ಹಿರಿಯ ಕ್ರಿಕೆಟಿಗರು ಅತಂತ್ರ: ಟಿ20 ವಿಶ್ವಕಪ್ ಮುಂದೂಡಿಕೆ, ಭವಿಷ್ಯದ ಬಗ್ಗೆ ಗೊಂದಲ ತಂದ ಕರೊನಾ

Cricket
Published on

ಕರೊನಾ ಹಾವಳಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದರಿಂದ ಹೆಚ್ಚಿನ ಹಿರಿಯ ಕ್ರೀಡಾಪಟುಗಳು ತೊಂದರೆ ಎದುರಿಸಿದಂತೆ, ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿರುವುದರಿಂದಲೂ ಕೆಲವು ಹಿರಿಯ ಕ್ರಿಕೆಟಿಗರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಇನ್ನು 15 ತಿಂಗಳ ನಂತರ ಟಿ20 ವಿಶ್ವಕಪ್ ನಡೆಯಲಿರುವುದರಿಂದ ನಿವೃತ್ತಿಯಂಚಿನಲ್ಲಿರುವ ಅಥವಾ ನಿವೃತ್ತಿ ಹಿಂಪಡೆದು ಮರಳಿ ಕಣಕ್ಕಿಳಿಯುವ ಹಂಬಲದಲ್ಲಿದ್ದ ಕೆಲವು ಅನುಭವಿ ಕ್ರಿಕೆಟಿಗರು ಈಗ ಗೊಂದಲಕ್ಕೀಡಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸಹಿತ ಇಂಥ ಕೆಲ ಆಟಗಾರರ ಅತಂತ್ರ ಸ್ಥಿತಿಯ ಸಂಕ್ಷಿಪ್ತ ವಿವರ ಇಲ್ಲಿದೆ.

ಎಂಎಸ್ ಧೋನಿ (ಭಾರತ): ಭಾರತೀಯ ಕ್ರಿಕೆಟ್​ಸೂಪರ್ ಸ್ಟಾರ್ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ 1 ವರ್ಷದಿಂದ ಚರ್ಚೆಗಳು ನಡೆಯುತ್ತಲೇ ಬಂದಿವೆ. ಕಳೆದ ವರ್ಷ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಅವರು ಮರಳಿ ಕಣಕ್ಕಿಳಿದಿಲ್ಲ. ಈ ವರ್ಷದ ಐಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದರೆ ಅವರನ್ನು ಟಿ20 ವಿಶ್ವಕಪ್​ನಲ್ಲಿ ಆಡಿಸುವ ಸಂಭಾವ್ಯತೆಯೂ ಇತ್ತು. ಆದರೆ ಟಿ20 ವಿಶ್ವಕಪ್ ವೇಳೆಗೆ ಧೋನಿಗೆ 40 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವುದೇ ಎಂಬುದು ಅನುಮಾನ.

ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ): ಎಬಿ ಡಿವಿಲಿಯರ್ಸ್ ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರೂ, ಈ ವರ್ಷ ಐಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದರೆ ಟಿ20 ವಿಶ್ವಕಪ್​ನಲ್ಲಿ ಮರಳಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದರು. 36 ವರ್ಷದ ಎಬಿಡಿಗೆ ಈಗ ಇನ್ನೊಂದು ವರ್ಷದವರೆಗೆ ಫಿಟ್ನೆಸ್ ಕಾಯ್ದುಕೊಳ್ಳುವ ಸವಾಲು ಎದುರಾಗಿದೆ.

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): ಫಿಕ್ಸಿಂಗ್ ಆಮಿಷದ ಬಗ್ಗೆ ಮಾಹಿತಿ ನೀಡದ ಕಾರಣದಿಂದಾಗಿ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ಸದ್ಯ ನಿಷೇಧದಲ್ಲಿದ್ದಾರೆ. 33 ವರ್ಷದ ಶಕೀಬ್​ಗೆ ಟಿ20 ವಿಶ್ವಕಪ್ ಮುಂದೂಡಿಕೆ ವರದಾನವೆನಿಸಿದೆ. ಈಗ ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ವಾಪಸ್ ಆಗಲು ಅವರಿಗೆ ಉತ್ತಮ ಅವಕಾಶ ಎದುರಾಗಿದೆ.

