

ಪರ್ತ್: ಭಾರತೀಯ ಕ್ರಿಕೆಟ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬಾರ್ಡರ್-ಗಾವಸ್ಕರ್ ಟ್ರೋಫಿಗೆ (ಬಿಜಿಟಿ) ಶುಕ್ರವಾರ ಕಾಂಗರೂ ನಾಡಿನಲ್ಲಿ ಚಾಲನೆ ಸಿಗಲಿದೆ. ತವರಿನಲ್ಲಿ ನ್ಯೂಜಿಲೆಂಡ್ ಎದುರಿನ ವೈಟ್ವಾಷ್ ಮುಖಭಂಗದ ಬಳಿಕ ಪುಟಿದೇಳಬೇಕಾದ ಸವಾಲು ಎದುರಿಸುತ್ತಿರುವ ಟೀಮ್ ಇಂಡಿಯಾ, ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಬೌನ್ಸಿ ಪಿಚ್ ಹೊಂದಿರುವ ಪರ್ತ್ ಸ್ಟೇಡಿಯಂನಲ್ಲಿ ಆಡಲಿದೆ. ಕಾಯಂ ನಾಯಕ ರೋಹಿತ್ ಶರ್ಮ ಗೈರಿನಲ್ಲಿ ಉಪನಾಯಕ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದು, ಉಭಯ ತಂಡಗಳಿಗೂ ವೇಗಿಗಳೇ ನಾಯಕರಾಗಿರುವುದು ವಿಶೇಷವೆನಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಈಗ ಆಶಸ್ನಷ್ಟೇ ಕುತೂಹಲ-ಆಕರ್ಷಣೆ-ಮಹತ್ವ ಪಡೆದುಕೊಂಡಿರುವ ಸರಣಿ ಇದಾಗಿದೆ.
ಕಳೆದ 10 ವರ್ಷಗಳಿಂದ ಆಸೀಸ್ ಎದುರು ಟೆಸ್ಟ್ ಸರಣಿ ಸೋಲದಿರುವ ದಾಖಲೆ ಕಾಯ್ದುಕೊಳ್ಳುವ, ಆಸೀಸ್ ನೆಲದಲ್ಲಿ ಸತತ 3ನೇ ಬಾರಿ ಟೆಸ್ಟ್ ಸರಣಿ ಗೆಲ್ಲುವ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಲು (ಬೇರೆ ಲೆಕ್ಕಾಚಾರ ಅವಲಂಬಿಸದೆ) 4-0 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ದೊಡ್ಡ ಸವಾಲಿನೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ. ಅತ್ತ ಆಸ್ಟ್ರೆಲಿಯಾ ತಂಡ 2016-17ರ ಬಳಿಕ ಮತ್ತೆ ಬಾರ್ಡರ್-ಗಾವಸ್ಕರ್ ಟ್ರೋಫಿ ಒಲಿಸಿಕೊಳ್ಳುವ ಮತ್ತು ತವರಿನಲ್ಲಿ ಮತ್ತೆ ಭಾರತದ ಎದುರು ಪ್ರಾಬಲ್ಯ ಸಾಧಿಸುವ ತವಕದಲ್ಲಿದೆ.
ಕಳೆದ ಎರಡು ಆಸೀಸ್ ಪ್ರವಾಸಗಳಲ್ಲಿ ದಿಟ್ಟ ನಿರ್ವಹಣೆಯೊಂದಿಗೆ ಸ್ಮರಣೀಯ ಗೆಲುವುಗಳನ್ನು ದಾಖಲಿಸಿರುವ ಭಾರತ ಮೂರನೇ ಸಲವೂ ಅದನ್ನು ಪುನರಾವರ್ತಿಸುವ ಹಂಬಲದಲ್ಲಿದ್ದರೂ, ಕಿವೀಸ್ ವಿರುದ್ಧ ತವರಿನಲ್ಲಿ ಅನುಭವಿಸಿದ ಮುಖಭಂಗ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಬೇಕಾದ ಸವಾಲು ಹೆಚ್ಚುವರಿ ಒತ್ತಡ ಹೇರಿದೆ. ಜತೆಗೆ ಆಸೀಸ್ ಈ ಬಾರಿ ಅನುಭವಿ ತಂಡವನ್ನು ಹೊಂದಿದ್ದರೆ, ಸ್ಥಿತ್ಯಂತರದ ಕಾಲಟ್ಟದಲ್ಲಿರುವ ಭಾರತ ತಂಡ ಬಹುತೇಕ ಯುವ-ಅನನುಭವಿ ಆಟಗಾರರನ್ನು ಒಳಗೊಂಡಿದೆ.
