ಟೀಮ್​ ಇಂಡಿಯಾಗೆ ಸಿಕ್ಕಿದ್ರು ಮತ್ತೊಬ್ಬ ಸಿಕ್ಸರ್​ ಕಿಂಗ್! ಅಭಿಷೇಕ್​​ ಹಿಂದಿದೆ 2 ವಿಶ್ವಕಪ್ ಗೆದ್ದು ಕೊಟ್ಟ ಈ ಶಕ್ತಿ

Abhishek
Published on

ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್​ ಇಂಡಿಯಾಗೆ ಬಿಗ್ ಶಾಕ್ ಒಂದು ಎದುರಾಯಿತು. ಐದು ಟಿ20 ಸರಣಿಗಾಗಿ ಜಿಂಬಾಬ್ವೆಗೆ ಪ್ರಯಾಣ ಬೆಳೆಸಿದ ಯುವ ಭಾರತ ತಂಡವನ್ನು ಮೊದಲ ಪಂದ್ಯದಲ್ಲೇ ಕ್ರಿಕೆಟ್​ ಶಿಶು ಜಿಂಬಾಬ್ವೆ ಸೋಲಿಸಿತು. ಆದರೆ, ಮೊದಲ ಹಿನ್ನಡೆಯಿಂದ ಬೇಗನೆ ಚೇತರಿಸಿಕೊಂಡ ಯುವ ಭಾರತ, ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನು ನೂರು ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಅಕ್ಷರಶಃ ಮಿಂಚಿದ್ದು ಮಾತ್ರ ಅಭಿಷೇಕ್​ ಶರ್ಮ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ ಎರಡನೇ ಪಂದ್ಯದಲ್ಲೇ ದಾಖಲೆಯ ಶತಕದೊಂದಿಗೆ ಅಭಿಷೇಕ್​, ಎಲ್ಲರ ಗಮನ ಸೆಳೆದರು.

AK47 ಬಂದೂಕಿನಿಂದ ಗುಂಡುಗಳು ಸಿಡಿದಂತೆ ಅಭಿಷೇಕ್​ ಬ್ಯಾಟ್​ನಿಂದ ಸಿಕ್ಸರ್‌ಗಳ ಸುರಿಮಳೆಯಾದವು. ಅಷ್ಟಕ್ಕೂ ಅಭಿಷೇಕ್ ಶರ್ಮರನ್ನು ಈ ರೀತಿ ತಯಾರಿಸಿದ್ದು ಯಾರು ಗೊತ್ತಾ? ಟೀಮ್​ ಇಂಡಿಯಾಗೆ ಎರಡು ವಿಶ್ವಕಪ್ ನೀಡಿದ ಹೀರೋ. ಅವರೇ ನಮ್ಮ ಯುವರಾಜ್​ ಸಿಂಗ್​. ಯುವರಾಜ್​ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ಅದ್ಭುತವಾಗಿ ತಯಾರಾಗಿರುವ ಅಭಿಷೇಕ್ ಶರ್ಮ, ತಮ್ಮ ಎರಡನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಅತಿ ಕಡಿಮೆ ಪಂದ್ಯಗಳಲ್ಲಿ ಟಿ20 ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಯಲ್ಲಿ ಡಕ್ ಔಟ್ ಆಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದ ಅಭಿಷೇಕ್, ಎರಡನೇ ಪಂದ್ಯದಲ್ಲಿ ತಮ್ಮ ನೈಜ ಸಾಮರ್ಥ್ಯ ತೋರಿದರು. ಕೇವಲ 46 ಎಸೆತಗಳಲ್ಲಿ ಶತಕ ದಾಖಲಿಸಿದರು. ಗುರು ಯುವರಾಜ್ ಅವರ ಶ್ರೇಷ್ಠ ಶಿಷ್ಯನಂತೆ ಭಾವಿಸಿದರು. 47 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ನಿಖರವಾಗಿ 100 ರನ್ ಗಳಿಸಿ ಔಟಾದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಶುಭಮನ್ ಗಿಲ್ ಕೇವಲ 2 ರನ್ ಗಳಿಸಿದರೂ ಅಭಿಷೇಕ್ ಶತಕದ ಜೊತೆಗೆ ಒನ್ ಡೌನ್‌ನಲ್ಲಿ ಬಂದ ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಹಾಗೂ ಡೈನಾಮಿಟ್ ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದ್ದರಿಂದ ಟೀಮ್​ ಇಂಡಿಯಾ ಬೃಹತ್ ಸ್ಕೋರ್ ದಾಖಲಿಸಿತು. ಬಳಿಕ ಭಾರತದ ಬೌಲರ್‌ಗಳು ಜಿಂಬಾಬ್ವೆಯನ್ನು 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿದರು.

ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳಲ್ಲಿ ವೆಸ್ಲಿ ಮಾಧವೆರೆ 43 ಮತ್ತು ಲ್ಯೂಕ್ ಜೊಂಗ್ವೆ 33 ರನ್‌ಗಳೊಂದಿಗೆ ಮಿಂಚಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು. ಟೀಮ್​ ಇಂಡಿಯಾದ ಬೌಲರ್​ಗಳ ಪೈಕಿ ಮುಖೇಶ್ ಕುಮಾರ್ 3, ಅವೇಶ್ ಖಾನ್ 3 ಹಾಗೂ ರವಿ ಬಿಷ್ಣೋಯ್ 2 ವಿಕೆಟ್ ಪಡೆದು ಮಿಂಚಿದರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಒಟ್ಟಾರೆ, ಅಭಿಷೇಕ್ ಶರ್ಮ ಅವರ ಪ್ರದರ್ಶನದಿಂದ ಟೀಂ ಇಂಡಿಯಾ 1-1 ರಿಂದ ಸರಣಿಯನ್ನು ಸಮಬಲಗೊಳಿಸಿದೆ ಮತ್ತು ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net