ಕ್ರಿಸ್​ ಗೇಲ್ (ವೆಸ್ಟ್ ಇಂಡೀಸ್): ಈಗಾಗಲೆ 2 ಟಿ20 ವಿಶ್ವಕಪ್ ಜಯಿಸಿರುವ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಈ ವರ್ಷ 3ನೇ ಪ್ರಶಸ್ತಿ ಒಲಿಸಿಕೊಳ್ಳುವ ಹಂಬಲದಲ್ಲಿದ್ದರು. ವಿಶ್ವದೆಲ್ಲೆಡೆ ವಿವಿಧ ಲೀಗ್​ಗಳ ಸಹಿತ ಒಟ್ಟಾರೆ 400ಕ್ಕೂ ಅಧಿಕ ಟಿ20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಅವರನ್ನು ವಿಂಡೀಸ್ ಈ ವರ್ಷದ ಚುಟುಕು ಕ್ರಿಕೆಟ್ ವಿಶ್ವಕಪ್​ನಿಂದ ಕಡೆಗಣಿಸಲು ಸಾಧ್ಯವೇ ಇರಲಿಲ್ಲ. ಆದರೆ ಈಗಾಗಲೆ 40 ವರ್ಷದ ಗೇಲ್ ವೃತ್ತಿಜೀವನಕ್ಕೆ ಬಹುತೇಕ ತೆರೆ ಎಳೆದಂತಾಗಿದೆ.

ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ): ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲಿ ಗಾಯದಿಂದಾಗಿ ಹೊರಬಿದ್ದಿದ್ದ ವೇಗಿ ಡೇಲ್ ಸ್ಟೈಲ್ ಈ ವರ್ಷ ಟಿ20 ವಿಶ್ವಕಪ್​ನಲ್ಲಿ ಆಡಿ ನಿವೃತ್ತಿ ಪ್ರಕಟಿಸುವ ಕನಸು ಹೊಂದಿದ್ದರು. ಆದರೆ 37 ವರ್ಷದ ಸ್ಟೈನ್ ಇನ್ನೊಂದು ವರ್ಷ ಕ್ರಿಕೆಟ್​ನಲ್ಲಿ ಮುಂದುವರಿಯುವುದು ಅನುಮಾನ.

ಲಸಿತ್ ಮಾಲಿಂಗ (ಶ್ರೀಲಂಕಾ): ಈಗಾಗಲೆ ಟೆಸ್ಟ್, ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ 36 ವರ್ಷದ ವೇಗಿ ಲಸಿತ್ ಮಾಲಿಂಗ ಈ ವರ್ಷ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದರು. ಆದರೆ ಈಗ ಟಿ20 ವಿಶ್ವಕಪ್ ಮುಂದೂಡಿಕೆಯಿಂದಾಗಿ ಮಾಲಿಂಗ ಕನಸು ನನಸಾಗುವ ಸಾಧ್ಯತೆ ಕಡಿಮೆಯಾಗಿದೆ.

ಡ್ವೇಯ್ನ್ ಬ್ರಾವೊ (ವೆಸ್ಟ್ ಇಂಡೀಸ್): ಆಲ್ರೌಂಡರ್ ಡ್ವೇಯ್ನ್ ಬ್ರಾವೊ ಈ ವರ್ಷ ಟಿ20 ವಿಶ್ವಕಪ್​ನಲ್ಲಿ ಕೊನೆಯದಾಗಿ ಆಡುವ ಹಂಬಲದಿಂದ ನಿವೃತ್ತಿ ಹಿಂಪಡೆದಿದ್ದರು. ಆದರೆ ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳೆಗೆ 38 ವರ್ಷ ಆಗಲಿರುವ ಕಾರಣ ಬ್ರಾವೊ ಆಸೆ ಬಹುತೇಕ ಕೈಬಿಟ್ಟಂತಾಗಿದೆ.

ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ): ಕಳೆದ ವರ್ಷದ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರೂ, 41 ವರ್ಷದ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ವರ್ಷ ಟಿ20 ವಿಶ್ವಕಪ್​ನಲ್ಲಿ ಆಡುವ ಹಂಬಲದಲ್ಲಿದ್ದರು. ಆದರೆ, ಅವರ ಆಸೆ ಈಗ ಬಹುತೇಕ ಭಗ್ನಗೊಂಡಿದೆ.

ಶೋಯಿಬ್ ಮಲಿಕ್ (ಪಾಕಿಸ್ತಾನ): ಕಳೆದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ನೀರಸ ನಿರ್ವಹಣೆಯ ಬಳಿಕ ಈ ವರ್ಷದ ಟಿ20 ವಿಶ್ವಕಪ್​ನಲ್ಲಾದರೂ ಗಮನಾರ್ಹ ಆಟವಾಡಿ ನಿವೃತ್ತಿ ಹೇಳುವುದು 38 ವರ್ಷದ ಆಲ್ರೌಂಡರ್ ಶೋಯಿಬ್ ಮಲಿಕ್ ಯೋಜನೆಯಾಗಿತ್ತು. ಇನ್ನೂ 1 ವರ್ಷ ಕಾಲ ಅವರು ಈ ಸ್ಥಾನ ಭದ್ರಪಡಿಸಿಕೊಳ್ಳುವ ಬಗ್ಗೆ ಅನುಮಾನ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net