

ನವದೆಹಲಿ: ಟೀಮ್ ಇಂಡಿಯಾದ ಯಂಗ್ ಸೂಪರ್ ಸ್ಟಾರ್ ರಿಂಕು ಸಿಂಗ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಇತ್ತೀಚೆಗಷ್ಟೇ ಐಪಿಎಲ್ನಲ್ಲಿ ಬೆಸ್ಟ್ ಫಿನಿಶರ್ ಎಂಬ ಟ್ಯಾಗ್ ಪಡೆದಿದ್ದಾರೆ. ಕೊನೆಯ ಓವರ್‌ಗಳಲ್ಲಿ ಆತ ಸೃಷ್ಟಿಸುವ ವಿನಾಶ ಅಷ್ಟಿಷ್ಟಲ್ಲ. ರಿಂಕುವಿನ ಸ್ಫೋಟಕ ಇನ್ನಿಂಗ್ಸ್ ಎದುರಾಳಿ ತಂಡದ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನೇ ಅಳಿಸಿಬಿಡುತ್ತದೆ.
ಐಪಿಎಲ್ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ರಿಂಕು ಸಿಂಗ್, ತನ್ನ ಪ್ರತಿಭೆಯಿಂದ ಭಾರತದ ರಾಷ್ಟ್ರೀಯ ತಂಡವನ್ನೂ ಪ್ರವೇಶಿಸಿದ್ದಾರೆ. ರಿಂಕು ಸಿಂಗ್ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಧೈರ್ಯವನ್ನು ತೋರಿಸುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ವಿಫಲರಾದರೂ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದರು. ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಬಿರುಸಿನ ಆಟವಾಡಿದರು.
ಈ ಇನ್ನಿಂಗ್ಸ್‌ನಲ್ಲಿ ರಿಂಕು ಸಿಂಗ್ ಆಡಿದ ಒಂದು ದೊಡ್ಡ ಹೊಡೆತದ ಬಗ್ಗೆ ನಾವು ಮಾತನಾಡಬೇಕಾಗಿದೆ. ರಿಂಕು ಸಿಂಗ್ ದೊಡ್ಡ ಸಿಕ್ಸರ್‌ಗಳನ್ನು ಲೀಲಾಜಾಲವಾಗಿ ಬಾರಿಸುತ್ತಾರೆ. ಮೊದಲ ಪಂದ್ಯದ ಸೋಲಿನಿಂದ ತೀವ್ರ ನಿರಾಸೆಗೊಂಡಿದ್ದ ರಿಂಕು, ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಅದರಲ್ಲಿ ಒಂದು ಸಿಕ್ಸರ್ 104 ಮೀಟರ್ ದೂರ ಸಾಗಿತು. ಕ್ರೀಡಾಂಗಣದ ಆಚೆಗೆ ಹೋಗಿ ಮರಗಳ ಮೇಲೆ ಬಿದ್ದಿತು. ಆ ಸಿಕ್ಸರ್ ನೋಡಿ ಕ್ರಿಕೆಟ್ ಅಭಿಮಾನಿಗಳು ಇದೇ ರಿಂಕು ಪವರ್ ಎನ್ನುತ್ತಿದ್ದಾರೆ.
ಇನಿಂಗ್ಸ್ನ 19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜಿಂಬಾಬ್ವೆ ಬೌಲರ್ ಮುಜರ್ಬಾನಿ ಓವರ್ನಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು. ಬಾಲ್ ಗ್ರೌಂಡ್ ಹೊರಬಂದಿರುವುದು ಗಮನಾರ್ಹ. ಅದೇ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಮತ್ತೊಂದು ಸಿಕ್ಸರ್ ಬಾರಿಸಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಶುಭಮನ್ ಗಿಲ್ ಕೇವಲ 2 ರನ್ ಗಳಿಸಿದರೂ ಅಭಿಷೇಕ್ ಶತಕದ ಜೊತೆಗೆ ಒನ್ ಡೌನ್‌ನಲ್ಲಿ ಬಂದ ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಹಾಗೂ ಡೈನಾಮಿಟ್ ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದ್ದರಿಂದ ಟೀಮ್ ಇಂಡಿಯಾ ಬೃಹತ್ ಸ್ಕೋರ್ ದಾಖಲಿಸಿತು. ಬಳಿಕ ಭಾರತದ ಬೌಲರ್‌ಗಳು ಜಿಂಬಾಬ್ವೆಯನ್ನು 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿದರು.
ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳಲ್ಲಿ ವೆಸ್ಲಿ ಮಾಧವೆರೆ 43 ಮತ್ತು ಲ್ಯೂಕ್ ಜೊಂಗ್ವೆ 33 ರನ್‌ಗಳೊಂದಿಗೆ ಮಿಂಚಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು. ಟೀಮ್ ಇಂಡಿಯಾದ ಬೌಲರ್ಗಳ ಪೈಕಿ ಮುಖೇಶ್ ಕುಮಾರ್ 3, ಅವೇಶ್ ಖಾನ್ 3 ಹಾಗೂ ರವಿ ಬಿಷ್ಣೋಯ್ 2 ವಿಕೆಟ್ ಪಡೆದು ಮಿಂಚಿದರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಒಟ್ಟಾರೆ, ಅಭಿಷೇಕ್ ಶರ್ಮ ಅವರ ಪ್ರದರ್ಶನದಿಂದ ಟೀಂ ಇಂಡಿಯಾ 1-1 ರಿಂದ ಸರಣಿಯನ್ನು ಸಮಬಲಗೊಳಿಸಿದೆ ಮತ್ತು ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. (ಏಜೆನ್ಸೀಸ್)