

ನವದೆಹಲಿ: ಇಷ್ಟು ದಿನ ಮೊಹಮ್ಮದ್ ಶಮಿ ಹೆಸರು ಹೇಳಿದರೆ ಸಾಕು ಉರಿದು ಬೀಳುತ್ತಿದ್ದ ಮಾಜಿ ಪತ್ನಿ ಹಸಿನಾ ಜಹಾನ್, ಇದೀಗ ಶಮಿಯ ಮೇಲೆ ಮೃಧು ಧೋರಣೆ ತಾಳಿದಂತಿದೆ. ಭಾರತಕ್ಕೆ ಶುಭಕೋರುತ್ತೇನೆ ಹೊರತಿ ಶಮಿಗಲ್ಲ, ಒಳ್ಳೆಯ ಆಟಗಾರನಂತೆ ಒಳ್ಳೆಯ ವ್ಯಕ್ತಿ ಆಗಿರಬೇಕಿತ್ತು, ಆತನಿಗೆ ದುರಾಸೆ ಇದೆ ಮತ್ತು ಕೊಳಕು ಮನಸಿನ ವ್ಯಕ್ತಿ ಎಂದೆಲ್ಲ ವಾಗ್ದಾಳಿ ನಡೆಸಿದ್ದ ಹಸಿನಾ ಇದೀಗ ದಿಢೀರ್ ಪರಿಶುದ್ಧ ಪ್ರೀತಿ ಎನ್ನುತ್ತಿರುವುದು ಬಹಳ ವಿಚಿತ್ರವಾಗಿದೆ.
ಹೌದು, ಶಮಿ ಮೇಲೆ ಹಸಿನಾಗೆ ಮತ್ತೆ ಪ್ರೀತಿ ಬಂದಂತೆ ಕಾಣುತ್ತಿದೆ. ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಮೊಹಮ್ಮದ್ ಶಮಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್ನಲ್ಲಿ ಮಿಂಚಿರುವ ಶಮಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ಮೊದಲ ಸ್ಥಾನದಲ್ಲಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನ. 15ರಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 57 ರನ್ ನೀಡಿ ಬರೋಬ್ಬರಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ನಿರ್ಣಾಯಕ ಬೌಲರ್ ಆಗಿ ಶಮಿ ಹೊರಹೊಮ್ಮಿದ್ದಾರೆ.
ಇದುವರೆಗೂ ಶಮಿ ವಿರುದ್ಧ ಹರಿಹಾಯುತ್ತಿದ್ದ ಹಸಿನಾ ಇದೀಗ ಶಮಿಗೆ ಶುಭಕೋರಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಂನಲ್ಲಿ ಹಸಿನಾ ಪೋಸ್ಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋಗೆ ಹಸಿನಾ ಪರಿಶುದ್ಧ ಪ್ರೀತಿ ಎಂಬ ಅಡಿಬರಹ ನೀಡಿದ್ದಾರೆ. ವಿಡಿಯೋದಲ್ಲಿ "ತೇರೇ ನಾಮ್ ಸೆ ಹೈ ಮುಜ್ಕೋ ದುನಿಯಾ ವಾಲೇ ಜಾನೇಂಗೆ... ತೇರೀ ಸೂರತ್ ದೇಖ್ಕೆ ಅಬ್ಬ್ ಲೋಗ್ ಮುಜೆ ಪೆಹಚಾನೇಂಗೆ" ಎಂದು ಹಿಂದಿ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಅರ್ಥ ಏನೆಂದರೆ, ನಿಮ್ಮ ಹೆಸರಿನಿಂದ ಮಾತ್ರ ಜಗತ್ತು ನನ್ನನ್ನು ತಿಳಿದಿದೆ. ನಿನ್ನ ಮುಖ ನೋಡಿದಾಗಲೇ ಜನ ನನ್ನನ್ನು ಗುರುತಿಸುತ್ತಾರೆ ಎಂದು ಅರ್ಥ ಸೂಚಿಸುತ್ತದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹಸಿನಾ ತಮ್ಮ ಮಾಜಿ ಪತಿ ಶಮಿ ಅವರಿಗೆ ಶುಭಕೋರಿದ್ದಾರೆ. ವಿಶ್ವಕಪ್ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಶಮಿರ ಪರ ಹಸಿನಾ ಮನಸ್ಸು ಮತ್ತೆ ಮಿಡಿಯುತ್ತಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ನ. 2ರಂದು ಶ್ರೀಲಂಕಾ ವಿರುದ್ಧ ಮಿಂಚಿನ ಬೌಲಿಂಗ್ ದಾಳಿ ಮಾಡಿದ್ದ ಶಮಿ, ಕೇವಲ 18 ರನ್ಗೆ 5 ವಿಕೆಟ್ ಕಬಳಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದ ಹಸಿನಾ, ಶಮಿ ಚೆನ್ನಾಗಿ ಆಡಿದರೆ, ಭಾರತ ತಂಡದಲ್ಲಿ ಉಳಿದರೆ ಮತ್ತು ಚೆನ್ನಾಗಿ ಸಂಪಾದನೆ ಮಾಡಿದರೆ, ಅದು ನನ್ನ ಮತ್ತು ನನ್ನ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿ ಇರಿಸುತ್ತದೆ. ನಾನು ಭಾರತ ತಂಡಕ್ಕೆ ಶುಭ ಕೋರುತ್ತೇನೆ ಹೊರತು ಶಮಿಗೆ ಒಳ್ಳೆಯದಾಗಲಿ ಎಂದು ಬಯಸುವುದಿಲ್ಲ. ಆತ ಚೆನ್ನಾಗಿ ಆಡಿದ್ದಷ್ಟೂ ನನಗೆ ಲಾಭ, ಆತನ ಯಶಸ್ಸೇ ನನಗೆ ಬಂಡವಾಳ ಎನ್ನುವ ಅರ್ಥದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು.
