More

    ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್‌ಗೆ ಫ್ಲೈಯಿಂಗ್ ಸಿಖ್ ಹೆಸರು ನೀಡಿದ್ದು ಯಾರು ಗೊತ್ತೇ?

    ನವದೆಹಲಿ: ಕರೊನಾ ಸಂಬಂಧಿಸಿದ ಸಮಸ್ಯೆಯಿಂದಾಗಿ ಶುಕ್ರವಾರ ತಡರಾತ್ರಿ ಇಹಲೋಕವನ್ನು ತ್ಯಜಿಸಿದ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್‌ಗೆ ಭಾರತೀಯ ಕ್ರೀಡಾಲೋಕವೇ ಕಂಬನಿ ಮಿಡಿದಿದೆ. ಸ್ವತಂತ್ರ ಭಾರತದ ಮೊದಲ ಕ್ರೀಡಾ ಸೂಪರ್‌ಸ್ಟಾರ್ ಆಗಿ ಜಾಗತಿಕ ಮಟ್ಟದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ಮಿಲ್ಖಾ ಸಿಂಗ್ ‘ಫ್ಲೈಯಿಂಗ್ ಸಿಖ್’ ಅಥವಾ ಹಾರುವ ಸಿಖ್ ಎಂದೇ ಜನಪ್ರಿಯತೆ ಗಳಿಸಿದ್ದರು. ಫ್ಲೈಯಿಂಗ್ ಸಿಖ್ ಯಾರು ಎಂದು ಕೇಳಿದರೆ ಭಾರತದ ಪ್ರತಿ ಕ್ರೀಡಾಪ್ರೇಮಿಯ ಬಳಿಯೂ ಮಿಲ್ಖಾ ಸಿಂಗ್ ಎಂಬ ಹೆಸರು ಸಿದ್ಧವಾಗಿರುತ್ತಿತ್ತು. ಆದರೆ ಮಿಲ್ಖಾ ಸಿಂಗ್‌ಗೆ ಈ ಹೆಸರು ದೊರೆತಿದ್ದು ಪಾಕಿಸ್ತಾನಿಯರಿಂದ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ!

    ಮಿಲ್ಖಾ ಸಿಂಗ್‌ಗೆ 1960ರಲ್ಲಿ ಪಾಕಿಸ್ತಾನದ ಆಗಿನ ಸೇನಾ ಮುಖ್ಯಸ್ಥ ಜನರಲ್ ಆಯುಬ್ ಖಾನ್ ‘ಫ್ಲೈಯಿಂಗ್ ಸಿಖ್’ ಎಂಬ ಹೆಸರು ನೀಡಿದ್ದರು. 1958ರಲ್ಲಿ ಮಿಲ್ಖಾ ಏಷ್ಯಾಡ್‌ನಲ್ಲಿ 2 ಮತ್ತು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 1 ಚಿನ್ನ ಗೆದ್ದು ವೃತ್ತಿಜೀವನದ ಶ್ರೇಷ್ಠ ವರ್ಷ ಕಂಡ ಬೆನ್ನಲ್ಲೇ, ಪಾಕಿಸ್ತಾನದ ಪ್ರಮುಖ ಓಟಗಾರ ಅಬ್ದುಲ್ ಖಾಲಿಕ್ ಜತೆ ರೇಸ್‌ನಲ್ಲಿ ಪಾಲ್ಗೊಳ್ಳುವಂತೆ ಲಾಹೋರ್‌ಗೆ ಆಹ್ವಾನಿಸಲಾಗಿತ್ತು. ದೇಶ ವಿಭಜನೆಯ ಕಹಿನೆನಪಿನಿಂದ ಮಿಲ್ಖಾ ಇದಕ್ಕೆ ಹಿಂದೇಟು ಹಾಕಿದ್ದರೂ, ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರು, ಮಿಲ್ಖಾ ಮನವೊಲಿಸಿದ್ದರು.

