

ಪ್ಯಾರಿಸ್: 14ನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿರುವ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದರೆ, ವಿಶ್ವ ನಂ. 1 ಆಶ್ಲೆಗ್ ಬಾರ್ಟಿ ಗಾಯದ ಸಮಸ್ಯೆ ಹೋರಾಡಿ ಮೊದಲ ಸುತ್ತು ದಾಟುವಲ್ಲಿ ಸಲರಾದರು. ಸೆರೇನಾ ವಿಲಿಯಮ್ಸ್, ಸೋಫಿಯಾ ಕೆನಿನ್ ಮತ್ತು ಎಲಿನಾ ಸ್ವಿಟೋಲಿನಾ ಸುಲಭವಾಗಿ ಮೊದಲ ಸುತ್ತು ದಾಟಿದ್ದಾರೆ.
3ನೇ ಶ್ರೇಯಾಂಕಿತ ಸ್ಪೇನ್ ತಾರೆ ನಡಾಲ್ 6-3, 6-2, 7-6ರಿಂದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್ ವಿರುದ್ಧ ಜಯಿಸಿದರು. ದಾಖಲೆಯ 22ನೇ ಗ್ರಾಂಡ್ ಸ್ಲಾಂ ಗೆಲುವಿನ ಹಂಬಲದಲ್ಲಿರುವ ನಡಾಲ್‌ಗೆ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ಇದು 101ನೇ ಜಯವಾಗಿದೆ.
ಆಸ್ಟ್ರೇಲಿಯಾದ ತಾರೆ ಬಾರ್ಟಿ ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕದ ಬೆರ್ನಾರ್ಡ ಪೆರಾ ವಿರುದ್ಧ 6-4, 3-6, 6-2ರಿಂದ ಜಯಿಸಿದರು. ಕಾಲು ನೋವಿಗಾಗಿ 2ನೇ ಸೆಟ್ ಬಳಿಕ ವೈದ್ಯಕೀಯ ಟೈಮ್‌ಔಟ್ ತೆಗೆದುಕೊಂಡ ಬಾರ್ಟಿ, 3ನೇ ಸೆಟ್‌ನಲ್ಲಿ ಜಯ ಒಲಿಸಿಕೊಳ್ಳುವಲ್ಲಿ ಸಲರಾದರು. 5ನೇ ಶ್ರೇಯಾಂಕಿತೆ ಸ್ವಿಟೋಲಿನಾ 6-2, 7-5ರಿಂದ ್ರಾನ್ಸ್‌ನ ಒಸಿಯನ್ ಬಬೆಲ್ ವಿರುದ್ಧ ಜಯಿಸಿದರು. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸ್ವಿಟೋಲಿನಾ ಗೆಳೆಯ ಗೇಲ್ ಮಾನ್‌ಫಿಲ್ಸ್ ಕೂಡ ಮುನ್ನಡೆ ಸಾಧಿಸಿದರು.