"ನ್ಯೂಜಿಲೆಂಡ್ ವಿರುದ್ಧದ ಸೋಲಿನ ಹೊರೆಯನ್ನು ಹೊತ್ತುಕೊಂಡು ನಾವು ಇಲ್ಲಿಗೆ ಬಂದಿಲ್ಲ. ಪ್ರತಿ ಗೆಲುವಿನ ಮತ್ತು ಸೋಲಿನ ನಂತರ ಶೂನ್ಯದಿಂದಲೇ ಆರಂಭಿಸಬೇಕಾಗುತ್ತದೆ. ಕಿವೀಸ್ ವಿರುದ್ಧ ಸರಣಿಯಿಂದ ಕಲಿತಿದ್ದೇವೆ. ಈಗ ನಾವು ಭಿನ್ನ ವಾತಾವರಣದಲ್ಲಿ ಆಡಲಿದ್ದೇವೆ ಮತ್ತು ಲಿತಾಂಶವೂ ಭಿನ್ನವಾಗಿರಲಿದೆ' ಎಂದು ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಪಂದ್ಯಕ್ಕೆ ಮುನ್ನಾದಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮ ಗೈರಿನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಭಾರತ ತಂಡ ಬಹುತೇಕ ಯುವ ಬ್ಯಾಟರ್ಗಳಿಂದಲೇ ಕೂಡಿದೆ. ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ಗೆ ಇದು ಮೊದಲ ಆಸೀಸ್ ಪ್ರವಾಸವಾಗಿದ್ದು, ಹಾಲಿ ವರ್ಷದ ರನ್ಪ್ರವಾಹ ಮುಂದುವರಿಸುವ ನಿರೀೆ ಇದೆ. ಇನ್ನು ವಿಕೆಟ್ ಕೀಪರ್ ರಿಷಭ್ ಪಂತ್ 2021ರ ಬ್ರಿಸ್ಬೇನ್ ಟೆಸ್ಟ್ ಆಟದ ಬಳಿಕ ಆಸೀಸ್ ಪಾಲಿಗೆ ಹೊಸ ಸವಾಲಾಗಿದ್ದಾರೆ. ಉಳಿದಂತೆ ದೇವದತ್ ಪಡಿಕ್ಕಲ್ (24 ವರ್ಷ), ಧ್ರುವ ಜುರೆಲ್ (23 ವರ್ಷ), ನಿತೀಶ್ ಕುಮಾರ್ ರೆಡ್ಡಿ (21 ವರ್ಷ) ಅವರಂಥ ಯುವ ಆಟಗಾರರಿಂದ ತಂಡ ಕೂಡಿರಲಿದೆ. ಬೌಲಿಂಗ್ನಲ್ಲಿ ಬುಮ್ರಾಗೆ ಇತರ ಬೌಲರ್ಗಳಿಂದ ಸಮರ್ಥ ಸಾಥ್ ಸಿಗಬೇಕಾಗಿದೆ. ಮೊಹಮದ್ ಶಮಿ ಇನ್ನೂ ಫಿಟ್ ಆಗಿ ತಂಡ ಸೇರಿಕೊಳ್ಳದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ.
ವಿಶ್ವಾಸದಲ್ಲಿ ಆಸ್ಟ್ರೆಲಿಯಾ
ಭಾರತ ವಿರುದ್ಧ ತವರಿನ ಕಳೆದೆರಡು ಟೆಸ್ಟ್ ಸರಣಿಗಳಲ್ಲಿ ನಿರೀತ ನಿರ್ವಹಣೆ ತೋರದೆ ಶರಣಾಗಿದ್ದ ಆಸೀಸ್, ಈ ಬಾರಿ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್ ಅವರಂಥ ಪ್ರಮುಖ ಬ್ಯಾಟರ್ಗಳು ಈ ಬಾರಿ ಆಸೀಸ್ಗೆ ಬಲ ತುಂಬಲಿದ್ದಾರೆ. ಬೌಲಿಂಗ್ನಲ್ಲೂ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್ವುಡ್, ನಾಥನ್ ಲ್ಯಾನ್ರಂಥ ಪ್ರಮುಖರ ಉಪಸ್ಥಿತಿ ಆಸೀಸ್ ತಂಡವನ್ನು ಬಲಿಷ್ಠಗೊಳಿಸಿದೆ. ಹೀಗಾಗಿ ಈ ಬಾರಿ ಭಾರತಕ್ಕೆ ಗೆಲ್ಲುವುದು ಕಳೆದೆರಡು ಪ್ರವಾಸಗಳಿಗಿಂತ ಕಠಿಣವಾಗಿರಲಿದೆ.
