ಮುಂಬೈ ಇಂಡಿಯನ್ಸ್ ಸ್ಪಿನ್ನರ್ ಪೀಯುಷ್ ಚಾವ್ಲಾ ತಂದೆ ಕೋವಿಡ್‌ಗೆ ಬಲಿ

chawla web
Published on

ಮುಂಬೈ: ರಾಜಸ್ಥಾನ ರಾಯಲ್ಸ್ ವೇಗಿ ಚೇತನ್ ಸಕಾರಿಯಾ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಪೀಯುಷ್ ಚಾವ್ಲಾ ಕೂಡ ಕೋವಿಡ್ ಸೋಂಕಿನಿಂದ ಪಿತೃವಿಯೋಗ ಎದುರಿಸಿದ್ದಾರೆ. ಉತ್ತರ ಪ್ರದೇಶದ ಕ್ರಿಕೆಟಿಗ ಪೀಯುಷ್ ಚಾವ್ಲಾ ಅವರ ತಂದೆ ಪ್ರಮೋದ್ ಕುಮಾರ್ ಚಾವ್ಲಾ (60 ವರ್ಷ) ಕರೊನಾ ಸೋಂಕಿನಿಂದ ಸೋಮವಾರ ನಿಧನ ಹೊಂದಿದ್ದಾರೆ.

ಭಾರತ ತಂಡದ ಪರವಾಗಿಯೂ 3 ಟೆಸ್ಟ್, 25 ಏಕದಿನ ಮತ್ತು 7 ಟಿ20 ಪಂದ್ಯ ಆಡಿರುವ ಪೀಯುಷ್ ಚಾವ್ಲಾ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಂತಾಪ ಸೂಚಿಸಿದೆ.

ಕರೊನಾ ಗೆದ್ದು ಮನೆಗೆ ಮರಳಿದ ವರುಣ್, ಸಂದೀಪ್

ಐಪಿಎಲ್ 14ನೇ ಆವೃತ್ತಿಯ ವೇಳೆ ಬಯೋಬಬಲ್‌ನಲ್ಲೇ ಕರೊನಾ ಸೋಂಕಿಗೆ ತುತ್ತಾಗಿದ್ದ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್ ಇದೀಗ ಚೇತರಿಕೆ ಕಂಡು ಮನೆಗೆ ಮರಳಿದ್ದಾರೆ. 10 ದಿನಗಳ ಕಡ್ಡಾಯ ಕ್ವಾರಂಟೈನ್ ಬಳಿಕ ವರುಣ್ ಚಕ್ರವರ್ತಿ ತಮಿಳುನಾಡಿಗೆ ಮರಳಿದ್ದರೆ, ಸಂದೀಪ್ ವಾರಿಯರ್ ಕೇರಳಕ್ಕೆ ವಾಪಸ್ ಆಗಿದ್ದಾರೆ. ಅವರಿಬ್ಬರು ಚೆನ್ನೈ, ಕೇರಳದಲ್ಲೂ ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ವರುಣ್ ಚಕ್ರವರ್ತಿ ಐಪಿಎಲ್ ವೇಳೆ ಮೆಡಿಕಲ್ ಸ್ಕಾೃನ್‌ಗೆ ತೆರಳಿದ ಕಾರಣ ಸೋಂಕಿಗೆ ತುತ್ತಾಗಿದ್ದರು. ಅವರ ಜತೆಗಿನ ಒಡನಾಟದಿಂದಾಗಿ ತಂಡದ ಆಟಗಾರರಾದ ಸಂದೀಪ್ ವಾರಿಯರ್ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ ಕೂಡ ಸೋಂಕಿತರಾಗಿದ್ದರು. ಸಂದೀಪ್ ಜತೆಗಿನ ಮಾತುಕತೆಯಿಂದ ಡೆಲ್ಲಿ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಸೋಂಕಿತರಾಗಿದ್ದರು. ಈ ಕರೊನಾ ಹರಡುವಿಕೆ ತಡೆಯಲು ಕೊನೆಗೆ ಬಿಸಿಸಿಐ, 29 ಪಂದ್ಯಗಳ ಬಳಿಕ ಟೂರ್ನಿಯನ್ನೇ ಸ್ಥಗಿತಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net