

ನ್ಯೂಯಾರ್ಕ್: ಎಡಗೈ ವೇಗಿ ಅರ್ಷದೀಪ್ ಸಿಂಗ್ (9ಕ್ಕೆ 4) ಜೀವನಶ್ರೇಷ್ಠ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ (50*ರನ್, 49 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ರೋಹಿತ್ ಶರ್ಮ, ಸೂಪರ್&8 ಪ್ರವೇಶವನ್ನೂ ಖಾತ್ರಿಪಡಿಸಿಕೊಂಡಿದೆ.
ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಅಮೆರಿಕ, ಸಂಟಿತ ದಾಳಿಗೆ ಮಂಕಾಗಿ ನಿತೀಶ್ ಕುಮಾರ್ (27) ಹಾಗೂ ಸ್ಟೀವನ್ ಟೇಲರ್ (24) ಕೊಡುಗೆಯಿಂದ 7 ವಿಕೆಟ್ಗೆ 110 ರನ್ಗಳ ಗೌರವಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಭಾರತ 18.2 ಓವರ್ಗಳಲ್ಲಿ 3 ವಿಕೆಟ್ಗೆ 111 ರನ್ ಗಳಿಸಿ ಜಯ ದಾಖಲಿಸಿತು.
ಚೇಸಿಂಗ್ನಲ್ಲಿ ತಿಣುಕಾಡಿದ ಭಾರತ: ಸಾಧಾರಣ ಮೊತ್ತದ ಚೇಸಿಂಗ್ ವೇಳೆ ಭಾರತ ಆರಂಭಿಕ ಆಘಾತ ಎದುರಿಸಿತು. ಕಳೆದೆರಡು ಪಂದ್ಯಗಳಲ್ಲಿ ಒಂದಂಕಿ ಗಳಿಸಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಬಾರಿ ಖಾತೆಯನ್ನೂ ತೆರೆಯದೆ ನಿರಾಸೆ ಮೂಡಿಸಿದರು. ಇನಿಂಗ್ಸ್ನ 2ನೇ ಎಸೆತದಲ್ಲಿ ಮುಂಬೈ ಮೂಲದ ಎಡಗೈ ವೇಗಿ ಸೌರಭ್ ನೇತ್ರವಲ್ಕರ್ (18ಕ್ಕೆ 2) ಎಸೆತದಲ್ಲಿ ಕೊಹ್ಲಿ ಕೀಪರ್ಗೆ ಕ್ಯಾಚ್ ನೀಡಿದರು. ನೇತ್ರವಲ್ಕರ್ರ ಮರುಓವರ್ನಲ್ಲಿ ನಾಯಕ ರೋಹಿತ್ ಶರ್ಮ (3) ಕೂಡ ವಿಕೆಟ್ ಒಪ್ಪಿಸಿದರು. ಪವರ್ಪ್ಲೇನಲ್ಲಿ ಭಾರತ 33 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಪರದಾಡಿತು. ರಿಷಭ್ ಪಂತ್&ಸೂರ್ಯಕುಮಾರ್ ಜೋಡಿ 3ನೇ ವಿಕೆಟ್ಗೆ 29 ರನ್ ಸೇರಿಸಿ ಭಾರತಕ್ಕೆ ತುಸು ಚೇತರಿಕೆ ಒದಗಿಸಿದರು. ಪಂತ್ ಕೂಡ ಔಟಾದ ನಂತರದಲ್ಲಿ ಸೂರ್ಯಕುಮಾರ್ಗೆ ಶಿವಂ ದುಬೆ (31*) ಉತ್ತಮ ಬೆಂಬಲ ಒದಗಿಸಿದರು. ಸೂರ್ಯ&ದುಬೆ ಮುರಿಯದ 4ನೇ ವಿಕೆಟ್ಗೆ 65 ಎಸೆತಗಳಲ್ಲಿ 67 ರನ್ ಸೇರಿಸಿ ಭಾರತವನ್ನು ಸುರತವಾಗಿ ಗೆಲುವಿನ ದಡ ಸೇರಿಸಿದರು.