ಲಾರ್ಡ್ಸ್‌ನಲ್ಲಿ ಜೋ ರೂಟ್ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಹಿನ್ನಡೆ

ind vs eng web
Published on

ಲಂಡನ್: ನಾಯಕ ಜೋ ರೂಟ್ (180*ರನ್, 321 ಎಸೆತ, 18 ಬೌಂಡರಿ) ಭರ್ಜರಿ ಶತಕದ ಬಲದಿಂದ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ದಿಟ್ಟ ತಿರುಗೇಟು ನೀಡಿದ್ದು, ಅಲ್ಪ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಪಂದ್ಯದ ಉಳಿದೆರಡು ದಿನಗಳಲ್ಲಿ ಮತ್ತೆ ಗೆಲುವಿನ ಹಾದಿ ಕಂಡುಕೊಳ್ಳಬೇಕಾದ ಸವಾಲು ವಿರಾಟ್ ಕೊಹ್ಲಿ ಪಡೆಗೆ ಎದುರಾಗಿದೆ.

‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರ 3 ವಿಕೆಟ್‌ಗೆ 119 ರನ್‌ಗಳಿಂದ ಆಟ ಆರಂಭಿಸಿದ ಆತಿಥೇಯ ಇಂಗ್ಲೆಂಡ್ ತಂಡ, ದಿನದಂತ್ಯದಲ್ಲಿ 391 ರನ್‌ಗೆ ಆಲೌಟ್ ಆಗಿ 27 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತು. ಜತೆಗಾರರಿಲ್ಲದೆ ಅಜೇಯರಾಗಿ ಉಳಿದ ರೂಟ್ ದ್ವಿಶತಕ ವಂಚಿತರಾದರು.

ರೂಟ್ ಭರ್ಜರಿ ಬ್ಯಾಟಿಂಗ್

48 ರನ್‌ಗಳಿಂದ ದಿನದಾಟ ಆರಂಭಿಸಿದ ಜೋ ರೂಟ್, ಭೋಜನ ವಿರಾಮದ ಬೆನ್ನಲ್ಲೇ ಸರಣಿಯ ಸತತ 2ನೇ ಶತಕ ಪೂರೈಸಿದರು. ಜಾನಿ ಬೇರ್‌ಸ್ಟೋ (57) ಅರ್ಧಶತಕ ಬಾರಿಸುವ ಮೂಲಕ ರೂಟ್‌ಗೆ ಸಮರ್ಥ ಬೆಂಬಲ ಒದಗಿಸಿ 4ನೇ ವಿಕೆಟ್‌ಗೆ 121 ರನ್ ಕಲೆಹಾಕಿದರು. ಇವರಿಬ್ಬರು ಬೆಳಗ್ಗಿನ ಅವಧಿಯಲ್ಲಿ ಭಾರತಕ್ಕೆ ಯಾವುದೇ ಯಶಸ್ಸು ದೊರೆಯದಂತೆ ನೋಡಿಕೊಂಡರು. ದಿನದ 34ನೇ ಓವರ್‌ನಲ್ಲಿ ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ವೇಗಿ ಮೊಹಮದ್ ಸಿರಾಜ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಬೇರ್‌ಸ್ಟೋ ಔಟಾದರು. ನಾಟಿಂಗ್‌ಹ್ಯಾಂ ಟೆಸ್ಟ್ ನಲ್ಲಿ ಕೈತಪ್ಪಿದ್ದ ಗೆಲುವನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಈ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದ್ದರೂ, 3ನೇ ದಿನದಾಟದಲ್ಲಿ ನಿರೀಕ್ಷಿಸಿದಷ್ಟು ಬೇಗನೆ ಆಂಗ್ಲರನ್ನು ಕಟ್ಟಿಹಾಕಲು ಜೋ ರೂಟ್ ತಡೆಗೋಡೆಯಾಗಿ ಕಾಡಿದರು.

ಇಶಾಂತ್-ಸಿರಾಜ್ ಕಡಿವಾಣ

ಇಂಗ್ಲೆಂಡ್‌ನ ಮಧ್ಯಮ ಮತ್ತು ಕೆಳ ಕ್ರಮಾಂಕಕ್ಕೆ ಕಡಿವಾಣ ಹಾಕಲು ಸಿರಾಜ್‌ಗೆ ಅನುಭವಿ ವೇಗಿ ಇಶಾಂತ್ ಶರ್ಮ (69ಕ್ಕೆ 3) ಸಾಥ್ ನೀಡಿದರು. ರೂಟ್ ಜತೆಗೆ 54 ರನ್ ಸೇರಿಸಿದ ಜೋಸ್ ಬಟ್ಲರ್‌ಗೆ (23) ಇಶಾಂತ್ ಪೆವಿಲಿಯನ್ ದಾರಿ ತೋರಿದರು. ಬಳಿಕ ರೂಟ್‌ಗೆ ಜತೆಯಾದ ಮೊಯಿನ್ ಅಲಿ ಕೆಲಕಾಲ ಕಾಡಿದರು. 6ನೇ ವಿಕೆಟ್‌ಗೆ 58 ರನ್ ಜತೆಯಾಟವಾಡಿದ ರೂಟ್-ಅಲಿ ಜೋಡಿ ಇನಿಂಗ್ಸ್ ಮುನ್ನಡೆಯ ಸನಿಹದಲ್ಲಿ ಬೇರ್ಪಟ್ಟಿತು. ಮೊಯಿನ್ ಅಲಿ (27) ಅವರನ್ನು ಔಟ್ ಮಾಡಿದ ಮರು ಎಸೆತದಲ್ಲೇ ಇಶಾಂತ್, ಸ್ಯಾಮ್ ಕರ‌್ರನ್ (0) ವಿಕೆಟ್ ಕೂಡ ಕಬಳಿಸಿದರು. ಬೆನ್ನಲ್ಲೇ ಸಿರಾಜ್‌ಗೆ ರಾಬಿನ್‌ಸನ್ (6) ವಿಕೆಟ್ ಒಪ್ಪಿಸಿದರು.ಕೊನೇ ವಿಕೆಟ್‌ಗೆ ಜೇಮ್ಸ್ ಆಂಡರ್‌ಸನ್ ಜತೆ ರೂಟ್ 20 ರನ್ ಸೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net