

ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಟೀಮ್ ಮ್ಯಾನೇಜ್ಮೆಂಟ್ ಪ್ರಮುಖ ನಿರ್ಧಾರ ಒಂದನ್ನು ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಧರ್ಮಾಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ತಂಡದ ಇಬ್ಬರು ಪ್ರಮುಖ ಆಟಗಾರರಿಗೆ ರೆಸ್ಟ್ ನೀಡಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದು, ಮುಂಬರುವ ಐಪಿಎಲ್ ಹಾಗೂ ಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಯಾವೆಲ್ಲಾ ಆಟಗಾರರಿಗೆ ರೆಸ್ಟ್ ನೀಡಲಾಗುತ್ತದೆ ಎಂದು ಈವರೆಗೆ ತಿಳಿದು ಬಂದಿಲ್ಲ.
ಸುದ್ದಿ ಮೂಲಗಳ ಪ್ರಕಾರ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸ್ ಆಗಲಿದ್ದು, ಇವರ ಬದಲಿಗೆ ವೇಗಿ ಒಬ್ಬರು ತಂಡದಿಂದ ಹೊರಗುಳಿಯಲಿದ್ದಾರೆ. ಉಳಿದಂತೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರು ಅಂತಿಮ ಟೆಸ್ಟ್ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕ್ವಾಡ್ರೈಸ್ಪ್ಸ್ನಿಂದ ಬಳಲುತ್ತಿರುವ ರಾಹುಲ್ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಬಿಸಿಸಿಐ ತಜ್ಞರ ಅಭಿಪ್ರಾಯಕ್ಕಾಗಿ ಲಂಡನ್ಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ.