ಇಂದು ಗೋಲ್ಡ್​ಕೋಸ್ಟ್​ನಲ್ಲಿ 4ನೇ ಟಿ20; ಮುನ್ನಡೆಗಾಗಿ ಭಾರತ-ಆಸ್ಟ್ರೆಲಿಯಾ ಪೈಪೋಟಿ

web 4th t20
Published on

ಗೋಲ್ಡ್​ಕೋಸ್ಟ್​: ಆತಿಥೇಯ ಆಸ್ಟ್ರೆಲಿಯಾ ತಂಡದ ಪ್ರಮುಖ ಆಟಗಾರರ ಗೈರಿನಲ್ಲಿ ಭಾರತ ತಂಡ ಕಾಂಗರೂ ನೆಲದ ಟಿ20 ಸರಣಿಯಲ್ಲಿ ತನ್ನ ಅಜೇಯ ಓಟವನ್ನು ವಿಸ್ತರಿಸುವ ನಿರೀಕ್ಷೆಯಲ್ಲಿದೆ. ಗುರುವಾರ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಪಡೆ ಹಾಗೂ ಮಿಚೆಲ್​ ಮಾರ್ಷ್​ ಬಳಗ ಮುಖಾಮುಖಿ ಆಗಲಿದ್ದು, ಭಾರತವೇ ಫೇವರಿಟ್​ ಎನಿಸಿದೆ.

ಹೋಬರ್ಟ್​ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-1ರಿಂದ ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿ ಸೋಲಿನ ಭೀತಿಯಿಂದ ಪಾರಾಗಲಿದೆ. ಆಸ್ಟ್ರೆಲಿಯಾದಲ್ಲಿ ತನ್ನ ಮೂರನೇ ಗರಿಷ್ಠ ಯಶಸ್ವಿ ಚೇಸಿಂಗ್​ ನಡೆಸಿರುವ ಭಾರತ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ಸರಣಿಯಲ್ಲಿ ಮೇಲುಗೈ ಸಾಧಿಸುವ ಹಂಬಲದಲ್ಲಿದೆ. ಜೋಶ್​ ಹ್ಯಾಸಲ್​ವುಡ್​ ಅನುಪಸ್ಥಿತಿಯ ಜತೆಗೆ ಟ್ರಾವಿಸ್​ ಹೆಡ್​ ಅಲಭ್ಯತೆ ಆಸೀಸ್​ಗೆ ಮತ್ತೊಂದು ಹಿನ್ನಡೆ ತಂದಿದೆ. ಸರಣಿ ಗೆಲುವು ಮುಂದಿನ ವರ್ಷ ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್​ ಟೂರ್ನಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಲಿದೆ. ಐಸಿಸಿ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಡಗೈ ಆರಂಭಿಕ ಅಭಿಷೇಕ್​ ಶರ್ಮ, ಸರಣಿಯಲ್ಲಿ 100 ಪ್ಲಸ್​ ರನ್​ಗಳಿಸಿರುವ ಏಕೈಕ ಭಾರತೀಯ ಬ್ಯಾಟರ್​. ಹಾಲಿ ಸರಣಿಯ ಬಳಿಕ ವಿಶ್ವಕಪ್​ ಸಿದ್ಧತೆಗೆ ಭಾರತಕ್ಕೆ ಕೇವಲ 10 ಪಂದ್ಯಗಳು ಬಾಕಿ ಉಳಿಯಲಿವೆ. ಬೌಲಿಂಗ್​ ವಿಭಾಗದಲ್ಲಿ ಜಸ್​ಪ್ರೀತ್​ ಬುಮ್ರಾ ವಿಕೆಟ್​ ಪಡೆಯುವಲ್ಲಿ ವಿಫಲರಾದರೂ, ರನ್​ಗಳಿಕೆಗೆ ನಿಯಂತ್ರಣ ಹೇರುವಲ್ಲಿ ಸಫಲರಾಗಿದ್ದಾರೆ. ಅರ್ಷದೀಪ್​ ಸಿಂಗ್​, ವರುಣ್​ ಚಕ್ರವರ್ತಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ವೇಗಿ ಹ್ಯಾಸಲ್​ವುಡ್​ ಅಲಭ್ಯತೆಯಿಂದ ಆಸೀಸ್​ ಬೌಲಿಂಗ್​ ವಿಭಾಗ ಬಲ ಕಳೆದುಕೊಂಡಿದೆ. ಆಲ್ರೌಂಡರ್​ ಗ್ಲೆನ್​ ಮ್ಯಾಕ್​ವೆಲ್​, ಬೆನ್​ ಡ್ವಾರ್ಶುಯಿಸ್​ ಸೇರ್ಪಡೆ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬುವ ನಿರೀಕ್ಷೆ ಇದೆ.

