನವರಿ 15ರಂದು ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ಅಥವಾ ಗುಜರಾತ್ ತಂಡವನ್ನು ಎದುರಿಸಲಿದೆ. 2ನೇ ಸೆಮಿಫೈನಲ್ ಜ.16ಕ್ಕೆ ನಡೆಯಲಿದೆ. ಜ.18ಕ್ಕೆ ಫೈನಲ್ ನಿಗದಿಯಾಗಿದೆ.
3: ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 3ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಹಿಂದಿನ 2 ಬಾರಿ ಸೆಮೀಸ್ನಲ್ಲೇ ಹೊರಬಿದ್ದಿತ್ತು.
ಅರ್ಷದೀಪ್ ಆಲ್ರೌಂಡ್ ಆಟ ವ್ಯರ್ಥ, ಪಂಜಾಬ್ಗೆ ಸೋಲು
ಟೀಮ್ ಇಂಡಿಯಾ ಆಟಗಾರ ಅರ್ಷದೀಪ್ ಸಿಂಗ್ (56ಕ್ಕೆ 3 ವಿಕೆಟ್, 49 ರನ್, 39 ಎಸೆತ, 3 ಬೌಂಡರಿ, 3 ಸಿಕ್ಸರ್) ಆಲ್ರೌಂಡ್ ನಿರ್ವಹಣೆಯ ನಡುವೆಯೂ ಪಂಜಾಬ್ ತಂಡ ದಿನದ ಮತ್ತೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಎದುರು 70 ರನ್ಗಳಿಂದ ಪರಾಭವಗೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಋತುರಾಜ್ ಗಾಯಕ್ವಾಡ್ ಸಾರಥ್ಯದ ಮಹಾರಾಷ್ಟ್ರ, ಅರ್ಶಿನ್ ಕುಲಕರ್ಣಿ (107) ಶತಕದ ನೆರವಿನಿಂದ 6 ವಿಕೆಟ್ಗೆ 275 ರನ್ ಪೇರಿಸಿತು. ಪ್ರತಿಯಾಗಿ ಮುಕೇಶ್ ಚೌಧರಿ (44ಕ್ಕೆ 3) ದಾಳಿಗೆ ಕುಸಿದ ಪಂಜಾಬ್, 123 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಆಗ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅರ್ಷದೀಪ್ ಬಿರುಸಿನ ಆಟವಾಡಿದರೂ, ಅಂತಿಮವಾಗಿ ಪಂಜಾಬ್ 44.4 ಓವರ್ಗಳಲ್ಲಿ 205 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು.