

ನವದೆಹಲಿ: ಅಂತಾರಾಷ್ಟ್ರೀಯ ಯುವ ಶೂಟರ್ ಮನು ಭಾಕರ್ ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಸಮಯವನ್ನು ಗ್ರಾಮೀಣ ಭಾಗದ ಜೀವನದಲ್ಲೇ ಕಳೆಯುತ್ತಿದ್ದಾರೆ. ಈಗಾಗಲೆ ಕುದುರೆ ಸವಾರಿ, ಟ್ರ್ಯಾಕ್ಟರ್ ಓಡಿಸುವ ಮತ್ತು ವಿವಿಧ ಕೃಷಿ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಸುದ್ದಿಯಾಗಿದ್ದ ಹರಿಯಾಣದ ಜಾಜ್ಜರ್ನ 18 ವರ್ಷದ ಶೂಟರ್ ಮನು ಭಾಕರ್, ಹಸುವಿನ ಹಾಲು ಕರೆದಿರುವ ವಿಡಿಯೋ ಈಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬಂದಿರುವ ಮನು ಭಾಕರ್, ಇತ್ತೀಚೆಗೆ ಹಸುವಿನ ಹಾಲು ಕರೆಯುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.
'ದೇಶ್ ಮೈ ದೇಶ್ ಹರಿಯಾಣ, ಜಿತ್ ಮಿಲ್ಕ್ ದಹಿ ಖೂನಾ. ಜೈ ಜವಾನ್ ಜೈ ಕಿಸಾನ್' ಎಂದು ಬರೆದುಕೊಂಡಿರುವ ಮನು ಭಾಕರ್, ಚಿಕ್ಕಮ್ಮ ನೀಲಮ್ ಅವರಿಂದ ಹಸುವಿನ ಹಾಲು ಕರೆಯುವುದನ್ನು ಕಲಿತುಕೊಂಡಿದ್ದಾರೆ ಎನ್ನಲಾಗಿದೆ. ಮನು ಭಾಕರ್ ಹಾಲು ಕರೆಯುತ್ತಿರುವ ವಿಡಿಯೋವನ್ನು ಈಗಾಗಲೆ ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 18 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.