ಟೀಮ್ ನ್ಯೂಸ್:
ಭಾರತ: ಆಡುವ 11ರ ಬಳಗವನ್ನು ಈಗಾಗಲೆ ಅಂತಿಮಗೊಳಿಸಿದ್ದೇವೆ. ಆದರೆ ಅದನ್ನು ಪಂದ್ಯದ ದಿನ ಬೆಳಗ್ಗೆಯೇ ಬಹಿರಂಗಪಡಿಸುತ್ತೇವೆ ಎಂದು ನಾಯಕ ಬುಮ್ರಾ ಗುರುವಾರ ತಿಳಿಸಿದ್ದಾರೆ. ಬಿಸಿಸಿಐನಿಂದ ಅಧಿಕೃತವಾಗಿ ತಂಡಕ್ಕೆ ಸೇರ್ಪಡೆಯಾಗಿರುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಆಡುವುದು ಮತ್ತು ನಿತೀಶ್ ಕುಮಾರ್ ರೆಡ್ಡಿ ಪದಾರ್ಪಣೆ ಬಹುತೇಕ ಖಚಿತವೆನಿಸಿದೆ. ಎದುರಾಳಿ ತಂಡದ ಎಡಗೈ ಬ್ಯಾಟರ್ಗಳನ್ನು ಕಟ್ಟಿಹಾಕಲು ಆರ್. ಅಶ್ವಿನ್ ಏಕೈಕ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ/ವಾಷಿಂಗ್ಟನ್ ಸುಂದರ್ರನ್ನು ಹಿಂದಿಕ್ಕಿ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. 2-3ನೇ ವೇಗದ ಬೌಲರ್ ಸ್ಥಾನಕ್ಕೆ ಸಿರಾಜ್/ಆಕಾಶ್ದೀಪ್, ಪ್ರಸಿದ್ಧ/ಹರ್ಷಿತ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಧ್ರುವ ಜುರೆಲ್, ಆರ್. ಅಶ್ವಿನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ/ಪ್ರಸಿದ್ಧಕೃಷ್ಣ, ಮೊಹಮದ್ ಸಿರಾಜ್/ಆಕಾಶ್ದೀಪ್, ಜಸ್ಪ್ರೀತ್ ಬುಮ್ರಾ (ನಾಯಕ).
ಆಸ್ಟ್ರೆಲಿಯಾ: ಡೇವಿಡ್ ವಾರ್ನರ್ ಸ್ಥಾನದಲ್ಲಿ ಹೊಸ ಬ್ಯಾಟರ್ ನಾಥನ್ ಮೆಕ್ಸ್ವೀನಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಕಲ್ಪಿಸುವುದನ್ನು ನಾಯಕ ಪ್ಯಾಟ್ ಕಮ್ಮಿನ್ಸ್ ಖಚಿತಪಡಿಸಿದ್ದಾರೆ. ಜತೆಗೆ ವಾರ್ನರ್ರಂತೆ 80ಕ್ಕಿಂತ ಹೆಚ್ಚಿನ ಸ್ಟ್ರೆ$ಕ್ರೇಟ್ನಲ್ಲಿ ರನ್ ಗಳಿಸಬೇಕಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಆಸೀಸ್ ಟೆಸ್ಟ್ನಲ್ಲಿ ಅಚ್ಚರಿಯ ಆಯ್ಕೆಗಳಿಲ್ಲ. ಮಿಚೆಲ್ ಮಾರ್ಷ್ ಬೌಲಿಂಗ್ ಕೂಡ ಮಾಡಲಿದ್ದು, ಆಲ್ರೌಂಡರ್ ಆಗಿ ಆಡಲಿದ್ದಾರೆ.
ಸಂಭಾವ್ಯ ತಂಡ: ಉಸ್ಮಾನ್ ಖವಾಜ, ನಾಥನ್ ಮೆಕ್ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲ್ಯಾನ್, ಜೋಶ್ ಹ್ಯಾಸಲ್ವುಡ್.
ಮುಖಾಮುಖಿ: 107
ಭಾರತ: 32
ಆಸ್ಟ್ರೆಲಿಯಾ: 45
ಡ್ರಾ: 29, ಟೈ: 1
ಆಸ್ಟ್ರೆಲಿಯಾದಲ್ಲಿ: 52
ಭಾರತ: 9
ಆಸ್ಟ್ರೆಲಿಯಾ: 30
ಡ್ರಾ: 13
ಪಂದ್ಯದ ಪ್ರತಿ ದಿನದಾಟ
ಮೊದಲ ಅವಧಿ: ಬೆಳಗ್ಗೆ 7.50-9.50
ಭೋಜನ ವಿರಾಮ: 40 ನಿಮಿಷ
2ನೇ ಅವಧಿ: ಬೆಳಗ್ಗೆ 10.30-12.30
ಚಹಾ ವಿರಾಮ: 20 ನಿಮಿಷ
3ನೇ ಅವಧಿ: ಮಧ್ಯಾಹ್ನ 12.50-2.50
*90 ಓವರ್ ಆಗದಿದ್ದರೆ ಮ. 3.20ರವರೆಗೆ ಆಟ ವಿಸ್ತರಣೆ ಅವಕಾಶ
ಬುಮ್ರಾ ಸಾರಥ್ಯದಲ್ಲಿ 2ನೇ ಟೆಸ್ಟ್
ಟೆಸ್ಟ್ನಲ್ಲಿ ಭಾರತವನ್ನು ಮುನ್ನಡೆಸಿದ ಮೊದಲ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ಸಾರಥ್ಯದಲ್ಲಿ ಇದು 2ನೇ ಟೆಸ್ಟ್ ಆಗಿದೆ. ಈ ಮುನ್ನ 2022ರಲ್ಲಿ ಇಂಗ್ಲೆಂಡ್ ವಿರುದ್ಧದ ರ್ಬಮಿಂಗ್ಹ್ಯಾಂ ಟೆಸ್ಟ್ನಲ್ಲಿ ಮೊದಲ ಬಾರಿ ಬುಮ್ರಾ ನಾಯಕತ್ವದಲ್ಲಿ ಆಡಿದಾಗ ಭಾರತ 378 ರನ್ ರಸಿಕೊಳ್ಳಲಾಗದೆ ಸೋತಿತ್ತು. ಭವಿಷ್ಯದ ಟೆಸ್ಟ್ ನಾಯಕನಾಗುವ ನಿಟ್ಟಿನಲ್ಲಿ ಬುಮ್ರಾಗೆ ಈ ಪಂದ್ಯದ ನಿರ್ವಹಣೆ ಮಹತ್ವದ್ದಾಗಿದೆ.
*ನಾಯಕತ್ವವನ್ನು ನಾನು ಹುದ್ದೆಯಾಗಿ ನೋಡುವುದಿಲ್ಲ. ಅದು ನಾನು ಇಷ್ಟಪಡುವ ಜವಾಬ್ದಾರಿಯಾಗಿದೆ. ನಾನು ಕೊಹ್ಲಿ ಅಥವಾ ರೋಹಿತ್ ನಾಯಕತ್ವವನ್ನು ಅನುರಿಸುವುದಿಲ್ಲ. ನನ್ನದೇ ಆದ ನಾಯಕತ್ವ ಶೈಲಿ ಹೊಂದಿದ್ದೇನೆ. ಪರಿಸ್ಥಿತಿಗೆ ತಕ್ಕಂತೆ ಸಹಜ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ.
| ಜಸ್ಪ್ರೀತ್ ಬುಮ್ರಾ, ಭಾರತ ತಂಡದ ಹಂಗಾಮಿ ನಾಯಕ
*ಬಾರ್ಡರ್&ಗಾವಸ್ಕರ್ ಟ್ರೋಫಿ ಯಾವಾಗಲೂ ಅತ್ಯಂತ ನಿಕಟವಾದ ಸರಣಿಯಿಂದ ಕೂಡಿರುತ್ತದೆ. ಈ ಸರಣಿಯೂ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರಲಿದೆ. ತವರಿನಲ್ಲಿ ಆಡುವಾಗ ಯಾವಾಗಲೂ ಒತ್ತಡವಿರುತ್ತದೆ. ಭಾರತ ಪ್ರತಿಭಾನ್ವಿತ ಆಟಗಾರರಿಂದ ಕೂಡಿದ್ದು, ಉತ್ತಮ ಸವಾಲೊಡ್ಡಲಿದೆ. ಆದರೆ ನಾವು ಎಲ್ಲದಕ್ಕೂ ಸಜ್ಜಾಗಿದ್ದೇವೆ.
