ಈ ಕಲ್ಯಾಣಪುರದೊಳಗೆ ಮಹಾಪ್ರಮಥರು, ಪುರಾತನರು, ಅಸಂಖ್ಯಾತ ಮಹಾಗಣಗಳಿಗೆ ಪ್ರಥಮ ನಾಯಕನಾಗಿ ಏಕಮುಖ,ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿಮುಖ, ಅನಂತಕೋಟಿ ಮುಖವುಳ್ಳವನಾಗಿ ಭಕ್ತರಿಗೆಲ್ಲಾ ಒಡನಾಡಿಯಾಗಿ ಸಂಗನ ಬಸವಣ್ಣನು ರಾರಾಜಿಸುತ್ತಾ ಇದ್ದಾನೆ. ಈ ಸಂಗತಿಯನ್ನು ಅಲ್ಲಮಪ್ರಭು ತಮ್ಮ ಸುಮಾರು ಹದಿನೈದು ವಚನಗಳಲ್ಲಿ ಪ್ರಸ್ತಾವಿಸಿರುವುದುಂಟು! ಅಂಥ ವಚನಗಳಲ್ಲಿ ಒಂದು ವಚನವಂತೂ ಹಲವು ಕಾರಣಗಳಿಂದ ಪ್ರಾಮುಖ್ಯತೆ ಯನ್ನು ಪಡೆಯುತ್ತದೆ. ಈ ವಚನವು ಅಣ್ಣ ಬಸವಣ್ಣನ ಕ್ರಿಯಾಯೋಗ ವನ್ನೂ ಆಕಾಲದ ಸಾಂಸ್ಕೃತಿಕ ನಾಯಕನಾಗಿ ಇತರ ಶರಣರು ಕಂಡ ಬಗೆಯನ್ನೂ ಸೂಚ್ಯವಾಗಿ ನಮ್ಮ ಅರಿಕೆಗೆ ತರುತ್ತದೆ.
ಅಂಗದಲ್ಲಿ ಆಚಾರಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ಆಚಾರದಲ್ಲಿ ಪ್ರಾಣಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ಪ್ರಾಣದಲ್ಲಿ ಲಿಂಗಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ಲಿಂಗದಲ್ಲಿ ಜಂಗಮ ಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ಜಂಗಮದಲ್ಲಿ ಪ್ರಸಾದ ಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ಪ್ರಸಾದದಲ್ಲಿ ನಿತ್ಯಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ನಿತ್ಯದಲ್ಲಿ ದಾಸೋಹ ಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣನು
ದಾಸೋಹದಲ್ಲಿ ತನ್ನ ಮರೆದು ನಿಶ್ಚಿಂತನಿವಾಸಿಯಾಗೈದಾನೆ ಗುಹೇಶ್ವರ ಲಿಂಗದಲ್ಲಿ
ಸಂಗನ ಬಸವಣ್ಣಂಗೆ ಶರಣೆಂದು ಧನ್ಯರಾಗಬೇಕು ನಡೆಯಾ, ಸಿದ್ಧರಾಮಯ್ಯ.
(ಅ.ವಚನ-ಚಂದ್ರಿಕೆ-894)
ಈ ವಚನದಲ್ಲಿ ಬಸವಣ್ಣನ ಅಂತಮುಖ ಹಾಗೂ ಬಹಿಮುಖ ವ್ಯಕ್ತಿತ್ವದ ನೆಲೆಗಳನ್ನು ಅಂಗ ಆಚಾರ, ಪ್ರಾಣ ಲಿಂಗ, ಜಂಗಮ, ಪ್ರಸಾದ, ನಿತ್ಯ ದಾಸೋಹದ ಮೂಲಕ ಅಲ್ಲಮಪ್ರಭು ಸಿದ್ಧರಾಮನಿಗೆ ತೋರಿಸುತ್ತಿದ್ದಾನೆ. ಈ ವಚನಕ್ಕೆ ಸಂವಾದಿಯಾಗಿ ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯು ಬಸವಣ್ಣನವರ ವಿರಾಟ್ ಸ್ವರೂಪವನ್ನು ಭಕ್ತಿಯ ಪರಾಕಾಷ್ಠೆಯನ್ನು ಗದ್ಯನಿರೂಪಣೆಯ ಮೂಲಕವೇ ಕಟ್ಟಿಕೊಡುತ್ತದೆ. ಅಲ್ಲಮನ ವಚನವೊಂದು ಶೂನ್ಯ ಸಂಪಾದನಕಾರರಿಗೆ ಸಿಕ್ಕಿ ವಿರಾಟ್ ವ್ಯಕ್ತಿತ್ವದ ಪ್ರತಿಭೆಯಾಗಿ ಮೂಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಬಸವಣ್ಣನಿಗೆ ಹಲವು ನಾಮಗಳುಂಟು. ಜಗದಾರಾಧ್ಯ ಬಸವಣ್ಣನೆಂದು ಕೆಲವರು ಕರೆದರೆ; ಗುರು