

ನವದೆಹಲಿ: ಎರಡು ದಿನಗಳ ಕಾಲ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿ ಬಿಡ್ಡಿಂಗ್ ನಡೆಸಿದ 10 ಫ್ರಾಂಚೈಸಿಗಳು, ತಮಗೆ ಅಗತ್ಯವಿದ್ದ ಹಾಗೂ ಭರವಸೆಯಿಟ್ಟು ಖರೀದಿಸಬಹುದಾದ ಆಟಗಾರರನ್ನು ತಮ್ಮ ತೆಕ್ಕೆಗೆ ಕರೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದೆಡೆ ಐಪಿಎಲ್ ಆಕ್ಷನ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಖರೀದಿಯಾದ ಸ್ಟಾರ್ ಆಟಗಾರ ಎಂಬ ಪಟ್ಟಿಗೆ ರಿಷಭ್ ಪಂತ್ ಸೇರಿದರೆ, 1.1 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಖರೀದಿಯಾದ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ( Vaibhav Suryavanshi) ಎಂಬುದು ಮತ್ತೊಂದೆಡೆ.
ಐಪಿಎಲ್ 2025ರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಖರೀದಿಯಾದ 13 ವರ್ಷದ ವೈಭವ್ ಸೂರ್ಯವಂಶಿ ಸದ್ಯ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. 1.10 ಕೋಟಿ ರೂ.ಗೆ ಆರ್ಆರ್ ಫ್ರಾಂಚೈಸಿ ಪಾಲಾದ ಈ ಬಾಲಕ, ಐಪಿಎಲ್ ಹರಾಜಿನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ. 2025 ಲೀಗ್ಗೆ ತಂಡದ ಜತೆ ಒಪ್ಪಂದ ಮಾಡಿಕೊಂಡಿರುವ ವೈಭವ್, ಈ ಹಂತಕ್ಕೆ ಬರಲು ಭಾರೀ ಕಷ್ಟಪಟ್ಟಿದ್ದಾನೆ ಎಂದು ಬಾಲಕನ ತಂದೆ ಭಾವುಕರಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ನನ್ನ ಪುತ್ರ ತನ್ನಿಂದ ಏನೆಲ್ಲಾ ಸಾಧ್ಯವೋ ಅದನ್ನು ಸಾಬೀತುಪಡಿಸಿದ್ದಾನೆ. ಅವನು ಕೇವಲ 8 ವರ್ಷ ವಯಸ್ಸಿನಲ್ಲಿದ್ದಾಗಲೇ ಅಂಡರ್ 16 ಜಿಲ್ಲಾ ಮಟ್ಟದ ಕ್ರಿಕೆಟ್ನಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದನ್ನು. ವೈಭವ್ ಉತ್ತಮ ಕ್ರಿಕೆಟ್ ಕೋಚಿಂಗ್ ಸಿಗಬೇಕು ಎಂದು ಪ್ರತಿದಿನ ನಮ್ಮ ಮನೆಯಿಂದ ದೂರವಿರುವ ಸಮಸ್ತಿಪುರಕ್ಕೆ ಹೋಗಿ ಹಿಂತಿರುಗುತ್ತಿದ್ದೆವು. ನಾವು ಬಡವರು. ಆರ್ಥಿಕ ಬಿಕ್ಕಟ್ಟಿನಿಂದ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಈ ಮಧ್ಯೆ ಮಗನ ಸಾಧನೆ ಮನಸ್ಸಿಗೆ ಖುಷಿ ನೀಡಿದೆ" ಎಂದರು.
"ವೈಭವ್ಗೆ ತಾನೊಬ್ಬ ದೊಡ್ಡ ಕ್ರಿಕೆಟರ್ ಆಗಬೇಕು ಎಂಬ ಮಹಾದಾಸೆ. ಇದನ್ನು ಅರಿತ ನಾನು, ಅವನ ಕನಸಿಗೆ ಅಣಿಯಾಗಬೇಕು ಎಂದು ನನ್ನ ಬಳಿಯಿದ್ದ ಹೊಲವನ್ನು ಮಾರಿಬಿಟ್ಟೆ. ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದ ನಮಗೆ ಇದೊಂದೇ ಪರಿಹಾರವಾಗಿತ್ತು. ನಾಗ್ಪುರದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆಯೋಜಿಸಿದ್ದ ಟ್ರಯಲ್ಸ್‌ಗೆ ಮಗ ಹಾಜರಾಗಿದ್ದನ್ನು. ವಿಕ್ರಮ್ ರಾಥೋರ್ ಸರ್ (ಬ್ಯಾಟಿಂಗ್ ಕೋಚ್) ಒಂದು ಓವರ್‌ನಲ್ಲಿ 17 ರನ್ ಗಳಿಸಲು ಹೇಳಿದರು. ನನ್ನ ಮಗ ಮೂರು ಸಿಕ್ಸರ್‌ಗಳನ್ನು ಬಾರಿಸಿದನು. ಅವನು ಟ್ರಯಲ್ಸ್‌ನಲ್ಲಿ ಒಟ್ಟು 8 ಸಿಕ್ಸರ್‌ಗಳು ಮತ್ತು 4 ಬೌಂಡರಿ ಸಿಡಿಸಿದನು. ಬಹುಶಃ ಇದೇ ಅವರ ಆಯ್ಕೆಗೆ ಕಾರಣವಾಯಿತು ಅನಿಸುತ್ತದೆ" ಎಂದು ವೈಭವ್ ತಂದೆ ಸಂತಸ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).