| ಪ್ಯಾಟ್ ಕಮ್ಮಿನ್ಸ್, ಆಸೀಸ್ ನಾಯಕ
ಟೆಸ್ಟ್ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ ಆರಂಭ
1. ನ.22-26 ಪರ್ತ್ ಬೆಳಗ್ಗೆ 7.50
2. ಡಿ.6-10 ಅಡಿಲೇಡ್* ಬೆಳಗ್ಗೆ 9.30
3. ಡಿ. 14-18 ಬ್ರಿಸ್ಬೇನ್ ಬೆಳಗ್ಗೆ 5.50
4. ಡಿ.26-30 ಮೆಲ್ಬೋರ್ನ್ ಬೆಳಗ್ಗೆ 5.00
5. ಜ.3-7 ಸಿಡ್ನಿ ಬೆಳಗ್ಗೆ 5.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ಸ್ಟಾರ್, ಡಿಡಿ ಸ್ಪೋರ್ಟ್ಸ್
*ಅಹರ್ನಿಶಿ
*32: ಭಾರತ-ಆಸೀಸ್ ತಂಡಗಳು ಬರೋಬ್ಬರಿ 32 ವರ್ಷಗಳ ಬಳಿಕ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿವೆ. 1991&92ರಲ್ಲಿ ಕೊನೆಯದಾಗಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಸರಣಿ ನಡೆದಿತ್ತು.
ಬಾರ್ಡರ್-ಗಾವಸ್ಕರ್ ಟ್ರೋಫಿ ಫಲಿತಾಂಶ
1996-97: ಆತಿಥೇಯ ಭಾರತಕ್ಕೆ 1-0 ಜಯ
1997-98: ಆತಿಥೇಯ ಭಾರತಕ್ಕೆ 2-1 ಜಯ
1999-00: ಆತಿಥೇಯ ಆಸೀಸ್ಗೆ 3-0 ಜಯ
2000-01: ಆತಿಥೇಯ ಭಾರತಕ್ಕೆ 2-1 ಜಯ
2003-04: ಆಸೀಸ್ನಲ್ಲಿ ಸರಣಿ 1-1 ಸಮಬಲ
2004-05: ಪ್ರವಾಸಿ ಆಸ್ಟ್ರೆಲಿಯಾಕ್ಕೆ 2-1 ಜಯ
2007-08: ಆತಿಥೇಯ ಆಸೀಸ್ಗೆ 2-1 ಜಯ
2008-09: ಆತಿಥೇಯ ಭಾರತಕ್ಕೆ 2-0 ಜಯ
2010-11: ಆತಿಥೇಯ ಭಾರತಕ್ಕೆ 2-0 ಜಯ
2011-12: ಆತಿಥೇಯ ಆಸೀಸ್ಗೆ 4-0 ಜಯ
2012-13: ಆತಿಥೇಯ ಭಾರತಕ್ಕೆ 4-0 ಜಯ
2014-15: ಆತಿಥೇಯ ಆಸೀಸ್ಗೆ 2-0 ಜಯ
2016-17: ಆತಿಥೇಯ ಭಾರತಕ್ಕೆ 2-1 ಜಯ
2018-19: ಪ್ರವಾಸಿ ಭಾರತಕ್ಕೆ 2-1 ಗೆಲುವು
2020-21: ಪ್ರವಾಸಿ ಭಾರತಕ್ಕೆ 2-1 ಗೆಲುವು
2022-23: ಆತಿಥೇಯ ಭಾರತಕ್ಕೆ 2-1 ಜಯ
ಆಸ್ಟ್ರೆಲಿಯಾದ ಟೆಸ್ಟ್ ಸರಣಿಯಲ್ಲಿ...