ಬಸವಣ್ಣನೆಂದೂಶರಣ ಸನ್ನಿಹಿತ ಬಸವಣ್ಣನೆಂದು ಮತ್ತು ಕೆಲವರು ಕರೆಯುವು ದುಂಟು. ಅವನು ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯಲಿಂಗ ಬಸವಣ್ಣ, ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದಿ ಬಸವಣ್ಣನೆಂದು ಇನ್ನೂ ಹಲವರು ಕೊಂಡಾಡುವುದುಂಟು. ಸಚ್ಚಿದಾನಂದಮೂರ್ತಿ ಬಸವಣ್ಣ, ಅಕಾಯಚಾರಿತ್ರ ಬಸವಣ್ಣ, ಅಸಾಧ್ಯ ಸಾಧಕ ಬಸವಣ್ಣ, ಅಭೇದ್ಯ ಭೇದ್ಯಕ ಬಸವಣ್ಣ, ಅನಾಮಯ ಮೂರ್ತಿ ಬಸವಣ್ಣ, ಎಂದು ಮತ್ತೂ ಕೆಲವರು ಸ್ತುತಿಸುವುದುಂಟು. ಇಂಥವನುರುದ್ರಲೋಕವನ್ನು ಮರ್ತ್ಯಲೋಕಕ್ಕೆ ತಂದವನೆಂದು ಭಕ್ತಿಸುವುದುಂಟು. ಇಂತಹ ಬಸವಣ್ಣನ ಅಖಂಡ ಭಕ್ತಿಪ್ರಭೆಯನ್ನು ಕಂಡು ಗಜಪತಿ- ನರಪತಿರಾಯ ರಾಜಾಧಿರಾಜ ಬಿಜ್ಜಳ
ರಾಯನೂ ಆ ಬಸವಣ್ಣನೂ ಕಲ್ಯಾಣದಲ್ಲಿ ಭಕ್ತಿಸಾಮ್ರಾಜ್ಯವನ್ನು ಸ್ಥಾಪಿಸಿದ್ದಾ ರೆಂದರೆ ಬೇರೇನು ಹೇಳಬೇಕು? ನಿಜದ ಕಲ್ಯಾಣವಾಗುವುದಕ್ಕೆ ಪರೋಕ್ಷವಾಗಿ ಬಸವಣ್ಣ ಮತ್ತು ಶರಣಗಣಂಗಳೆಲ್ಲರೂ ಕಾರಣರಾಗಿದ್ದಾರೆ.ಇಂತಹ ಕಲ್ಯಾಣವನ್ನು ಯಾರು ದರುಶನ ಮಾಡುವರೋ ಅವರಿಗೆ ಭವದ ಹಂಗಿಲ್ಲ. ಇಂತಹ ಕಲ್ಯಾಣವನ್ನು ಯಾರು ನೆನೆಯುತ್ತಾರೋ ಅವರಿಗೆ ಕೂಡಲೆ ಪಾಪಕ್ಷಯ ಆಗುವುದರಲ್ಲಿ ಸಂಶಯವಿಲ್ಲ. ಕಲ್ಯಾಣದ ಮಹಾತ್ಮೆಯನ್ನು ಕೇಳಿದರೆ ಕರ್ಮಕ್ಷಯ ಆಗುತ್ತದೆ. ಈ ಎಲ್ಲಾ ಕಾರಣದಿಂದ ಬಸವಣ್ಣನಿರುವ ಸ್ಥಳವೇ ಮಹಾಕಲ್ಯಾಣ. ಇದನ್ನೆಲ್ಲ ತಿಳಿದೇ ಈ ಮಹಾಶಾಸನವನ್ನು ಬರೆಸಲಾಗಿದೆ. ಅಲ್ಲಮಪ್ರಭು ಶಾಸನವನ್ನು ಓದಿ ಸಿದ್ಧರಾಮನ ಜೊತೆ ಮಹಾಮನೆಯ ಕಡೆ ಹೆಜ್ಜೆ ಇರಿಸಿದ. ಅಲ್ಲಮನು ಕಲ್ಯಾಣಕ್ಕೆ ಬಂದಂಥ ಈ ಪ್ರಸಂಗ ಬಸವಣ್ಣ ಮತ್ತು ಇತರ ಶರಣರಿಗೆ ಸಾಕ್ಷಾತ್ ಪರಶಿವನೇ ಕಲ್ಯಾಣಕ್ಕೆ ಬಂದಂತಾಯಿತು.
ಅಲ್ಲಮಪ್ರಭು ಮತ್ತು ಸಿದ್ಧರಾಮರುಕೋಟೆಯೊಳಗಿನ ಕಿರುದಾರಿ, ವಕ್ರದ್ವಾರಗಳನ್ನೂ ಹಲವು ಅಂತಸ್ತುಗಳ ಮಹಡಿ ಗಳನ್ನೂ ಅಂಗಡಿ ಬೀದಿಗಳನ್ನೂ ನೋಡಿದರು. ಕಲ್ಯಾಣವು ಜನಭರಿತರಿಂದ ಕೂಡಿ ಕಲಕಲ ಧ್ವಾನವೇ ಎಲ್ಲೆಲ್ಲೂ ತುಂಬಿಕೊಂಡಿತ್ತು. ಅವರಿಬ್ಬರು ಕಲ್ಯಾಣದೊಳಗೆಸುತ್ತಾಡಿದರು; ಬಸವಣ್ಣನ ಮಹಾಮನೆಯ ಮುಂದೆ ಬಂದು ನಿಂತರು. ಅಲ್ಲಿಯ ಶರಣಗಣಂಗಳು ಕುತೂಹಲದಿಂದಲೂ ಬೆರಗಿನಿಂದಲೂ ಅಲ್ಲಮನನ್ನು ನೋಡಿದರು. ಅಲ್ಲಮನದು ತೇಜೋಭರಿತ ವ್ಯಕ್ತಿತ್ವ. ಆತನ ಮುಂದೆ ಎಲ್ಲರೂ ಕುಬ್ಜರಾಗಿಯೇ ಕಂಡರು. ಅನೇಕ ಶರಣರು ಅಲ್ಲಮನ ಸುತ್ತ-ಮುತ್ತ ಕೂಡಿಕೊಂಡರು. ಮುಂದೆ ನಡೆದದ್ದು ಸೋಜಿಗದ ಕಥನ. ಆ ಕಥನಕ್ಕೆ ಸಾಕ್ಷಿಯಾದವನು ಅಣ್ಣ ಬಸವಣ್ಣ!
ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