

ನವದೆಹಲಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಐರ್ಲೆಂಡ್ ತಂಡದ ವಿರುದ್ಧ ರೋಹಿತ್ ಶರ್ಮ ಪಡೆ ಸುಲಭ ಜಯ ದಾಖಲಿಸುವ ಮೂಲಕ ವಿಶ್ವಕಪ್ ಬೇಟೆಯನ್ನು ಆರಂಭಿಸಿದೆ. ನಿನ್ನೆ (ಜೂನ್ 05) ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ಪ್ರಯೋಗಗಳೊಂದಿಗೆ ಕಣಕ್ಕೆ ಇಳಿಯಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು, ವಿರಾಟ್ ಕೊಹ್ಲಿಯನ್ನು ತಮ್ಮ ಜೊತೆಗಾರನನ್ನಾಗಿ ರೋಹಿತ್ ಆಯ್ಕೆ ಮಾಡಿದರು.
ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ನಲ್ಲಿ ಆರಂಭಿಕರಾಗಿ ಕೊಹ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಐರ್ಲೆಂಡ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ಆದರೆ, ಮೊದಲ ಪಂದ್ಯದಲ್ಲಿ ಕೊಹ್ಲಿ ಫೇಲ್ ಆದರು. ಇದಾದ ಬಳಿಕ ರಿಷಭ್ ಪಂತ್ ಅವರನ್ನು ಒನ್ ಡೌನ್ನಲ್ಲಿ ಬ್ಯಾಟಿಂಗ್ಗೆ ಇಳಿಸುವ ಮೂಲಕ ರೋಹಿತ್ ಉತ್ತಮ ತಂತ್ರಗಾರಿಕೆ ಪ್ರದರ್ಶಿಸಿದರು. ನಾಯಕನ ನಂಬಿಕೆಯನ್ನು ನೂರಕ್ಕೆ ನೂರರಷ್ಟು ಉಳಿಸಿಕೊಂಡ ಪಂತ್, ಕೊನೆಯವರೆಗೂ ಔಟಾಗದೇ ಸೂಪರ್ ಇನ್ನಿಂಗ್ಸ್ ಆಡಿದರು.
ಬಹಳ ಸಮಯದ ನಂತರ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಣಕ್ಕಿಳಿದ ಪಂತ್, ತಮ್ಮದೇ ಶೈಲಿಯಲ್ಲಿ ರಂಜಿಸಿದರು. ಪಂತ್ ಹೊಡೆತವನ್ನು ನೋಡಿ ಐರ್ಲೆಂಡ್ನ ಸ್ಟಾರ್ ಬೌಲರ್ ಕೂಡ ಮೂಕವಿಸ್ಮಿತರಾದರು. ಎರಡನೇ ಇನಿಂಗ್ಸ್ನ 13ನೇ ಓವರ್ನ ಎರಡನೇ ಎಸೆತದಲ್ಲಿ ಐರಿಶ್ ವೇಗಿ ಬ್ಯಾರಿ ಮೆಕಾರ್ಥಿ ಎಸೆದ ಚೆಂಡನ್ನು ರಿವರ್ಸ್ ಸ್ವೀಪ್ ಮಾಡುವ ಮೂಲಕ ಪಂತ್ ಸಿಡಿಸಿದ ಸಿಕ್ಸರ್ ಇಡೀ ಪಂದ್ಯದ ಹೈಲೈಟ್ ಆಯಿತು. ಈ ಶಾಟ್ ನೋಡಿ ಒಂದು ಕ್ಷಣ ಮೆಕಾರ್ಥಿ ಕೂಡ ಅಚ್ಚರಿಗೊಂಡರು.
ಪಂತ್ ಅವರ ಸಿಕ್ಸರ್ಗೆ ಮೆಕಾರ್ಥಿ ಅವರ ಪ್ರತಿಕ್ರಿಯೆ ವೈರಲ್ ಆಗಿದೆ. ಪಂತ್ ಅಂತಹ ಹೊಡೆತಗಳನ್ನು ಆಡಿದರೆ, ಅದು ತುಂಬಾ ಆಕರ್ಷಕವಾಗಿರುತ್ತದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಇಂತಹ ಆಟವನ್ನು ಮಿಸ್ ಮಾಡಿಕೊಂಡಿದ್ದರು. ಪಂತ್ ಕ್ರೀಡಾಂಗಣಕ್ಕೆ ಬರುತ್ತಿದ್ದಂತೆಯೇ ಇಂತಹ ವಿಚಿತ್ರ ಹೊಡೆತಗಳ ಔತಣವನ್ನು ಉಣಬಡಿಸುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮೊದಲು ಐರ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಬೆಂಬಲಿಸಿ ಟೀಮ್ ಇಂಡಿಯಾ ಬೌಲರ್ ಗಳು ಸಿಡಿದೆದ್ದರು. ಐರ್ಲೆಂಡ್ ತಂಡವನ್ನು 16 ಓವರ್ಗಳಲ್ಲಿ ಕೇವಲ 96 ರನ್ಗಳಿಗೆ ಆಲೌಟ್ ಮಾಡಿತು. ಗರೆಥ್ ಡೆಲಾನಿ ಒಬ್ಬರೇ 14 ಎಸೆತಗಳಲ್ಲಿ 26 ರನ್ ಗಳಿಸಿ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇತರ ಎಲ್ಲಾ ಬ್ಯಾಟರ್ಗಳು ವಿಫಲವಾದ ಕಾರಣ ಐರ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯಿತು.
ಭಾರತದ ಬೌಲರ್ಗಳಲ್ಲಿ ಹಾರ್ದಿಕ್ ಪಾಂಡ್ಯ 3, ಅರ್ಷದೀಪ್ ಸಿಂಗ್, ಬುಮ್ರಾ 2, ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. 97 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಮ್ ಇಂಡಿಯಾಗೆ ಆರಂಭದಲ್ಲೇ ಅನಿರೀಕ್ಷಿತ ಆಘಾತ ಎದುರಾಯಿತು. ರೋಹಿತ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿಯನ್ನು ಮಾರ್ಕ್ ಅದೈರ್ ಔಟ್ ಮಾಡಿದರು. ಕೊಹ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ತಲುಪಿದರು. ರೋಹಿತ್ ಶರ್ಮಾ 52 ರನ್ ಮತ್ತು ಪಂತ್ 36 ರನ್ ಗಳಿಸಿ ಟೀಮ್ ಇಂಡಿಯಾ ಗೆಲುವನ್ನು ಖಚಿತಪಡಿಸಿದರು. ಸೂರ್ಯ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಪಂತ್ ಮತ್ತು ಶಿವಂ ದುಬೆ ಔಟಾಗದೆ ಉಳಿದರು. ಪಂತ್ ಪಂದ್ಯವನ್ನು ಸಿಕ್ಸರ್ ಮೂಲಕ ಅಂತ್ಯಗೊಳಿಸಿದರು. (ಏಜೆನ್ಸೀಸ್)