

ನವದೆಹಲಿ: ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಯುರೋ ಕಪ್ ಟೂರ್ನಿಯ ಸುದ್ದಿಗೋಷ್ಠಿಯ ವೇಳೆ ಕೋಕಾಕೋಲಾ ಬಾಟಲಿಗಳನ್ನು ಬದಿಗೆ ಸರಿಸಿ, ಇದಕ್ಕೆ ಬದಲಾಗಿ ನೀರು ಕುಡಿಯಿರಿ ಎಂಬ ಸಂದೇಶ ರವಾನಿಸಿದ್ದು ಜಾಗತಿಕ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಸಂಚಲನ ಮೂಡಿಸಿದೆ. ಇದರಿಂದಾಗಿ ಕೋಕಾಕೋಲಾ ಕಂಪನಿ ಸುಮಾರು 30 ಸಾವಿರ ಕೋಟಿ ರೂಪಾಯಿ ನಷ್ಟವನ್ನೂ ಅನುಭವಿಸಿದೆ. ಈ ನಡುವೆ ಭಾರತದ ನೆಟ್ಟಿಗರು ರೊನಾಲ್ಡೊ ಕೋಕಾಕೋಲಾ ಕಂಪನಿ ಬಾಟಲಿ ಬದಿಗೆ ಸರಿಸಿದ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ!
ಹೌದು, ರೊನಾಲ್ಡೊ ಯಾವ ಕಾರಣಕ್ಕಾಗಿ ಕೋಕ್ ಬಾಟಲಿ ಬದಿಗೆ ಸರಿಸಿರಬಹುದೆಂದು ವಿವಿಧ ಮೀಮ್ಸ್‌ಗಳ ಮೂಲಕ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ನಗುವನ್ನು ಹಬ್ಬಿಸುತ್ತಿದ್ದಾರೆ. ಫಿಟ್ನೆಸ್ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ರೊನಾಲ್ಡೊ, ಸಂದೇಶದ ಹಿಂದೆ ಆರೋಗ್ಯದ ಕಳಕಳಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ನೆಟ್ಟಿಗರ ಪ್ರಕಾರ ರೊನಾಲ್ಡೊ ಬಾಟಲಿ ಬದಿಗೆ ಸರಿಸಿದ್ದಕ್ಕೆ ಇದಕ್ಕಿಂತ ಭಿನ್ನವಾದ ತಮಾಷೆಯ ಕಾರಣಗಳಿವೆ! ಈ ಬಗೆಗಿನ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ.
ರೊನಾಲ್ಡೊ ಸುದ್ದಿಗೋಷ್ಠಿಯ ವಿಡಿಯೋ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಡುವೆ ಟಿವಿ ಹಿಂದಿನಿಂದ ಕೋಕಾಕೋಲಾ ಬಾಟಲಿಗಳನ್ನು ಪಡೆದುಕೊಳ್ಳುವಂಥ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಗು ತರಿಸುತ್ತಿವೆ. ಕೋಕಾಕೋಲಾಗೆ ಬದಲಾಗಿ ಬಾಲಿವುಡ್ ನಟಿ ಅಮೃತಾ ರಾವ್ ಹಾಲಿನ ಬಾಟಲಿ ನೀಡುವುದನ್ನು ರೊನಾಲ್ಡೊ ಸ್ವೀಕರಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ರೊನಾಲ್ಡೊ ಕೋಕಾಕೋಲಾ ಚಾಲೆಂಜ್ ಹೆಸರಿನ ಹ್ಯಾಷ್‌ಟ್ಯಾಗ್‌ನೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಇಂಥ ತಮಾಷೆಯ ಹಲವು ವಿಡಿಯೋಗಳು ಹರಿದಾಡುತ್ತಿವೆ.