ಯುಎಇ-ಕ್ರಿಕೆಟ್ ನಂಟು ಗಟ್ಟಿಗೊಳಿಸಲಿದೆ ಐಪಿಎಲ್

ipl uae connection
Published on

ಅಬುಧಾಬಿ: ಕರೊನಾ ಭೀತಿಯಿಂದಾಗಿ ವಿದೇಶಕ್ಕೆ ಸ್ಥಳಾಂತರಗೊಂಡಿರುವ ಭಾರತದ ಹೆಮ್ಮೆಯ ಕ್ರಿಕೆಟ್ ಐಪಿಎಲ್‌ಗೆ ಈ ಬಾರಿ ಯುಎಇ ಆತಿಥ್ಯ ವಹಿಸುತ್ತಿದೆ. ಅರಬ್ ರಾಷ್ಟ್ರ ಮತ್ತು ಕ್ರಿಕೆಟ್ ನಡುವಿನ ನಂಟು ಇನ್ನಷ್ಟು ಗಟ್ಟಿಯಾಗಲು ಐಪಿಎಲ್ ಟೂರ್ನಿ ನೆರವಾಗುವ ನಿರೀಕ್ಷೆ ಇದೆ.

ಕ್ರಿಕೆಟ್ ಅಥವಾ ಕ್ರೀಡಾ ರಾಷ್ಟ್ರವಾಗಿ ಯುಎಇ ದೊಡ್ಡ ಹೆಸರು ಮಾಡದಿದ್ದರೂ, ಕ್ರಿಕೆಟ್-ಕ್ರೀಡೆಗೆ ಅಪಾರವಾದ ಪ್ರೋತ್ಸಾಹ, ಆಶ್ರಯ ನೀಡುತ್ತ ಬಂದಿರುವ ಗಲ್ಫ್ ರಾಷ್ಟ್ರವಿದು. ಉಪಖಂಡ ಮತ್ತು ಯುಕೆ-ಆಸ್ಟ್ರೇಲಿಯಾ ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಇಲ್ಲಿ ಕ್ರಿಕೆಟ್ ಪ್ರೀತಿ ಜಾಸ್ತಿ. ಉಗ್ರಪೀಡಿತ ಪಾಕಿಸ್ತಾನದ ಪಂದ್ಯಗಳಿಗೆ ಇದು ಪರ್ಯಾಯ ತವರು ತಾಣ. ಪಾಕಿಸ್ತಾನ ಸೂಪರ್ ಲೀಗ್ ಕೂಡ ಇಲ್ಲೇ ನಡೆಯುತ್ತ ಬಂದಿದೆ. ಐಸಿಸಿಯ ಮುಖ್ಯ ಕಚೇರಿ ಇರುವುದು ದುಬೈನಲ್ಲೇ ಎಂಬುದು ಗಮನಾರ್ಹ.

ಇನ್ನು ತೈಲೋತ್ಪನ್ನದ ಜತೆಗೆ ಪ್ರವಾಸೋದ್ಯಮವೇ ಗಲ್ಫ್ ರಾಷ್ಟ್ರದ ಪ್ರಮುಖ ಆದಾಯ ಮೂಲ. ರಾಜಧಾನಿ ಅಬುಧಾಬಿ ವಿಶ್ವದ ಅಗ್ರ ಕ್ರೀಡಾ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ಈ ಮಧ್ಯಪ್ರಾಚ್ಯ ರಾಷ್ಟ್ರದಿಂದ ಇದುವರೆಗೆ ಹೇಳಿಕೊಳ್ಳುವಂಥ ಸ್ಟಾರ್ ಕ್ರೀಡಾಪಟುಗಳು ಬಂದಿಲ್ಲ. ಆದರೆ ಇಲ್ಲಿನ ಕ್ರೀಡಾ ವ್ಯವಸ್ಥೆಗಳು ಯಾವ ಕ್ರೀಡಾ ರಾಷ್ಟ್ರಗಳಿಗೂ ಕಡಿಮೆ ಇಲ್ಲ.

1984ರಿಂದ 1998ರವರೆಗೆ ಭಾರತ ತಂಡ ಶಾರ್ಜಾದಲ್ಲಿ ಹಲವಾರು ಸ್ಮರಣೀಯ ಪಂದ್ಯಗಳನ್ನು ಆಡಿದೆ. ಸಚಿನ್ ತೆಂಡುಲ್ಕರ್‌ರ ಮರುಭೂಮಿಯ ಬಿರುಗಾಳಿ ಇನ್ನಿಂಗ್ಸ್‌ಗಳು ಇನ್ನೂ ಹಚ್ಚಹಸಿರು. ಆದರೆ ಮ್ಯಾಚ್ ಫಿಕ್ಸಿಂಗ್ ಭುಗಿಲೆದ್ದ ಬಳಿಕ, ಇದು ಭೂಗತ ಪಾತಕಿಗಳ ಸುರಕ್ಷಿತ ತಾಣವೆನಿಸಿದ ಕಾರಣ ಭಾರತ ತಂಡ ಇಲ್ಲಿ ಪಂದ್ಯ ಆಡುವುದು ಬಹುತೇಕ ಕಡಿಮೆಯಾಗಿದೆ.

ಯುಎಇಯಲ್ಲೇ ಯಾಕೆ ಐಪಿಎಲ್?

ಕರೊನಾ ಹಾವಳಿಯಿಂದಾಗಿ ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವಾಗುವುದಿಲ್ಲ ಎನಿಸಿದಾಗ ಶ್ರೀಲಂಕಾ, ನ್ಯೂಜಿಲೆಂಡ್‌ನಿಂದಲೂ ಟೂರ್ನಿ ಆಯೋಜನೆಗೆ ಆಹ್ವಾನ ಬಂದಿತ್ತು. ಆದರೆ ಬಿಸಿಸಿಐ, ಯುಎಇಯನ್ನೇ ಆಯ್ಕೆ ಮಾಡಿಕೊಂಡಿದೆ. ಕರೊನಾ ಪ್ರಕರಣ ಇಲ್ಲಿ ನಿಯಂತ್ರಣದಲ್ಲಿರುವುದು, ಕ್ವಾರಂಟೈನ್ ಅವಧಿ ಕಡಿಮೆ ಇರುವುದರ ಸಹಿತ ಹಲವಾರು ಅಂಶಗಳು ಇದಕ್ಕೆ ಕಾರಣವಾಗಿದೆ.

ಸುಸಜ್ಜಿತ 3 ಕ್ರೀಡಾಂಗಣಗಳ ನಡುವೆ ಹೆಚ್ಚು ಅಂತರವಿಲ್ಲ. 2014ರಲ್ಲಿ ಟೂರ್ನಿಗೆ ಭಾಗಶಃ ಆತಿಥ್ಯ ವಹಿಸಿದ ಅನುಭವ. ಸುಲಭ ವಿಮಾನ ಸಂಚಾರ. ಭಾರತೀಯ ಕಾಲಮಾನದಿಂದ ಕೇವಲ ಒಂದೂವರೆ ಗಂಟೆ ಹಿಂದೆ. ದುಬೈನ ಐಸಿಸಿ ಅಕಾಡೆಮಿ ವ್ಯವಸ್ಥೆ ಅಭ್ಯಾಸಕ್ಕೆ ಅನುಕೂಲಕರ. ಜತೆಗೆ, ಯುಎಇಯಲ್ಲಿ ಆದಾಯ ತೆರಿಗೆ ಕಡಿಮೆ ಇದೆ ಎಂಬ ಅಂಶವೂ ವರದಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net