More

    ಕ್ರಿಕೆಟ್ ವಿಶ್ವಕಪ್‌ಗೆ ಮಹತ್ವದ ಬದಲಾವಣೆಗಳನ್ನು ತಂದ ಐಸಿಸಿ

    ದುಬೈ: ಏಕದಿನ ಮತ್ತು ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲು, ಮಂಗಳವಾರ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರನ್ವಯ 2024ರಿಂದ ಪ್ರತಿ 2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ನಡೆಯಲಿದ್ದರೆ, 2027ರಿಂದ ಏಕದಿನ ವಿಶ್ವಕಪ್‌ನಲ್ಲಿ ಆಡುವ ತಂಡಗಳ ಸಂಖ್ಯೆ 14ಕ್ಕೆ ಏರಿಕೆಯಾಗಲಿದೆ. ಇದಲ್ಲದೆ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಯನ್ನೂ ಮತ್ತೊಮ್ಮೆ ಆಯೋಜಿಸಲು ಐಸಿಸಿ ನಿರ್ಧರಿಸಿದೆ.

    2027 ಮತ್ತು 2031ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ತಂಡಗಳ ಸಂಖ್ಯೆ 10ರಿಂದ 14ಕ್ಕೆ ಏರಲಿದ್ದು, ಒಟ್ಟು 54 ಪಂದ್ಯಗಳು ನಡೆಯಲಿವೆ. 2023ರ ವಿಶ್ವಕಪ್‌ನಲ್ಲಿ ಮಾತ್ರ 10 ತಂಡಗಳೇ ಆಡಲಿವೆ. ಇನ್ನು 2024, 2026, 2028 ಮತ್ತು 2030ರ ಟಿ20 ವಿಶ್ವಕಪ್‌ಗಳಲ್ಲಿ 20 ತಂಡಗಳು ಆಡಲಿದ್ದು, ಒಟ್ಟು ತಲಾ 55 ಪಂದ್ಯಗಳ ಟೂರ್ನಿ ಇದಾಗಿರುತ್ತದೆ.

    ಇದನ್ನೂ ಓದಿ: ಟೀಮ್ ಇಂಡಿಯಾ ಕ್ರಿಕೆಟಿಗರ ಕುಟುಂಬ ಸದಸ್ಯರಿಗೂ ಬ್ರಿಟನ್ ಟಿಕೆಟ್

    2025 ಮತ್ತು 2029ರಲ್ಲಿ ಮತ್ತೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಅಗ್ರ 8 ತಂಡಗಳು ಟೂರ್ನಿಯಲ್ಲಿ ಆಡಲಿವೆ. 2017ರಲ್ಲಿ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ನಡೆದಿದೆ. ಇನ್ನು 2025, 2027, 2029 ಮತ್ತು 2031ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಗಳು ನಡೆಯಲಿವೆ ಎಂದೂ ಐಸಿಸಿ ತಿಳಿಸಿದೆ. ಈ ಟೂರ್ನಿಗಳ ಆತಿಥೇಯ ದೇಶಗಳನ್ನು ಐಸಿಸಿ ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಿದೆ.

    ಐಸಿಸಿ ಸಭೆಯ ಪ್ರಮುಖ ನಿರ್ಧಾರಗಳು:
    *2024ರಿಂದ 2030ರ ನಡುವೆ ಪ್ರತಿ 2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ಆಯೋಜನೆ ಮತ್ತು ಆಡುವ ತಂಡಗಳ ಸಂಖ್ಯೆ 20ಕ್ಕೆ ಏರಿಕೆ.
    *2027 ಮತ್ತು 2031ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ತಂಡಗಳ ಸಂಖ್ಯೆ 10ರಿಂದ 14ಕ್ಕೆ ಏರಿಕೆ.
    *2025 ಮತ್ತು 2029ರಲ್ಲಿ 8 ತಂಡಗಳ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ ಆಯೋಜನೆ.
    *2023ರಿಂದ 2032ರವರೆಗೆ 8 ವರ್ಷಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ 4 ಆವೃತ್ತಿ ಆಯೋಜನೆ.

    ಭಾರತಕ್ಕೆ ಜೂನ್ 28ರವರೆಗೆ ಸಮಯಾವಕಾಶ
    ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಭಾರತದಲ್ಲೇ ಉಳಿಸಿಕೊಳ್ಳುವ ಬಗೆಗಿನ ನಿರ್ಧಾರಕ್ಕಾಗಿ ಬಿಸಿಸಿಐ ಒಂದು ತಿಂಗಳ ಸಮಯ ಕೇಳಿದ ಹಿನ್ನೆಲೆಯಲ್ಲಿ ಐಸಿಸಿ ಜೂನ್ 28ರವರೆಗೆ ಗಡುವು ನೀಡಿದೆ. ಮಂಗಳವಾರ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಅಂತಿಮ ನಿರ್ಧಾರಕ್ಕೆ ಒಂದು ತಿಂಗಳು ಸಮಯ ಕೇಳಿದರು. ಇದಕ್ಕೆ ಐಸಿಸಿ ಮಂಡಳಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದು, ಕರೊನಾ ವೈರಸ್ 2ನೇ ಅಲೆಗೆ ತತ್ತರಿಸಿರುವ ದೇಶದ ಆರೋಗ್ಯ ಪರಿಸ್ಥಿತಿಯ ಸಮಗ್ರ ಪರಿಶೀಲನೆಗೆ ಸೂಚಿಸಿದೆ. ಭಾರತದಲ್ಲಿ ಕರೊನಾ ಹಾವಳಿ ನಿಯಂತ್ರಣಕ್ಕೆ ಬಾರದಿದ್ದರೆ, ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಐಸಿಸಿ ಬದಲಿ ಯೋಜನೆ ಹೊಂದಿದೆ. ಆಗಲೂ ಟೂರ್ನಿ ಆತಿಥ್ಯ ಹಕ್ಕು ಬಿಸಿಸಿಐ ಬಳಿಯೇ ಇರುವ ಸಾಧ್ಯತೆಯೂ ಇದೆ.

    ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

    ಜೀವನದ ಎರಡನೇ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts