ಭವಾನಿ ರಾಜ್‌ಪೂತ್‌ ಸೂಪರ್‌ ಟೆನ್‌ ಸಾಹಸ: ಯೋಧಾಸ್‌ಗೆ ಸಾಟಿಯಾಗದ ತಮಿಳ್‌ ತಲೈವಾಸ್‌

New Project (4)
Published on

ನೋಯ್ಡಾ: ಪಂದ್ಯದ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಯು.ಪಿ. ಯೋಧಾಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ 69ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ತಂಡವನ್ನು 16 ಅಂಕಗಳಿಂದ ಮಣಿಸಿ ಟೂರ್ನಿಯಲ್ಲಿಐದನೇ ಜಯ ದಾಖಲಿಸಿತು. ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿಯೋಧಾಸ್‌ 40-24 ಅಂಕಗಳಿಂದ ತಲೈವಾಸ್‌ ತಂಡವನ್ನು ಸೋಲಿಸಿತು. ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ತಲೈವಾಸ್‌ ದ್ವಿತೀಯಾರ್ಧದಲ್ಲಿ ಸಂಪೂರ್ಣ ನಿಸ್ತೇಜನಗೊಂಡಿತು. ಹೀಗಾಗಿ 7ನೇ ಸೋಲಿಗೆ ಗುರಿಯಾಗಬೇಕಾಯಿತು.

ಯೋಧಾಸ್‌ ತಂಡ ಪರ ಭವಾನಿ ರಾಜ್‌ಪೂತ್‌ 10 ಅಂಕ ಗಳಿಸಿದರೆ, ಭರತ್‌ ಮತ್ತು ಹಿತೇಶ್‌ ಕ್ರಮವಾಗಿ 5 ಮತ್ತು 6 ಅಂಕಗಳ ಕೊಡುಗೆ ನೀಡಿದರು. ಅತ್ತ ತಲೈವಾಸ್‌ ಪರ ವಿಶಾಲ್‌ ಮತ್ತು ನಿತೇಶ್‌ ಕುಮಾರ್‌ ತಲಾ 6 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು. ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳು ಬಾಕಿ ಇರುವಾಗ 27-17ರಲ್ಲಿ ಅಂತರ ಕಾಯ್ದುಕೊಂಡ ಯೋಧಾಸ್‌ ಆಟಗಾರರು ಗೆಲುವಿನ ಪಥ ತುಳಿದರೆ, ತಲೈವಾಸ್‌ ಆಟಗಾರರು ಹಿನ್ನಡೆ ತಗ್ಗಿಬೇಕಾದ ಒತ್ತಡಕ್ಕೆ ಒಳಗಾದರು. 31ನೇ ನಿಮಿಷದಲ್ಲಿಅಭಿಷೇಕ್‌ ಮತ್ತು ನಿತೇಶ್‌ ಕುಮಾರ್‌ ಅವರನ್ನು ಔಟ್‌ ಮಾಡಿ 2ನೇ ಬಾರಿ ತಲೈವಾಸ್‌ ಆಟಗಾರರನ್ನು ಕಟ್ಟಿಹಾಕಿದ ಯೋಧಾಸ್‌, ತನ್ನ ಅಂತರವನ್ನು 30 -20 ಅಂಕಗಳಿಗೆ ವಿಸ್ತರಿಸಿಕೊಂಡಿತು.

ವಿರಾಮಕ್ಕೂ ಮುನ್ನ ತಲೈವಾಸ್‌ ಆಟಗಾರರನ್ನು ಮೂರಕ್ಕೆ ಇಳಿಸಿದ್ದ ಯೋಧಾಸ್‌, ದ್ವಿತೀಯಾರ್ಧ ಆರಂಭವಾದ ಎರಡನೇ ನಿಮಿಷದಲ್ಲಿಆಲೌಟ್‌ ಮಾಡಿ ಮಿಂಚಿತು. ನಿತೀಶ್‌ ಕುಮಾರ್‌ ಅವರನ್ನು ಟ್ಯಾಕಲ್‌ ಮಾಡಿದ ಹಿತೇಶ್‌, ಎರಡು ಆಲೌಟ್‌ ಸೇರಿ ಯೋಧಾಗೆ ಮೂರು ಅಂಕ ತಂದರು. ಹೀಗಾಗಿ 17-14ರಲ್ಲಿಮುನ್ನಡೆ ಕಂಡುಕೊಳ್ಳುವಲ್ಲಿ ಯೋಧಾ ಆಟಗಾರರು ಯಶಸ್ವಿಯಾದರು.

ಮುನ್ನಡೆಯಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಸುಮಿತ್‌ ನೇತೃತ್ವದ ಬಳಗ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಮುಂದುವರಿಸಿತು. 2.15 ಕೋಟಿ ರೂ. ಪಡೆದು ಲೀಗ್‌ನಲ್ಲೇ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿರುವ ಸಚಿನ್‌,ತಂಡದ ಸ್ಟಾರ್‌ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡಿದ್ದು, ತಲೈವಾಸ್‌ ಮೇಲಿ ಒತ್ತಡವನ್ನು ದ್ವಿಗುಣಗೊಳಿಸಿತು. 20ರಿಂದ 30 ನಿಮಿಷಗಳ ಅಂತರದಲ್ಲಿಆಲ್‌ರೌಂಡ್‌ ಆಟ ಪ್ರದರ್ಶಿಸಿದ ಯೋಧಾಸ್‌, 14 ಅಂಕಗಳನ್ನು ಕಲೆಹಾಕಿದರೆ, ಚೇತೋಹಾರಿ ಪ್ರದರ್ಶನ ನೀಡಲು ವಿಫಲಗೊಂಡ ತಲೈವಾಸ್‌ ಕೇವಲ 4 ಅಂಕಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇದು ಸಹಜವಾಗಿ ಯೋಧಾಸ್‌ ಬಲವನ್ನು ಹೆಚ್ಚಿಸಿದರೆ, ತಮಿಳ್‌ ತಂಡದ ಮನೋಬವನ್ನು ಕುಗ್ಗಿಸಿತು.

ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದ ತಮಿಳ್‌ ತಲೈವಾಸ್‌ ಹಾಗೂ ಯು.ಪಿ. ಯೋಧಾಸ್‌ ತಂಡಗಳು ಪಂದ್ಯದ ಮೊದಲಾರ್ಧಕ್ಕೆ 13-13 ಅಂಕಗಳಿಂದ ಸಮಬಲದ ಹೋರಾಟ ಪ್ರದರ್ಶಿಸಿದವು.ನಿತೇಶ್‌ ಕುಮಾರ್‌ 5 ಅಂಕ ಗಳಿಸಿ ತಲೈವಾಸ್‌ ಪರ ಮಿಂಚಿದರೆ, ತಲಾ 4 ಅಂಕಗಳನ್ನು ಕಲೆಹಾಕಿದ ಭರತ್‌ ಮತ್ತು ಹಿತೇಶ್‌ ಯೋಧಾಸ್‌ ಹೋರಾಟಕ್ಕೆ ಸಾಕ್ಷಿಯಾದರು. ಮೊದಲ ಐದು ನಿಮಿಷಕ್ಕೆ 4-4ರಲ್ಲಿಹೋರಾಟ ಸಂಘಟಿಸಿದ ಇತ್ತಂಡಗಳು ಮುನ್ನಡೆಗಾಗಿ ಹಾವು-ಏಣಿ ಆಟವಾಡಿದವು. ಉಭಯ ತಂಡಗಳ ಆಟಗಾರರು ಅಂಕ ಗಳಿಸಲು ತಿಣುಕಾಡಿದವು. 7-7ರಲ್ಲಿಆಟ ಮುಂದುವರಿಸಿದ ಎರಡೂ ತಂಡಗಳು ಮೊದಲ 15 ನಿಮಿಷದ ಅಂತ್ಯಕ್ಕೆ 10-10ರಲ್ಲಿಜಿದ್ದಾಜಿದ್ದಿನ ಹೋರಾಟ ಸಂಘಟಿಸಿ ಪ್ರೇಕ್ಷ ಕರ ಚಪ್ಪಾಳೆ ಗಿಟ್ಟಿಸಿದವು.

ನವೆಂಬರ್‌ 23ರಂದು ಗುಜರಾತ್‌ ಜಯಂಟ್ಸ್‌ ಮತ್ತು ತೆಲುಗು ಟೈಟನ್ಸ್‌ ಹಾಗೂ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net