

ನ್ಯೂಯಾರ್ಕ್: ವೇಗಿಗಳ ಸಂಟಿತ ದಾಳಿ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (53*ರನ್, 53 ಎಸೆತ, 2 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮಾಡು ಇಲ್ಲವೆ ಮಡಿ ಎನಿಸಿದ ತನ್ನ 3ನೇ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೆನಡಾ ವಿರುದ್ಧ 7 ವಿಕೆಟ್ಗಳಿಂದ ಗೆಲುವು ಸಾಧಿಸಿ ಸೂಪರ್-8 ಪ್ರವೇಶಿಸುವ ಆಸೆ ಜೀವಂತ ಉಳಿಸಿಕೊಂಡಿದೆ.
ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎ ಗುಂಪಿನ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕೆನಡಾ, ಮೊಹಮದ್ ಆಮೀರ್ (13ಕ್ಕೆ 2), ಹ್ಯಾರಿಸ್ ರೌಫ್ (26ಕ್ಕೆ 2) ಬಿಗಿ ದಾಳಿಯ ನಡುವೆ ಆರಂಭಿಕ ಆರೋನ್ ಜಾನ್ಸನ್ (52 ರನ್, 44 ರನ್, 4 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಹೋರಾಟದಿಂದ 7 ವಿಕೆಟ್ಗೆ 106 ರನ್ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಪಾಕ್, 17.3 ಓವರ್ಗಳಲ್ಲಿ 3 ವಿಕೆಟ್ಗೆ 107 ರನ್ ಗಳಿಸಿ ಜಯ ದಾಖಲಿಸಿತು.
ಪಾಕ್ಗೆ ಜಾನ್ಸನ್ ಪ್ರತಿರೋಧ
ಸತತ 2 ಎಸೆತದಲ್ಲಿ ಬೌಂಡರಿ ಸಿಡಿಸಿ ಖಾತೆ ತೆರೆದ ಜಾನ್ಸನ್ ಕೆನಡಾ ಪರ ಗರಿಷ್ಠ ರನ್ ಸ್ಕೋರರ್ ಎನಿಸಿದರು. ಇತರ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಏಕಾಂಗಿಯಾಗಿ ಮೊತ್ತ ಏರಿಸಿದ ಜಾನ್ಸನ್ ಪಾಕ್ ಬೌಲರ್ಗಳನ್ನು ಕಾಡಿದರು. ಆರಂಭಿಕ ನವನೀತ್ (4) 3ನೇ ಓವರ್ನಲ್ಲಿ ಅಮೀರ್ಗೆ ಬೌಲ್ಡ್ ಆದರು. ಬಳಿಕ ಪರ್ಗತ್ ಸಿಂಗ್ (2) ನಿರಾಸೆ ಮೂಡಿಸಿದರು. ಕಳೆದ ಪಂದ್ಯದ ಹೀರೋ ನಿಕೋಲಸ್ ಕೀರ್ಟನ್ (2) ರನ್ ಓಡುವ ಗೊಂದಲದಲ್ಲಿ ಔಟ್ ಆದರು. ಇನಿಂಗ್ಸ್ನ 10ನೇ ಓವರ್ನಲ್ಲಿ ಶ್ರೇಯಸ್ ಮೊವ್ವ (2), ರವೀಂದ್ರಪಾಲ್ ಸಿಂಗ್ (0) ಡಬಲ್ ವಿಕೆಟ್ ಪಡೆದ ರೌಫ್ ಕೆನಡಾಗೆ ಕಡಿವಾಣ ಹೇರಿದರು. 55 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಕೆನಡಾ 100ರ ಗಡಿದಾಟುವುದು ದುಸ್ತರ ಎನಿಸಿತು. ಆಗ ಜಾನ್ಸನ್ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ನೆರವಿಗೆ ನಿಂತರು. ಕೊನೆಯಲ್ಲಿ ಸಾದ್ ಬೀನ್ ಜಾರ್ (10), ಕಲೀಮ್ ಸನಾ (13*) ಕೊಡುಗೆಯಿಂದ ಕೆನಡಾ 100ರ ಗಡಿ ದಾಟಿತು.
ಕೆನಡಾ: 7 ವಿಕೆಟ್ಗೆ 106 (ಜಾನ್ಸನ್ 52, ರ್ಕಿಟನ್ 1, ಶ್ರೇಯಸ್ 2, ಬೀನ್ ಜಾರ್ 10, ಕಲೀಮ್ 13*, ಹೈಯಾಲಿಗರ್ 9*, ಶಾಹೀನ್ ಷಾ 21ಕ್ಕೆ 1, ರೌಫ್ 26ಕ್ಕೆ 2, ಅಮೀರ್ 13ಕ್ಕೆ 2). ಪಾಕಿಸ್ತಾನ: 17.3 ಓವರ್ಗಳಲ್ಲಿ 3 ವಿಕೆಟ್ಗೆ 107 (ರಿಜ್ವಾನ್ 53*, ಬಾಬರ್ 33, ಹೈಯಾಲಿಗರ್ 18ಕ್ಕೆ 2). ಪಂದ್ಯಶ್ರೇಷ್ಠ: ಮೊಹಮದ್ ಆಮೀರ್.