ಶೇನ್ ವಾರ್ನ್‌ಗೆ ಸ್ಪಿನ್ ಬೌಲಿಂಗ್​ ಬಗ್ಗೆ ಪಾಠ ಮಾಡಿ ಟ್ರೋಲ್ ಆದ ಕ್ರಿಕೆಟ್ ಅಭಿಮಾನಿ!

warne web
Published on

ನವದೆಹಲಿ: ಸ್ಪಿನ್ ಬೌಲಿಂಗ್‌ಗೆ ಮತ್ತೊಂದು ಹೆಸರು ಎಂಬಷ್ಟು ಜನಪ್ರಿಯರು ಶೇನ್ ವಾರ್ನ್. ಆಸ್ಟ್ರೇಲಿಯಾದ ಈ ಸ್ಪಿನ್ ಮಾಂತ್ರಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ಕೈಚಳಕದ ಮೂಲಕ ವಿಶ್ವದ ಎಲ್ಲ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಅಂಥಾ ಶೇನ್ ವಾರ್ನ್‌ಗೆ ಕ್ರಿಕೆಟ್ ಅಭಿಮಾನಿಯೊಬ್ಬ ಇದೀಗ ಸ್ಪಿನ್ ಬೌಲಿಂಗ್ ಪಾಠ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಟ್ರೋಲ್‌ಗಳಿಗೆ ಆಹಾರವಾಗಿದ್ದಾನೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಈ ಅಭಿಮಾನಿಯನ್ನು ಟ್ರೋಲ್ ಮಾಡಿದ್ದಾರೆ.

ಭಾರತ ವಿರುದ್ಧ ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸ್ಪಿನ್ ಬೌಲರ್‌ಗಳಿಲ್ಲದೆ ಕಣಕ್ಕಿಳಿದಿದೆ. ಇದಕ್ಕಾಗಿ ಶೇನ್ ವಾರ್ನ್ ನ್ಯೂಜಿಲೆಂಡ್ ತಂಡವನ್ನು ಟೀಕಿಸಿದ್ದು, ‘ನ್ಯೂಜಿಲೆಂಡ್ ತಂಡ ಓರ್ವ ಸ್ಪಿನ್ ಬೌಲರ್‌ಅನ್ನು ಆಡಿಸದಿರುವುದು ಭಾರಿ ನಿರಾಸೆ ತಂದಿದೆ. ಪಿಚ್‌ನಲ್ಲಿ ಈಗಾಗಲೆ ಕಾಲಿನ ಹೆಜ್ಜೆ ಗುರುತುಗಳು ದೊಡ್ಡದಾಗಿ ರೂಪುಗೊಳ್ಳುತ್ತಿರುವುದರಿಂದ ಸ್ಪಿನ್ ಬೌಲಿಂಗ್ ದೊಡ್ಡ ಪಾತ್ರ ವಹಿಸಲಿದೆ. ಭಾರತ 275/300ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದರೆ, ಮಳೆ ಅಡಚಣೆಯ ಹೊರತಾಗಿ ಪಂದ್ಯದಲ್ಲಿ ನ್ಯೂಜಿಲೆಂಡ್ ಕಥೆ ಮುಗಿದಂತೆಯೇ’ ಎಂದು ಟ್ವೀಟಿಸಿದ್ದರು.

ಆದರೆ ಶೇನ್ ವಾರ್ನ್ ವಾದವನ್ನು ಒಪ್ಪಿಕೊಳ್ಳದ ಅಭಿಮಾನಿಯೊಬ್ಬ, ‘ಶೇನ್ ವಾರ್ನ್ ಅವರೇ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ಪಿಚ್ ಒಣಗಬೇಕು. ಆದರೆ ಮಳೆಯಿಂದಾಗಿ ಈ ಪಿಚ್ ಪಂದ್ಯದ ಉಳಿದ ಸಮಯದಲ್ಲೂ ಒಣಗಲಾರದು’ ಎಂದು ಪ್ರತಿ ಟ್ವೀಟ್ ಮಾಡಿದ್ದಾನೆ. ಟೆಸ್ಟ್ ಕ್ರಿಕೆಟ್‌ನ 708 ವಿಕೆಟ್ ಸಹಿತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1001 ವಿಕೆಟ್ ಕಬಳಿಸಿರುವ ಶೇನ್ ವಾರ್ನ್ ಅವರಿಗೇ ಸ್ಪಿನ್ ಬಗ್ಗೆ ತಿಳಿ ಹೇಳಿರುವ ಈ ಕಾಮೆಂಟ್‌ಗೆ ಹಲವಾರು ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ. ‘ಮೆಕ್ಕಾ’ ಹೆಸರಿನಲ್ಲಿ ಕ್ರಿಕೆಟ್ ಅಭಿಮಾನಿ ಮಾಡಿರುವ ಈ ಕಾಮೆಂಟ್ 15 ಸಾವಿರ ಲೈಕ್ಸ್ ಪಡೆದಿದ್ದು, 21 ಸಾವಿರ ರೀಟ್ವೀಟ್ ಆಗಿದೆ. 15 ಸಾವಿರ ಮಂದಿ ಇದೇ ಟ್ವೀಟ್ ಅನ್ನು ಕೋಟ್ ಮಾಡಿದ್ದರೆ, 600 ಮಂದಿ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಶೇನ್ ವಾರ್ನ್ ಟ್ವೀಟ್‌ಗೆ ಅಭಿಮಾನಿಯ ಪ್ರತಿಕ್ರಿಯೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ‘ಇದನ್ನು ಫ್ರೇಮ್ ಮಾಡಿಟ್ಟುಕೊಳ್ಳಿ, ಶೇನ್ ವಾರ್ನ್ ಅವರೇ ನೀವೂ ಸ್ಪಿನ್ ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳಿ’ ಎಂದು ನಗುವಿನ ಇಮೋಜಿ ಟ್ವೀಟಿಸಿದ್ದಾರೆ. ಆ ಅಭಿಮಾನಿಯ ಆತ್ಮವಿಶ್ವಾಸವನ್ನು ನಿಜಕ್ಕೂ ಮೆಚ್ಚಲೇಬೇಕು ಎಂದು ಇನ್ನೂ ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ಆತನಿಂದ ಶೇನ್ ವಾರ್ನ್ ಸ್ಪಿನ್ ಬೌಲಿಂಗ್ ಬಗ್ಗೆ ಕೆಲವು ಟಿಪ್ಸ್ ಪಡೆದುಕೊಳ್ಳಲಿ ಎಂದು ತಮಾಷೆ ಮಾಡಿದ್ದಾರೆ. ಸ್ಪಿನ್​ ಬೌಲಿಂಗ್​ ಬಗ್ಗೆ ಯಾರೊಂದಿಗೆ ಮಾತನಾಡುತ್ತಿದ್ದೀರಿ ಗೊತ್ತಿದೆಯೇ ಎಂದೂ ಇನ್ನು ಕೆಲವರು ಆ ಅಭಿಮಾನಿಯನ್ನು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net