ಇದಾದ ಬಳಿಕ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶಮಿ, 57 ರನ್ಗೆ 7 ವಿಕೆಟ್ ಪಡೆದಿದ್ದಕ್ಕೆ ಮತ್ತೆ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಹಸಿನಾ, ಒಳ್ಳೆಯ ಆಟಗಾರನಂತೆ ಒಳ್ಳೆಯ ವ್ಯಕ್ತಿಯಾಗಿದ್ದರೆ ನಾವು ಒಳ್ಳೆಯ ಜೀವನವನ್ನು ಸಾಗಿಸಬಹುದಿತ್ತು. ಒಳ್ಳೆಯ ವ್ಯಕ್ತಿವಾಗಿದ್ದರೆ, ನನ್ನ ಮಗಳು, ನನ್ನ ಪತಿ ಮತ್ತು ನಾನು ಸಂತೋಷದ ಜೀವನ ನಡೆಸಬಹುದಿತ್ತು. ಅವರೊಬ್ಬ ಉತ್ತಮ ಆಟಗಾರ ಮಾತ್ರವಲ್ಲದೆ ಉತ್ತಮ ಪತಿ ಮತ್ತು ಉತ್ತಮ ತಂದೆಯೂ ಆಗಿದ್ದರೆ ಅದು ತುಂಬಾ ಗೌರವದ ವಿಷಯವಾಗಿರುತ್ತಿತ್ತು. ಆದರೆ, ಶಮಿಯ ತಪ್ಪುಗಳಿಂದ, ದುರಾಸೆಗಳಿಂದ ಮತ್ತು ಕೊಳಕು ಮನಸ್ಸಿನಿಂದಾಗಿ ನಾವು ಮೂವರು ಪರಿಣಾಮ ಎದುರಿಸುತ್ತಿದ್ದೇವೆ. ಆದಾಗ್ಯೂ ತನ್ನ ನಕಾರಾತ್ಮಕ ಅಂಶಗಳನ್ನು ಹಣದ ಮೂಲಕ ಮರೆಮಾಡಲು ಶಮಿ ಪ್ರಯತ್ನಿಸುತ್ತಿದ್ದಾರೆ ಎಂದು ಹಸಿನಾ ಟೀಕಾ ಪ್ರಹಾರ ನಡೆಸಿದ್ದರು. ಆದರೆ, ಹಸಿನಾಗೆ ಶಮಿ ಮೇಲಿನ ಕೋಪ ಕಡಿಮೆಯಾದಂತೆ ಕಾಣುತ್ತದೆ. ಹೀಗಾಗಿ ಪರೋಕ್ಷವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವಂತೆ ತೋರುತ್ತದೆ.
ದಾಂಪತ್ಯ ಕಲಹ
ಅಂದಹಾಗೆ ಮೊಹಮ್ಮದ್ ಶಮಿ 2014ರ ಜೂನ್ 6ರಂದು ಹಸಿನ್ ಜಹಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 4 ವರ್ಷಗಳ ನಂತರ ಶಮಿಗೆ ಪತ್ನಿ ಡಿವೋರ್ಸ್ ನೀಡಿದ್ದಾರೆ. ಜಹಾನ್ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.
ಶಮಿ ವಿರುದ್ಧ ಜಹಾನ್, ಜಾಧವಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್, ಮಾಜಿ ಪತಿಯ ಕಾಲ್ ರೆಕಾರ್ಡಿಂಗ್ಸ್ ಸಹ ಶೇರ್ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಟಾರ್ ಬೌಲರ್ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)