1947-48: ಭಾರತಕ್ಕೆ 0-4 ಸೋಲು
1967-68: ಭಾರತಕ್ಕೆ 0-4 ಸೋಲು
1977-78: ಭಾರತಕ್ಕೆ 2-3 ಸೋಲು
1980-81: ಸರಣಿ 1-1 ಸಮಬಲ
1985-86: ಸರಣಿ 0-0 ಸಮಬಲ
1991-92: ಭಾರತಕ್ಕೆ 0-4 ಸೋಲು
1999-00: ಭಾರತಕ್ಕೆ 0-3 ಸೋಲು
2003-04: ಸರಣಿ 1-1 ಸಮಬಲ
2007-08: ಭಾರತಕ್ಕೆ 1-2 ಸೋಲು
2011-12: ಭಾರತಕ್ಕೆ 0-4 ಸೋಲು
2014-15: ಭಾರತಕ್ಕೆ 0-2 ಸೋಲು
2018-19: ಭಾರತಕ್ಕೆ 2-1 ಜಯ
2020-21: ಭಾರತಕ್ಕೆ 2-1 ಗೆಲುವು
*ಒಂದು ಲಕ್ಷ ಪ್ರೇಕ್ಷಕರ ನಿರೀಕ್ಷೆ
ಪಂದ್ಯಕ್ಕೆ ಒಟ್ಟಾರೆ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸಾಯಾಗುವ ನಿರೀಕ್ಷೆ ಇದೆ. ಇದು ಕಳೆದ ವರ್ಷ ನಡೆದ ಪಾಕ್ ವಿರುದ್ಧದ ಟೆಸ್ಟ್ ಪಂದ್ಯಕ್ಕಿಂತ ಒಂದೂವರೆ ಪಟ್ಟು ಅಧಿಕವಾಗಿದೆ.
ಮೊದಲ ದಿನ ಮಳೆ ಭೀತಿ
ಪಂದ್ಯದ ಮೊದಲ ದಿನ ಬೆಳಗ್ಗೆ ಮಳೆಯಾಗುವ ಸಾಧ್ಯತೆ ಶೇ.25ರಷ್ಟಿದೆ ಎಂದು ಹವಾಮಾನ ವರದಿ ತಿಳಿಸಿದೆ. ಟಾಸ್ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆ ಬಂದರೆ ಪರ್ತ್ ಪಿಚ್ ವೇಗದ ಬೌಲರ್ಗಳ ಪಾಲಿಗೆ ಇನ್ನಷ್ಟು ಅನುಕೂಲಕರವೆನಿಸಲಿದೆ.
*6: ಕಳೆದ 2 ಆಸೀಸ್ ಪ್ರವಾಸಗಳಲ್ಲಿ ಸರಣಿ ಗೆದ್ದ ಭಾರತ ತಂಡದ 6 ಆಟಗಾರರು ಹಾಲಿ ಸರಣಿಯಲ್ಲೂ ಆಡಲಿದ್ದಾರೆ. ಅವರೆಂದರೆ ಬುಮ್ರಾ, ಅಶ್ವಿನ್, ರವೀಂದ್ರ ಜಡೇಜಾ, ರೋಹಿತ್ ಶರ್ಮ, ಕೊಹ್ಲಿ, ಪಂತ್. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವೆರಡು ಸರಣಿಗಳಿಂದ ಪ್ರಮುಖವಾಗಿ ಮಿಸ್ ಆಗಿರುವ ಬ್ಯಾಟರ್ಗಳಾಗಿದ್ದಾರೆ.
*102: ವಿರಾಟ್ ಕೊಹ್ಲಿ (2,042) ಪಂದ್ಯದಲ್ಲಿ 102 ರನ್ ಗಳಿಸಿದರೆ ರಾಹುಲ್ ದ್ರಾವಿಡ್ (2,143) ಅವರನ್ನು ಹಿಂದಿಕ್ಕಿ ಆಸೀಸ್ ಎದುರು ಟೆಸ್ಟ್ನಲ್ಲಿ 3ನೇ ಗರಿಷ್ಠ ರನ್ ಬಾರಿಸಿದ ಭಾರತೀಯ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (3,630) ಮತ್ತು ವಿವಿಎಸ್ ಲಕ್ಷ$್ಮಣ್ (2,434) ಮೊದಲೆರಡು ಸ್ಥಾನದಲ್ಲಿದ್ದಾರೆ.
*90: ಕೊಹ್ಲಿ (1352) ಪಂದ್ಯದಲ್ಲಿ 90 ರನ್ ಗಳಿಸಿದರೆ, ಸಚಿನ್ ತೆಂಡುಲ್ಕರ್ರನ್ನು (1441) ಹಿಂದಿಕ್ಕಿ ಆಸೀಸ್ ನೆಲದ ಟೆಸ್ಟ್ನಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಲಿದ್ದಾರೆ.