ಟೈಟನ್ಸ್ ಕಟ್ಟಿಹಾಕಿದ ಗುಜರಾತ್ ಜೈಂಟ್ಸ್

PKL
Published on

ನೋಯ್ಡಾ: ಅಂತಿಮ ಕ್ಷಣದ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಗುಜರಾತ್ ಜಯಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 71ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡದ ವಿರುದ್ಧ 3 ಅಂಕಗಳಿಂದ ರೋಚಕ ಗೆಲುವು ದಾಖಲಿಸಿತು.ಇದರೊಂದಿಗೆ ಒಂದು ಸೋಲು ಮತ್ತು ಒಂದು ಡ್ರಾ ನಂತರ ಗೆಲುವಿನ ಹಳಿಗೆ ಮರಳಿದ ಗುಜರಾತ್ ತಂಡ, ಟೂರ್ನಿಯಲ್ಲಿ 3ನೇ ಜಯ ದಾಖಲಿಸಿ, ಒಟ್ಟಾರೆ 20 ಅಂಕಗಳನ್ನು ಕಲೆಹಾಕಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡ 31 – 28 ಅಂಕಗಳಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಎದುರಾಳಿಯ ಗೆಲುವಿನ ಓಟಕ್ಕೆ ತಡೆಯೊಡ್ಡಿತು. ಉತ್ತಮ ಆಟವಾಡಿದರೂ ಕೊನೆಯ ಕ್ಷಣದಲ್ಲಿ ಒತ್ತಡಕ್ಕೆ ಸಿಲುಕಿದ ಟೈಟನ್ಸ್ 5ನೇ ಸೋಲಿಗೆ ಗುರಿಯಾಯಿತು. ಆದಾಗ್ಯೂ ಒಟ್ಟಾರೆ 43 ಅಂಕಗಳನ್ನು ಕಲೆಹಾಕಿದೆ.

ಗುಜರಾತ್ ಜಯಂಟ್ಸ್ ತಂಡದ ಪರ ಪರ್ತೀಕ್ ದಹಿಯಾ (11 ಅಂಕ) ಮಿಂಚಿದರೆ, ಗುಮಾನ್ ಸಿಂಗ್ 5 ಹಾಗೂ ಜಿತೇಂದರ್ ಯಾದವ್ ಮತ್ತು ಸೋಂಬಿರ್ ತಲಾ 3 ಅಂಕಗಳ ಕೊಡುಗೆ ನೀಡಿದರು. ಅತ್ತ ತೆಲುಗು ಟೈಟನ್ಸ್ ಪರ ವಿಜಯ್ ಮಲಿಕ್ 15 ಅಂಕಗಳನ್ನು ಕಲೆಹಾಕಿದರೆ, ಆಶೀಶ್ ನರ್ವಾಲ್ 7 ಅಂಕಗಳ ಕೊಡುಗೆ ನೀಡಿದರು. ಆದರೆ ಇವರ ಹೋರಾಟ ತಂಡವನ್ನು ಅಗ್ರಸ್ಥಾನಕ್ಕೇರಿಸುವಲ್ಲಿ ಸಾಧ್ಯವಾಗಲಿಲ್ಲ.

PKL

ಪಂದ್ಯ ಅಂತಿಮ ಘಟ್ಟದತ್ತ ಸಾಗುತ್ತಿದ್ದಂತೆಯೇ ಅಭಿಮಾನಿಗಳ ತೀವ್ರತೆ ಕೂಡ ಹೆಚ್ಚಿತು. ಇದಕ್ಕೆ ತಕ್ಕಂತೆ ಎರಡೂ ತಂಡಗಳು ಮುನ್ನಡೆಗೆ ಪ್ರಬಲ ಹೋರಾಟ ನಡೆಸಿದವು. ಹೀಗಾಗಿ 26-26ರಲ್ಲಿ ಜಿದ್ದಾಜಿದ್ದಿನ ಪೈಪೋಟಿ ಸಾಕ್ಷಿಯಾಯಿತು.

ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ ಉಭಯ ತಂಡಗಳ ಅಂತರ ಕೇವಲ 2ಕ್ಕೆ ಸೀಮಿತಗೊಂಡಿತು. ಗುಜರಾತ್ ಜಯಂಟ್ಸ್ 23 ಅಂಕ ಹೊಂದಿದ್ದರೆ, ಟೈಟನ್ಸ್ 21 ಅಂಕ ಹೊಂದಿತ್ತು. ಹೀಗಾಗಿ ಪಂದ್ಯದ ಕೊನೆಯ ಕ್ಷಣ ರೋಚಕ ಘಟ್ಟದತ್ತ ಸಾಗಿತು. ಡು ಆರ್ ಡೈ ಅವಕಾಶಗಳನ್ನು ಉಭಯ ತಂಡಗಳು ಬಳಸಿಕೊಂಡ ಕಾರಣ 25-24ರಲ್ಲಿತ್ತು.

ದ್ವಿತೀಯಾರ್ಧ ಆರಂಭವಾದ ಎರಡೇ ನಿಮಿಷಗಳಲ್ಲಿ ಟೈಟನ್ಸ್ ತಂಡವನ್ನು ಮೊದಲ ಬಾರಿಗೆ ಕಟ್ಟಿಹಾಕಿದ ಗುಜರಾತ್ ತಂಡ 22-19ರಲ್ಲಿ ತಂಡದ ಮುನ್ನಡೆಯನ್ನು ವಿಸ್ತರಿಸಿತು. ಅಜಿತ್ ಪವಾರ್ ಮತ್ತು ಅಂಕಿತ್ ಅವರನ್ನು ಔಟ್ ಮಾಡಿದ ರೇಡರ್ ಪರ್ತೀಕ್ ದಹಿಯಾ, ಜಯಂಟ್ಸ್ ಗೆ ಎರಡು ಆಲೌಟ್ ಅಂಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

PKL

ರೇಡರ್ ಪವನ್ ಕುಮಾರ್ ಸೆಹ್ರಾವತ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ವಿನಯ್ ಮಲಿಕ್ ಮೊದಲಾರ್ಧದ ಆಟದಲ್ಲಿ ಸೂಪರ್ ಟೆನ್ ಸಾಹಸ ಮಾಡಿದರು. ಆದರೆ ಇತರ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದ್ದು, ತಂಡದ ಮೇಲಿನ ಒತ್ತಡ ಹೆಚ್ಚಲು ಕಾರಣವಾಯಿತು.

ಇದಕ್ಕೂ ಮುನ್ನ ಟ್ಯಾಕಲ್ ನಲ್ಲಿ ವಿಫಲಗೊಂಡರೂ ರೇಡಿಂಗ್ ವಲಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ ಮೊದಲಾರ್ಧದ ಕೊನೆಯ ಕ್ಷಣದಲ್ಲಿ ಚುರುಕಿನ ಆಟ ಪ್ರದರ್ಶರ್ಸಿದ ತೆಲುಗು ಟೈಟನ್ಸ್ 17-15 ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.

ಪಂದ್ಯ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕಾರಣ ಎರಡೂ ತಂಡಗಳು ಅಂಕ ಗಳಿಸಲು ತಿಣುಕಾಡಿದವು. ಮೊದಲ ಹತ್ತು ನಿಮಿಷಗಳ ಆಟದಲ್ಲಿ ಎರಡೂ ತಂಡಗಳಿಂದ 5-5ರಿಂದ ಸಮಬಲದ ಹೋರಾಟ ಕಂಡು ಬಂದಿತು. 15 ನಿಮಿಷಕ್ಕೆ 7-5ರಲ್ಲಿ ಮುನ್ನಡೆ ಸಾಧಿಸಿದ ಗುಜರಾತ್ ಜಯಂಟ್ಸ್, ಟೈಟನ್ಸ್ ಆಟಗಾರರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿತು.ಆದಾಗ್ಯೂ ಟೈಟನ್ಸ್ ಸೂಪರ್ ಟ್ಯಾಕಲ್ ನಲ್ಲಿ ಅಬ್ಬರಿಸುವ ಮೂಲಕ ವಿರಾಮಕ್ಕೆ ಎರಡು ಅಂಕಗಳ ಅಂತರ ಕಾಯ್ದುಕೊಳ್ಳುವಲ್ಲಿ ಯಶ ಕಂಡಿತು. ನವೆಂಬರ್ 24ರಂದು ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ಹಾಗೂ ಪಟನಾ ಪೈರೇಟ್ಸ್ ಮತ್ತು ಯು.ಪಿ. ಯೋಧಾಸ್ ತಂಡಗಳು ಪೈಪೋಟಿ ನಡೆಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net