

Vignesh Puthur: ಇಂದು (ಮಾ.29) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ 20 ಓವರ್ ಅಂತ್ಯಕ್ಕೆ 196 ರನ್ ಕಲೆಹಾಕಿದೆ. 8 ವಿಕೆಟ್ ಕಳೆದುಕೊಂಡ ಜಿಟಿ, ಎಂಗೆ 197 ರನ್ಗಳ ಗುರಿಯನ್ನು ಬೆನ್ನಟ್ಟುವಂತೆ ಸವಾಲ್ ಹಾಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ಗುಜರಾತ್ ಪಡೆಗೆ ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಿದ ಶುಭಮನ್ ಗಿಲ್ ಪಡೆ, ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಪರದಾಡಿತು. ಸಾಯಿ ಸುದರ್ಶನ್ (63), ಗಿಲ್ (38) ಮತ್ತು ಜಾಸ್ ಬಟ್ಲರ್ (39) ಅವರ ನೆರವಿನಿಂದ ತಂಡ 190ರ ಗಡಿದಾಟಲು ಸಾಧ್ಯವಾಯಿತು. ಇನ್ನು ಈ ಪಂದ್ಯದಲ್ಲಿ ಕಳೆದ ಬಾರಿ ಎಂಐ ಪರ ಮಿಂಚಿದ ಯುವ ಕ್ರಿಕೆಟಿಗ ವಿಘ್ನೇಶ್ ಪುತ್ತೂರು ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಶರ್ಮ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ವಿಘ್ನೇಶ್, ಚೆನ್ನೈ ಪಡೆಯ ಸ್ಟಾರ್ ಬ್ಯಾಟರ್ಗಳ ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಬರೋಬ್ಬರಿ ಮೂರು ವಿಕೆಟ್ ಪಡೆದು ಮಿಂಚಿದ ಯುವ ವೇಗಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾರನ್ನು ಪೆವಿಲಿಯನ್ಗೆ ಕಳಿಸುವ ಕೆಲಸ ಮಾಡಿದರು. ಇದು ಎಂಐ ಫ್ಯಾನ್ಸ್ ಮಾತ್ರವಲ್ಲದೇ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು.
ವಿಘ್ನೇಶ್ ಪ್ರದರ್ಶನಕ್ಕೆ ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದ ಅಭಿಮಾನಿಗಳು, ಇಂದಿನ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಿಂದ ಅವರನ್ನು ಕೈಬಿಟ್ಟಿದ್ದಕ್ಕೆ ಮ್ಯಾನೇಜ್ಮೆಂಟ್ ವಿರುದ್ಧ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಆಗಮಿಸುತ್ತಿದ್ದಂತೆ ವಿಘ್ನೇಶ್ರನ್ನು ಎರಡನೇ ಪಂದ್ಯದಿಂದ ಕೈಬಿಡಲಾಗಿದೆ. ಇದು ಒಪ್ಪುವಂತದ್ದಲ್ಲ. ಕಳೆದ ಮ್ಯಾಚ್ನಲ್ಲಿ ಅವರು ಸಿಎಸ್ಕೆ ಪರ ಮಿಂಚಿದ್ದಾರೆ. ಇಂದಿನ ಪಂದ್ಯದಲ್ಲಿಯೂ ಅವರಿಗೆ ಅವಕಾಶ ಕೊಡಬೇಕಿತ್ತು ಎಂದೆಲ್ಲ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).