2ನೇ ಸುತ್ತಿಗೇರಿದ ಸೆರೇನಾ, ಕೆನಿನ್
ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್, ಆಸ್ಟ್ರೇಲಿಯನ್ ಓಪನ್ ಮಾಜಿ ಚಾಂಪಿಯನ್ ಸೋಫಿಯಾ ಕೆನಿನ್, ಸ್ವಿಸ್ ತಾರೆ ಬೆಲಿಂಡಾ ಬೆನ್ಸಿಕ್ ಶುಭಾರಂಭ ಕಂಡಿದ್ದಾರೆ. 7ನೇ ಶ್ರೇಯಾಂಕಿತೆ ಸೆರೇನಾ ವಿಲಿಯಮ್ಸ್ ಮೊದಲ ಸುತ್ತಿನಲ್ಲಿ ರೊಮೇನಿಯಾದ ಇರಿನಾ ಕ್ಯಾಮೆಲಿಯ ಬೆಗು ವಿರುದ್ಧ 7-6 (6), 6-2 ಸೆಟ್‌ಗಳಿಂದ ಸ್ವಲ್ಪಮಟ್ಟಿಗೆ ತಿಣುಕಾಡಿ ಗೆದ್ದರು. ಸೆರೇನಾ ತಾಯಿಯಾದ ಬಳಿಕ 4 ಗ್ರಾಂಡ್ ಸ್ಲಾಂಗಳಲ್ಲಿ ಫೈನಲ್‌ಗೇರಿದ್ದರೂ, ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಡುತ್ತ ಬಂದಿದ್ದಾರೆ. ಅಮೆರಿಕದ ಮತ್ತೋರ್ವ ತಾರೆ ಸೋಫಿಯಾ ಕೆನಿನ್ 6-4, 4-6, 6-3ರಿಂದ ಮಾಜಿ ಚಾಂಪಿಯನ್ ಜೆಲೆನಾ ಒಸ್ತಾಪೆಂಕೊ ವಿರುದ್ಧ ಜಯಿಸಿದರೆ, 10ನೇ ಶ್ರೇಯಾಂಕಿತೆ ಬೆನ್ಸಿಕ್ 6-0, 6-3ರಿಂದ ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ವಿರುದ್ಧ ಗೆಲುವು ಸಾಧಿಸಿದರು.
ಮುಗ್ಗರಿಸಿದ ಮುಗುರುಜಾ
ಮಾಜಿ ಚಾಂಪಿಯನ್ ಗಾರ್ಬಿನ್ ಮುಗುರುಜಾ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. 2016ರ ಚಾಂಪಿಯನ್ ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾ 1-6, 4-6ರಿಂದ ಉಕ್ರೇನ್‌ನ ಮಾರ್ಟಾ ಕೊಸ್ಟಿಯುಕ್‌ಗೆ ಶರಣಾದರು.
ಹೊರನಡೆದ ಒಸಾಕ
ಫ್ರೆಂಚ್ ಓಪನ್‌ನಲ್ಲಿ ಸುದ್ದಿಗೋಷ್ಠಿಗೆ ಹಾಜರಾಗದೆ 10 ಲಕ್ಷ ರೂ. ದಂಡ ಶಿಕ್ಷೆಗೂ ಗುರಿಯಾಗಿದ್ದ 4 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಜಪಾನ್‌ನ ನವೊಮಿ ಒಸಾಕ, ಮಾನಸಿಕ ತಲ್ಲಣದ ಕಾರಣ ನೀಡಿ 2ನೇ ಪಂದ್ಯವಾಡದೆಯೇ ಟೂರ್ನಿಯಿಂದ ಹೊರನಡೆದಿದ್ದಾರೆ. ಇದಕ್ಕಾಗಿ ದಂಡ ಶಿಕ್ಷೆಗೆ ಗುರಿಯಾದ ಬಳಿಕ, ಮುಂದೆಯೂ ನಿಯಮ ಉಲ್ಲಂಘನೆ ಮಾಡಿದರೆ ಟೂರ್ನಿಯಿಂದಲೇ ಹೊರದಬ್ಬಲ್ಪಡುವ ಅಪಾಯ ಎದುರಿಸಿದ್ದರು. ಒಸಾಕ ನಿರ್ಧಾರಕ್ಕೆ ಟೆನಿಸ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬೋಪಣ್ಣ ಜೋಡಿಗೆ ಜಯ
ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಷಿಯಾದ ಫ್ರಾಂಕೊ ಸ್ಕುಗರ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಜಾರ್ಜಿಯದ ಬಸಿಲಶ್ವಿಲಿ ಮತ್ತು ಜರ್ಮನಿಯ ಬೆಗೆಮನ್ ಜೋಡಿಗೆ 6-4, 6-2ರಿಂದ ಸೋಲುಣಿಸಿ 2ನೇ ಸುತ್ತಿಗೇರಿದೆ.