    ಇದನ್ನೂ ಓದಿ: VIDEO| ರೊನಾಲ್ಡೊ ಕೋಕಾಕೋಲಾ ಬಾಟಲಿ ಬದಿಗೆ ಸರಿಸಿದ ಅಸಲಿ ಕಾರಣ ಹೇಳುತ್ತಿವೆ ಮೀಮ್ಸ್!

    ಖಾಲಿಕ್ ಜತೆಗಿನ ಓಟದಲ್ಲಿ ಮಿಲ್ಖಾ ಗೆದ್ದ ಬಳಿಕ ಜನರಲ್ ಆಯುಬ್ ಖಾನ್, ‘ಮಿಲ್ಖಾ ಜೀ ನೀವು ಪಾಕಿಸ್ತಾನದಲ್ಲಿ ಓಡಲಿಲ್ಲ, ಹಾರಿದಿರಿ’ ಎಂದಿದ್ದರು. ನಂತರ ಮಿಲ್ಖಾ ‘ಹಾರುವ ಸಿಖ್’ ಎಂದೇ ಖ್ಯಾತರಾಗಿದ್ದರು. ಇದಕ್ಕೆ ಮುನ್ನ 1958ರ ಏಷ್ಯಾಡ್‌ನಲ್ಲಿ 200 ಮೀಟರ್ ಓಟದ ಫೈನಲ್‌ನಲ್ಲಿ ಮಿಲ್ಖಾ ಸಿಂಗ್, ಅಬ್ದುಲ್ ಖಾಲಿಕ್ ಜತೆಗೆ ಫೋಟೋಫಿನಿಶ್​ನಲ್ಲಿ ಸ್ವರ್ಣ ಪದಕ ಒಲಿಸಿಕೊಂಡಿದ್ದರು. ನಂತರದಲ್ಲಿ ಪಾಕಿಸ್ತಾನ ಅಥ್ಲೆಟಿಕ್ಸ್ ತಂಡದ ಕೋಚ್, ಮಿಲ್ಖಾ ಸಿಂಗ್‌ಗೆ ಲಾಹೋರ್‌ನಲ್ಲಿ ಬಂದು ಖಾಲಿಕ್ ವಿರುದ್ಧ ಓಡಿ ಗೆದ್ದುತೋರಿಸುವಂತೆ ಸವಾಲೊಡ್ಡಿದ್ದರು.

    ಮಿಲ್ಖಾ ಸಿಂಗ್ 1929ರ ನವೆಂಬರ್ 20 ರಂದು ಪಾಕಿಸ್ತಾನದ ಗೋವಿಂದ್‌ಪುರದಲ್ಲಿ (ಈಗ ಫೈಸಲಾಬಾದ್) ಜನಿಸಿದ್ದರು. 1947ರಲ್ಲಿ ದೇಶ ವಿಭಜನೆ ಸಮಯದಲ್ಲಿ ಅವರ ಕಣ್ಣೆದುರಲ್ಲೇ ತಂದೆ-ತಾಯಿ ಹತ್ಯೆಯಾಯಿತು. ಬಳಿಕ ಮಿಲ್ಖಾ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಿತು. ಜೀವನ ಸಾಗಿಸುವ ಸಲುವಾಗಿ ಹೋಟೆಲ್‌ಗಳಲ್ಲಿ ಕೆಲಸ ನಿರ್ವಹಿಸಿದರು. ದೈಹಿಕವಾಗಿ ಸದೃಢರಾಗಿದ್ದ ಮಿಲ್ಖಾ ಬಳಿಕ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು.

    ‘ಫ್ಲೈಯಿಂಗ್‌ ಸಿಖ್’ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್​ ಕರೊನಾಗೆ ಬಲಿ, ಅವರ ಕೊನೇ ಆಸೆ ಈಡೇರಲೇ ಇಲ್ಲ

    VIDEO: ಸರ್ಕಾರಿ ಗೌರವಗಳೊಂದಿಗೆ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಅಂತ್ಯಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts