ಕಿರಿಯರ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಉಪಾಂತ್ಯಕ್ಕೇರಿದ ಭಾರತ

under 19 web
Published on

ದುಬೈ: ವೇಗಿ ರಾಜ್​ ಲಿಂಬಾನಿ (13ಕ್ಕೆ 7) ಮಾರಕ ಬೌಲಿಂಗ್​ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿ ಪುರುಷರ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯಲ್ಲಿ ನೇಪಾಳ ಎದುರು 10 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಉದಯ್​ ಸಹರಾನ್​ ಬಳಗ ಗುಂಪಿನ 2ನೇ ಸ್ಥಾನಿಯಾಗಿ ಸೆಮಿೈನಲ್​ ಸ್ಥಾನ ಖಚಿತಪಡಿಸಿಕೊಂಡಿದೆ.

ಮಂಗಳವಾರ ನಡೆದ ಎ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕ ಉದಯ್​ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್​ ಮಾಡಿದ ನೇಪಾಳ, ರಾಜ್​ ಲಿಂಬಾನಿ ದಾಳಿಗೆ ತತ್ತರಿಸಿ 22.1 ಓವರ್​ಗಳಲ್ಲಿ 52 ರನ್​ಗಳ ಅಲ್ಪಮೊತ್ತಕ್ಕೆ ಆಲೌಟ್​ ಆಯಿತು. ನೇಪಾಳ ಪರ ಯಾವೊಬ್ಬ ಬ್ಯಾಟರ್​ ಸಹ ಎರಡಂಕಿ ಮೊತ್ತ ದಾಟಲಿಲ್ಲ. ಪ್ರತಿಯಾಗಿ ಅರ್ಶಿನ್​ ಕುಲಕರ್ಣಿ (43*) ಹಾಗೂ ಆದರ್ಶ್​ ಸಿಂಗ್​ (13*) ಮುರಿಯದ ಮೊದಲ ವಿಕೆಟ್​ಗೆ 7.1 ಓವರ್​ಗಳಲ್ಲಿ 52 ರನ್​ ಸೇರಿಸಿ, ಇನ್ನೂ 42.5 ಓವರ್​ ಬಾಕಿಯಿರುವಂತೆಯೇ ಗೆಲುವು ತಂದರು.

ನೇಪಾಳ: 22.1 ಓವರ್​ಗಳಲ್ಲಿ 52 ( ಅರ್ಜುನ್​ 7,ದೇವ್​ 4, ಹೇಮಂತ್​ 8, ಆಕಾಶ್​ 4, ರಾಜ್​ 13ಕ್ಕೆ7, ಆರಾಧ್ಯ 31ಕ್ಕೆ2). ಭಾರತ: 7.1 ಓವರ್​ಗಳಲ್ಲಿ ವಿಕೆಟ್​ನಷ್ಟವಿಲ್ಲದೇ 52 (ಅರ್ಶಿನ್​ 43*, ಆದರ್ಶ್​ 13*).

2: ರಾಜ್​ ಲಿಂಬಾನಿ (13ಕ್ಕೆ7) 19 ವಯೋಮಿತಿ ಕ್ರಿಕೆಟ್​ನಲ್ಲಿ ಭಾರತದ ಪರ 2ನೇ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದರು. 2004ರಲ್ಲಿ ಪಾಕ್​ ಎದುರು ಇರ್ಫಾನ್​ ಪಠಾಣ್​ (16ಕ್ಕೆ 9) ಕಬಳಿಸಿದ್ದು ಶ್ರೇಷ್ಠ ಸಾಧನೆಯಾಗಿದೆ.

ಬಾಂಗ್ಲಾ/ಲಂಕಾ ಎದುರಾಳಿ?

ಭಾರತ ತಂಡಕ್ಕೆ ಸೆಮೀಸ್​ನಲ್ಲಿ ಬಾಂಗ್ಲಾದೇಶ ಅಥವಾ ಶ್ರೀಲಂಕಾ ಎದುರಾಳಿಯಾಗುವ ಸಾಧ್ಯತೆಗಳಿವೆ. ಎ ಗುಂಪಿನಲ್ಲಿ ಪಾಕ್​ ಎಲ್ಲ 3 ಪಂದ್ಯ ಗೆದ್ದು ಅಗ್ರಸ್ಥಾನಿಯಾಗಿದ್ದರೆ, ಭಾರತ 2ನೇ ಸ್ಥಾನ ಪಡೆದಿದೆ. ಭಾರತ ಸೆಮೀಸ್​ನಲ್ಲಿ ಬಿ ಗುಂಪಿನ ಅಗ್ರಸ್ಥಾನಿಯನ್ನು ಎದುರಿಸಲಿದೆ. ಬಾಂಗ್ಲಾ&ಲಂಕಾ ಬುಧವಾರ ಕೊನೇ ಲೀಗ್​ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದು, ಗೆದ್ದ ತಂಡ ಭಾರತಕ್ಕೆ ಎದುರಾಳಿಯಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net