ಕ್ಯಾಪ್ಟನ್ ರೋಹಿತ್ ಶರ್ಮ ಸೋಮಾರಿ! ಆದ್ರೆ… ಕ್ರಿಕೆಟ್ ಅಂಪೈರ್​ ಹೇಳಿಕೆ ಹಿಂದಿದೆ ಈ ಅಸಲಿ ಸಂಗತಿ

ವಿಜಯವಾಣಿ (79)
Published on

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಕ್ಯಾಪ್ಟನ್ ರೋಹಿತ್ ಶರ್ಮ, ಇಂದಿಗೂ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಸ್ಟಾರ್​, ದಿಗ್ಗಜ ಬ್ಯಾಟರ್​ ಎಂದರೆ ತಪ್ಪಾಗಲಾರದು. ತಂಡದ ಪರ ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುವ ರೋಹಿತ್, ಕ್ರೀಸ್​ಗೆ ಅಂಟಿನಿಂತರೆ ರನ್​ಗಳ ಸುರಿಮಳೆಯನ್ನೇ ಹರಿಸುತ್ತಾರೆ. ಇಂತಹ ಪವರ್​ ಹಿಟ್ಟಿಂಗ್ ಬ್ಯಾಟರ್​ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡ ಭಾರತದ ಹೆಸರಾಂತ ಅಂಪೈರ್​ ಅನಿಲ್ ಚೌಧರಿ, ಶರ್ಮ ಒಬ್ಬ ಸೋಮಾರಿ ಎಂಬಂತೆ ಕಂಡರು ಅವರಲ್ಲಿ ಅದ್ಭುತ ಐಡಿಯಾಗಳಿವೆ ಎಂದು ಹೇಳಿದ್ದಾರೆ.

ಪಾಡ್​ಕಾಸ್ಟ್​ನ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ರೋಹಿತ್ ಶರ್ಮ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅನಿಲ್, "ನಾಯಕ ರೋಹಿತ್ ಶರ್ಮಾ ಕೆಲವು ವಿಷಯಗಳಿಂದ ಹಿಂದೆ ಸರಿಯುತ್ತಾರೆ ಮತ್ತು ಅದನ್ನು ಅಲ್ಲೇ ಮರೆತು ಮುಂದೋಗುತ್ತಾರೆ ಎಂದು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಕೆಲವರು ರೋಹಿತ್ ಸೋಮಾರಿ ಎನ್ನುತ್ತಾರೆ. ಕೆಲವರ ಹೇಳಿಕೆಗಳ ಪ್ರಕಾರ ಅವರು ಸೋಮಾರಿ ಎಂದೆನಿಸಬಹುದು. ಆದ್ರೆ, ಅವರು ಆ ರೀತಿ ಇಲ್ಲ" ಎಂದು ಅನಿಲ್ ಚೌಧರಿ ಹೇಳಿದ್ದಾರೆ.

"ರೋಹಿತ್ ಒಬ್ಬ ಬುದ್ಧಿವಂತ ಕ್ರಿಕೆಟಿಗ. ನೋಡಲು ತೀರ ಸಾಮಾನ್ಯರಂತೆ ಕಾಣುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸಿ ಮಾತನಾಡಬೇಡಿ. ಇತರರ ಹೇಳಿಕೆ ಆಲಿಸಿ, ಅದಕ್ಕೆ ತಕ್ಕಂತೆ ಅಭಿಪ್ರಾಯಗಳನ್ನು ಹೇರಬೇಡಿ. ರೋಹಿತ್​ಗೆ ಆಟದ ಪ್ರಜ್ಞೆ ಚೆನ್ನಾಗಿದೆ. ಶರ್ಮರಂತಹ ಬ್ಯಾಟರ್​ಗಳಿದ್ದರೆ ನಮ್ಮಂತಹ ಅಂಪೈರ್​ಗಳ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಅವರು ಎಂದಿಗೂ ಗೊಂದಲದಿಂದ ಬ್ಯಾಟ್​ ಮಾಡೋದಿಲ್ಲ. 2013ರಲ್ಲಿ ಈಡೆನ್​ ಗಾರ್ಡನ್ಸ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಸಿಡಿಸಿದ 264 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ಅನ್ನು ಇಂದಿಗೂ ನಾನು ಮರೆತಿಲ್ಲ" ಎಂದು ಭಾರತ ತಂಡದ ನಾಯಕನನ್ನು ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net