ರಾಜ್ಕೋಟ್: ರನ್ಬರ ಎದುರಿಸುತ್ತಿದ್ದ ಶೆಫಾಲಿ ವರ್ಮ ಸ್ಥಾನದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದ ದೆಹಲಿಯ 24 ವರ್ಷದ ಪ್ರತಿಕಾ ರಾವಲ್, ಆಡಿದ ಮೊದಲ 4 ಪಂದ್ಯಗಳಲ್ಲೇ 2 ಅರ್ಧಶತಕ ಸಹಿತ 223 ರನ್ ಬಾರಿಸಿ ಮನಗೆದ್ದಿದ್ದಾರೆ. ಯುವ ಬ್ಯಾಟುಗಾರ್ತಿ ಪ್ರತೀಕಾ ರಾವಲ್ (89 ರನ್, 96 ಎಸೆತ, 10 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಐರ್ಲೆಂಡ್ ವಿರುದ್ಧ ಮಹಿಳೆಯರ ಏಕದಿನ ಸರಣಿಯಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ 6 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದೆ. 2025ರಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಶುಭಾರಂಭ ಕಂಡಿರುವ ಸ್ಮೃತಿ ಮಂದನಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುವ ಪ್ರತಿಕಾ, ಮನೋವಿಜ್ಞಾನ ವಿದ್ಯಾರ್ಥಿನಿಯಾಗಿದ್ದಾರೆ. ಮನಃಶಾಸ್ತ್ರ ತನಗೆ ಕ್ರಿಕೆಟ್ನಲ್ಲೂ ನೆರವಾಗಿದೆ. ಮಾನಸಿಕವಾಗಿ ಆಟದ ಪ್ರಕ್ರಿಯೆಯನ್ನು ಅರಿತುಕೊಳ್ಳಲು ಅನುಕೂಲಕರವೆನಿಸಿದೆ ಎಂದು ಪ್ರತೀಕಾ ತನ್ನ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಪ್ರತೀಕಾ ಕ್ರಿಕೆಟ್ ಜತೆಗೆ ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. 12ನೇ ತರಗತಿಯಲ್ಲಿದ್ದಾಗ 19 ವಯೋಮಿತಿ ತಂಡದಿಂದ ಹೊರಬಿದ್ದಿದ್ದ ಪ್ರತಿಕಾ, ನಂತರದಲ್ಲಿ ಕ್ರಿಕೆಟ್ ಜತೆಗೆ ಓದಿನ ಕಡೆಗೂ ಹೆಚ್ಚಿನ ಗಮನಹರಿಸುವ ಸಂಕಲ್ಪ ಮಾಡಿ ಸಿಬಿಎಸ್ಇಯಲ್ಲಿ ಶೇ. 92.5 ಅಂಕ ಗಳಿಸಿದ್ದರು. 3ನೇ ತರಗತಿಯಲ್ಲಿದ್ದಾಗಲೇ ಕ್ರಿಕೆಟ್ ಆಡಲಾರಂಭಿಸಿದ್ದ ಪ್ರತಿಕಾ, 9ನೇ ತರಗತಿಯಲ್ಲಿದ್ದಾಗ ಮನೋವಿಜ್ಞಾನವನ್ನು ಕಲಿತು ಮಾನವನ ವರ್ತನೆಯ ಅಧ್ಯಾಯನ ಮಾಡಲು ನಿರ್ಧರಿಸಿದ್ದರು. ಅವರ ತಂದೆ ಪ್ರದಿಪ್ ರಾವಲ್, ಬಿಸಿಸಿಐ ಲೆವೆಲ್-1 ಮಾನ್ಯತೆಯ ದೇಶೀಯ ಕ್ರಿಕೆಟ್ ಅಂಪೈರ್ ಆಗಿದ್ದಾರೆ. ಶಾಲಾ ದಿನಗಳಲ್ಲಿ ಬಾಸ್ಕೆಟ್ಬಾಲ್ ಆಟಗಾರ್ತಿಯೂ ಆಗಿದ್ದ ಪ್ರತಿಕಾ, 2019ರ 64ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ದೆಹಲಿ ಪರ ಚಿನ್ನದ ಪದಕ ಗೆದ್ದಿದ್ದರು.
ಖೋಖೋ ವಿಶ್ವಕಪ್ಗೆ ಕರ್ನಾಟಕದ ಗೌತಮ್, ಚೈತ್ರಾ ಆಯ್ಕೆ; ಪ್ರತಿಕ್, ಪ್ರಿಯಾಂಕಾಗೆ ಭಾರತ ತಂಡದ ಸಾರಥ್ಯ