

ಚೆನ್ನೈ: ತಮಿಳುನಾಡಿನ ವೈಶಾಲಿ ರಮೇಶ್ ಬಾಬು ಚದುರಂಗ ಕ್ರೀಡೆಯಲ್ಲಿ ಭಾರತದ 84ನೇ ಗ್ರಾಂಡ್ ಮಾಸ್ಟರ್ ಎನಿಸಿದ್ದಾರೆ. ಚೆಸ್ ವಿಶ್ವಕಪ್ ರನ್ನರ್ಅಪ್ ಆರ್. ಪ್ರಜ್ಞಾನಂದ ಅವರ ಸಹೋದರಿಯಾಗಿರುವ ವೈಶಾಲಿ, ದೇಶದ 3ನೇ ಮಹಿಳಾ ಗ್ರಾಂಡ್ ಮಾಸ್ಟರ್ ಆಗಿದ್ದಾರೆ. ಜತೆಗೆ, ವೈಶಾಲಿ-ಪ್ರಜ್ಞಾನಂದ ಚೆಸ್ನಲ್ಲಿ ಗ್ರಾಂಡ್ ಮಾಸ್ಟರ್ ಪಟ್ಟವೇರಿದ ಮೊಟ್ಟಮೊದಲ ಅಕ್ಕ-ತಮ್ಮ ಜೋಡಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಸ್ಪೇನ್ನಲ್ಲಿ ಶುಕ್ರವಾರ ಎಲ್. ಲೊಬ್ರೆಗಟ್ ಓಪನ್ನಲ್ಲಿ 2,500 ರೇಟಿಂಗ್ ಪಾಯಿಂಟ್ಸ್ ಕಲೆಹಾಕುವ ಮೂಲಕ 22 ವರ್ಷದ ವೈಶಾಲಿ ಗ್ರಾಂಡ್ ಮಾಸ್ಟರ್ ಪಟ್ಟ ಒಲಿಸಿಕೊಂಡರು. ಕೊನೆರು ಹಂಪಿ (2002), ದ್ರೋಣವಲ್ಲಿ ಹರಿಕಾ (2011) ದೇಶದ ಮೊದಲಿಬ್ಬರು ಮಹಿಳಾ ಗ್ರಾಂಡ್ ಮಾಸ್ಟರ್ಗಳಾಗಿದ್ದಾರೆ. ಪ್ರಜ್ಞಾನಂದ 2018ರಲ್ಲಿ 12ನೇ ವಯಸ್ಸಿನಲ್ಲೇ ಗ್ರಾಂಡ್ ಮಾಸ್ಟರ್ ಆಗಿದ್ದರು.
"ಕೊನೆಗೂ ಗ್ರಾಂಡ್ ಮಾಸ್ಟರ್ ಪಟ್ಟಕ್ಕೇರಿದ ಬಗ್ಗೆ ಖುಷಿ ಇದೆ. ಸದ್ಯ 2 ಸುತ್ತಿನ ಪಂದ್ಯಗಳು ಮಾತ್ರ ನಡೆದಿದ್ದು, ನಾನೀಗ ಟೂರ್ನಿಯತ್ತ ಸಂಪೂರ್ಣ ಗಮನಹರಿಸಿರುವೆ. ಆದರೆ ಜಿಎಂ ಪಟ್ಟ ಸಂಭ್ರಮ ತಂದಿದೆ. ನಾನು ಚೆಸ್ ಆಡಲು ಆರಂಭಿಸಿದ ದಿನದಿಂದಲೂ ಇದನ್ನು ಸಾಧಿಸುವ ಆಸೆ ಇತ್ತು. ಇದಕ್ಕೆ ಹತ್ತಿರವಾದಾಗ ನನ್ನ ಮೇಲೆ ಒತ್ತಡವೂ ಹೆಚ್ಚಿತ್ತು' ಎಂದು ವೈಶಾಲಿ ತಿಳಿಸಿದ್ದಾರೆ.
ಪ್ರಜ್ಞಾನಂದ್ರಂತೆ ವೈಶಾಲಿ ಕೂಡ ತಂದೆ ರಮೇಶ್ಬಾಬು ಅವರಿಂದಾಗಿ ಬಾಲ್ಯದಲ್ಲಿ ಚೆಸ್ ಆಟ ಆಡಲಾರಂಭಿಸಿದ್ದರು. ಮಗಳ ಸಾಮರ್ಥ್ಯವನ್ನು ಅರಿತು ರಮೇಶ್ಬಾಬು, 5ನೇ ವಯಸ್ಸಿನಲ್ಲೇ ಚೆಸ್ ತರಬೇತಿಗೆ ಸೇರಿಸಿದ್ದರು. ವೈಶಾಲಿ ಇದುವರೆಗೆ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಭಾಗವೂ ಆಗಿದ್ದರು.