

IPL 2025| ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಡು ಹಾಗೂ ಗಾಳಿ ಸಹಿತ ಭಾರೀ ಮಳೆ ಆಗ್ತಿದೆ. ಇದರಿಂದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಅಡ್ಡಿಯಾಗಿದೆ. ಮುಂದಿನ ಮೂರು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು (ಮೇ.17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಮೊದಲ ಐಪಿಎಲ್ ಪುನಾರಂಭ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದು, ನಂ.18 ಟೆಸ್ಟ್ ಜೆರ್ಸಿ ತೊಡುವ ಮೂಲಕ ಕಿಂಗ್ ಕೊಹ್ಲಿಗೆ ಗೌರವ ಸೂಚಿಸಲು ಎದುರುನೋಡುತ್ತಿದ್ದಾರೆ. ಒಂದೆಡೆ ಕೊಹ್ಲಿ ಅವರ ನಂ.18 ಟೆಸ್ಟ್ ಜೆರ್ಸಿಗಳು ಭರ್ಜರಿ ಮಾರಾಟ ಕಂಡಿದ್ದೇ ಆದರೂ ಅಭಿಮಾನಿಗಳ ಉತ್ಸಾಹಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಮುಂದಿನ ಎರಡು ದಿನಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ಪ್ರಕಟಿಸಿದೆ. ಅಂತೆಯೇ, ಇಂದು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋರು ಮಳೆಯಾಗುತ್ತಿದೆ.
ಆರ್‌ಸಿಬಿ ಅಭಿಮಾನಿಗಳು ಕೆಕೆಆರ್ ವಿರುದ್ಧ ಗೆಲುವು ನಿರೀಕ್ಷೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಇದೀಗ ಅವರೆಲ್ಲರಿಗೂ ನಿರಾಸೆ ಆಗಿದೆ.