ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾ ಸೋಲಿಗೆ ಕಾರಣವಾದ ಡೆಡ್​ಬಾಲ್​! ಡಿಆರ್​ಎಸ್​ನಲ್ಲಿ ವಿಕೆಟ್​ ಉಳಿದರೂ ಬೌಂಡರಿ ಸಿಗಲಿಲ್ಲ!

web dead ball
Published on

ನ್ಯೂಯಾರ್ಕ್​: ದಕ್ಷಿಣ ಆಫ್ರಿಕಾ ವಿರುದ್ಧದ ಲೋ-ಸ್ಕೋರಿಂಗ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಕೇವಲ 4 ರನ್​ಗಳಿಂದ ಸೋಲು ಅನುಭವಿಸಿತು. ಡೆಡ್​ಬಾಲ್​ ನಿಯಮಾವಳಿಯಲ್ಲಿನ ಲೋಪ ಬಾಂಗ್ಲಾ ಸೋಲಿಗೆ ಪ್ರಮುಖ ಕಾರಣವೆನಿಸಿದ್ದು, ಇದು ಹೊಸ ವಿವಾದವನ್ನು ಸೃಷ್ಟಿಸಿದೆ.

ನಡೆದಿದ್ದೇನು?: ದಕ್ಷಿಣ ಆಫ್ರಿಕಾದ 114 ರನ್​ ಸವಾಲಿಗೆ ಪ್ರತಿಯಾಗಿ ಬಾಂಗ್ಲಾದೇಶ 16.1 ಓವರ್​ಗಳಲ್ಲಿ 4 ವಿಕೆಟ್​ಗೆ 87 ರನ್​ ಗಳಿಸಿ ಜಯದ ನಿರೀೆಯಲ್ಲಿತ್ತು. ಆಗ ವೇಗಿ ಬಾರ್ಟ್​ಮನ್​ ಎಸೆತದಲ್ಲಿ ಮಹಮುದುಲ್ಲಾ ಎದುರಿಸಿದ ಚೆಂಡು ಪ್ಯಾಡ್​ಗೆ ಬಡಿದು ಫೈನ್​ ಲೆಗ್​ನಲ್ಲಿ ಬೌಂಡರಿ ಗೆರೆಯನ್ನು ದಾಟಿತು. ಆದರೆ ಈ ನಡುವೆ ಬೌಲರ್​ ಮಾಡಿದ ಮನವಿ ಪುರಸ್ಕರಿಸಿದ ಅಂಪೈರ್​ ಔಟ್​ ತೀರ್ಪು ನೀಡಿದರು. ಆಗ ಮಹಮುದುಲ್ಲಾ ಡಿಆರ್​ಎಸ್​ ಮೊರೆ ಹೋದರು ಮತ್ತು ತೃತೀಯ ಅಂಪೈರ್​ ನಾಟೌಟ್​ ತೀರ್ಪು ನೀಡಿದರು. ಇದರಿಂದ ಮಹಮುದುಲ್ಲಾ ಬ್ಯಾಟಿಂಗ್​ ಮುಂದುವರಿಸಿದರೂ, ಲೆಗ್​ಬೈ ರೂಪದಲ್ಲಿ ಬರಬೇಕಿದ್ದ ಆ 4 ರನ್​ಗಳು ಲಭಿಸಲಿಲ್ಲ. ಯಾಕೆಂದರೆ, ಅಂಪೈರ್​ ಔಟ್​ ತೀರ್ಪು ನೀಡಿದಾಗಲೇ ಚೆಂಡು ಡೆಡ್​ ಆಗಿತ್ತು ಮತ್ತು ಅದು ನಂತರ ಬೌಂಡರಿ ಗೆರೆ ದಾಟಿದ್ದು ಲೆಕ್ಕಕ್ಕೆ ಬರಲಿಲ್ಲ.

ಐಸಿಸಿ ನಿಯಮಾವಳಿ ಪ್ರಕಾರ, ಬ್ಯಾಟರ್​ ವಿರುದ್ಧ ಎಲ್​ಬಿಡಬ್ಲ್ಯು ತೀರ್ಪು ನೀಡಿದ (ಅದು ನಂತರ ಬದಲಾದರೂ) ನಂತರ ಇತರೆ ರನ್​ಗಳನ್ನು (ಲೆಗ್​ಬೈ, ಬೈಸ್​) ನೀಡಬಾರದು. ಡಿಆರ್​ಎಸ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಿಕೆಟ್​ ನಷ್ಟವಾದರೂ, 4 ರನ್​ ಲಾಭವಾಯಿತು. ಅಂತಿಮವಾಗಿ ಇಷ್ಟೇ ರನ್​ ಅಂತರದಿಂದ ಬಾಂಗ್ಲಾ ಸೋಲು ಕಂಡಿದ್ದು ವಿಪರ್ಯಾಸ.

ಈ ಘಟನೆ ಬೆನ್ನಲ್ಲೇ ಬಾಂಗ್ಲಾ ಅಭಿಮಾನಿಗಳು ಮಾತ್ರವಲ್ಲದೆ, ಭಾರತದ ಮಾಜಿ ಬ್ಯಾಟರ್​ ವಾಸಿಂ ಜಾಫರ್​ ಕೂಡ ಡೆಡ್​ಬಾಲ್​ ನಿಯಮಾವಳಿಯನ್ನು ಪ್ರಶ್ನಿಸಿದ್ದಾರೆ. ಔಟ್​ ತೀರ್ಪು ಬದಲಾವಣೆ ಆಗಿರುವುದರಿಂದ, ಚೆಂಡು ಕೂಡ ಅಂಪೈರ್​ ತೀರ್ಪು ನೀಡಿದಾಗಲೇ ಡೆಡ್​ ಆಗಿದೆ ಎಂದು ಪರಿಗಣಿಸುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಐಸಿಸಿ ನಿಯಮಾವಳಿ ಪ್ರಕಾರ, ಮೈದಾನದ ಅಂಪೈರ್​ ನಾಟೌಟ್​ ತೀರ್ಪು ನೀಡಿದಾಗ ಎದುರಾಳಿ ತಂಡ ಡಿಆರ್​ಎಸ್​ ಮೊರೆ ಹೋದರೆ ಮತ್ತು ಅದು ತಿರಸ್ಕೃತಗೊಂಡರೆ ಆಗ ಲೆಗ್​ಬೈ ರನ್​ಗಳಿದ್ದರೆ ಅದನ್ನು ನೀಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net