

ಲಂಡನ್: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್ ವಿರುದ್ಧ ಟೈಮ್ಡ್ ಔಟ್ ತೀರ್ಪು ನೀಡಿದ ಅಂಪೈರ್ಗಳ ನಿರ್ಧಾರ ಸರಿಯಾಗಿಯೇ ಇದೆ ಎಂದು ಕ್ರಿಕೆಟ್ ನಿಯಮಾವಳಿಗಳ ಮಹಾಪೋಷಕ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅನುಮೋದಿಸಿದೆ. ಆದರೆ, ಹೆಲ್ಮೆಟ್ ಬದಲಾಯಿಸುವ ಮುನ್ನ ಮ್ಯಾಥ್ಯೂಸ್ ಅಂಪೈರ್ಗಳ ಅನುಮತಿ ಕೇಳಿದ್ದರೆ ಔಟಾಗುವುದರಿಂದ ಬಚಾವ್ ಆಗಬಹುದಾಗಿತ್ತು ಎಂದೂ ತಿಳಿಸಿದೆ.
ಮ್ಯಾಥ್ಯೂಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೈಮ್ಡ್ ಔಟ್ ಮೂಲಕ ಔಟಾದ ಮೊದಲ ಬ್ಯಾಟರ್ ಎನಿಸಿದ್ದರು. ಸಧೀರ ಸಮರವಿಕ್ರಮ ಔಟಾದ ಬಳಿಕ ಕ್ರೀಸ್ಗೆ ಬಂದು ಮುಂದಿನ ಎಸೆತ ಎದುರಿಸಲು 2 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ಕಾರಣ, ನಿಯಮಾವಳಿ ಪ್ರಕಾರ ಅವರು ಔಟಾಗಿದ್ದರು. ಸಕಾಲಕ್ಕೆ ಕ್ರೀಸ್ಗೆ ಬಂದರೂ, ಹೆಲ್ಮೆಟ್ ತೊಡುವ ವೇಳೆ ಅದರ ಪಟ್ಟಿ ಮುರಿದ ಕಾರಣ ಅದನ್ನು ಬದಲಾಯಿಸುವ ವೇಳೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ಆದರೆ ಈ ವೇಳೆ ಮತ್ತು ಪಂದ್ಯದ ನಂತರ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
"ಹೆಲ್ಮೆಟ್ ಸ್ಟ್ರಾಪ್ ಮುರಿದ ವೇಳೆ ಅದನ್ನು ಬದಲಾಯಿಸಿಕೊಳ್ಳುವ ಮುನ್ನ ಮ್ಯಾಥ್ಯೂಸ್ ಅಂಪೈರ್ಸ್ ಒಪ್ಪಿಗೆ ಪಡೆದುಕೊಳ್ಳಲಿಲ್ಲ. ಡ್ರೆಸ್ಸಿಂಗ್ ರೂಂನತ್ತ ಕೈಸನ್ನೆ ಮಾಡಿ ತಾವೇ ಹೊಸ ಹೆಲ್ಮೆಟ್ ತರಿಸಿಕೊಂಡರು. ಆದರೆ ಕ್ರಿಕೆಟ್ ನಿಯಮಾವಳಿ ಪ್ರಕಾರ, ಹೊಸ ಪರಿಕರ ತೆಗೆದುಕೊಳ್ಳುವಾಗ ಅಂಪೈರ್ ಅನುಮತಿ ಪಡೆದುಕೊಳ್ಳುವುದು ಕೂಡ ಅಗತ್ಯವಾಗಿದೆ. ಅಂಪೈರ್ ಬಳಿ ಕೇಳಿದ್ದರೆ ಅವರು ಅನುಮತಿ ನೀಡುತ್ತಿದ್ದರು. ಆಗ ಟೈಮ್ಡ್ ಔಟ್ ತೀರ್ಪು ನೀಡಲು ಅವಕಾಶ ಇರುತ್ತಿರಲಿಲ್ಲ. ಆದರೆ ಮ್ಯಾಥ್ಯೂಸ್ ಮುಂಚಿತವಾಗಿ ಒಪ್ಪಿಗೆ ಪಡೆದಿರದ ಕಾರಣ, ಆ ಸಂದರ್ಭದಲ್ಲಿ ಟೈಮ್ಡ್ ಔಟ್ ಹೊರತಾಗಿ ಬೇರೆ ತೀರ್ಪು ನೀಡಲು ಕ್ರಿಕೆಟ್ ನಿಯಮಾವಳಿ ಪ್ರಕಾರ ಅವಕಾಶವಿರಲಿಲ್ಲ' ಎಂದು ಎಂಸಿಸಿ ವಿವರಿಸಿದೆ. ದಣ ಆಫ್ರಿಕಾದ ಮರಾಯಿಸ್ ಎರಾಸ್ಮಸ್ ಮತ್ತು ಇಂಗ್ಲೆಂಡ್ನ ರಿಚರ್ಡ್ ಎಲ್ಲಿಂಗ್ವರ್ತ್ ಆ ಸಮಯದಲ್ಲಿ ಮೈದಾನದಲ್ಲಿದ್ದ ಅಂಪೈರ್ಗಳು. ಟೈಮ್ಡ್ ಔಟ್ ವಿವಾದದಿಂದಾಗಿ ಪಂದ್ಯದ ಬಳಿಕ ಲಂಕಾ ಆಟಗಾರರು ಬಾಂಗ್ಲಾ ಆಟಗಾರರಿಗೆ ಶೇಕ್ಹ್ಯಾಂಡ್ ನೀಡಲು ಕೂಡ ನಿರಾಕರಿಸಿದ್ದರು.
ಟೈಮ್ಡ್ ಔಟ್ಗೆ ಮನವಿ ಸಲ್ಲಿಸಿದ ಬಗ್ಗೆ ನನಗೆ ಯಾವುದೇ ವಿಷಾದ ಇಲ್ಲ ಎಂದು ಶಕೀಬ್ ಪಂದ್ಯದ ಬಳಿಕವೂ ಹೇಳಿದ್ದರೆ, ಮ್ಯಾಥ್ಯೂಸ್ ಕಿಡಿಕಾರಿದ್ದರು. ಆದರೆ ಬ್ಯಾಟರ್ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಇಂಥ ನಿಯಮದ ಅಗತ್ಯವಿದೆ. ಬ್ಯಾಟರ್ ಉದ್ದೇಶ ಸಮಯ ವ್ಯರ್ಥಗೊಳಿಸುವುದು ಆಗಿರದಿದ್ದರೂ, ಪಂದ್ಯ ತಡವಾಗುವುದನ್ನು ತಡೆಯಲು ಇಂಥ ನಿಯಮ ಬೇಕಾಗಿದೆ ಎಂದು ಎಂಸಿಸಿ ಸಮರ್ಥಿಸಿಕೊಂಡಿದೆ.