ಗಿಲ್​, ಸೂರ್ಯ ರನ್​ಬರ!

ಮುಂದಿನ ವರ್ಷದ ವಿಶ್ವಕಪ್​ ಬಳಿಕ ಟಿ20 ನಾಯಕತ್ವವೂ ಪಡೆಯುವ ಹಾದಿಯಲ್ಲಿರುವ ಉಪನಾಯಕ ಶುಭಮಾನ್​ ಗಿಲ್​ಗೆ ಹಾಲಿ ಸರಣಿಯ ಫಾರ್ಮ್​ ಹಿನ್ನಡೆ ಎನಿಸಿದೆ. ಕಳೆದ ಆರು ಇನಿಂಗ್ಸ್​ಗಳಲ್ಲಿ ಅವರು ಒಂದೂ ಅರ್ಧಶತಕ ಸಿಡಿಸದ ಅವರು, 10,9, 24,ಅಜೇಯ 37, 5 ಮತ್ತು 15 ರನ್​ ಮಾತ್ರ ಗಳಿಸಿದ್ದಾರೆ. ಈ ಸರಣಿ ಬಳಿಕ ಮತ್ತೆ ರೆಡ್​ಬಾಲ್​ ಕ್ರಿಕೆಟ್​ಗೆ ಗಿಲ್​ ಮರಳಲಿದ್ದು, ಇದಕ್ಕೆ ಮುನ್ನ ಲಯಕ್ಕೆ ಮರಳಬೇಕಿದೆ. ಸೂರ್ಯಕುಮಾರ್​ ಉತ್ತಮ ಆರಂಭ ಪಡೆದರೂ, ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗಿದ್ದು, ನಿರೀಕ್ಷೆಗೆ ತಕ್ಕ ರನ್​ಗಳಿಸಿಲ್ಲ. ದಣ ಆಫ್ರಿಕಾ ವಿರುದ್ಧ ತವರಿನ ಚುಟುಕು ಸರಣಿಗೆ ಮುನ್ನ ಸೂರ್ಯ ರಣಜಿ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳಿವೆ. ತಿಲಕ್​ ವರ್ಮ 125ರ ಕೆಳಗಿನ ಸ್ಟ್ರೈಕ್​​ರೇಟ್​ನೊಂದಿಗೆ ಬ್ಯಾಟಿಂಗ್​ ನಡೆಸುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ವಾಷಿಂಗ್ಟನ್​ ಸುಂದರ್​ ಹಿಂದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಗೆಲುವಿಗೆ ನೆರವಾಗಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಟೀಮ್​ನ್ಯೂಸ್​

ಭಾರತ: ಗೆಲುವಿನ ಕಾಂಬಿನೇಷನ್​ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಹೋರ್ಬಟ್​ನಲ್ಲಿ ದುಬಾರಿ ಆಗಿದ್ದ ಶಿವಂ ದುಬೆ ಬದಲಿಗೆ ನಿತೀಶ್​ ಕುಮಾರ್​ ರೆಡ್ಡಿ ಮರಳಬಹುದು. ಗಾಯದ ಸಮಸ್ಯೆಯಿಂದ ಮೊದಲ ಮೂರು ಪಂದ್ಯಗಳಿಗೆ ನಿತೀಶ್​ ಅಲಭ್ಯರಾಗಿದ್ದರು. ಕುಲದೀಪ್​ ಯಾದವ್​ರನ್ನು ಅಂತಿಮ ಎರಡು ಪಂದ್ಯಗಳಿಗೆ ತಂಡದಿಂದ ಬಿಡುಗಡೆ ಮಾಡಲಾಗಿದ್ದು, ವರುಣ್​ ಚಕ್ರವರ್ತಿ ಏಕೈಕ ತಜ್ಞ ಸ್ಪಿನ್ನರ್​ ಆಗಿ ಮುಂದುವರಿಯಲಿದ್ದಾರೆ.

ಆಸ್ಟ್ರೆಲಿಯಾ: ಆಶಸ್​ ಟೆಸ್ಟ್​ ಸಿದ್ಧತೆಗಾಗಿ ಸರಣಿಯಿಂದ ಟ್ರಾವಿಸ್​ ಹೆಡ್​ ನಿರ್ಗಮಿಸಿದ್ದು, ಮಿಚೆಲ್​ ಮಾರ್ಷ್​ ಜತೆಗೆ ಮ್ಯಾಟ್​ ಶಾರ್ಟ್​ ಇನಿಂಗ್ಸ್​ ಆರಂಭಿಸುವ ನಿರೀಕ್ಷೆ ಇದೆ. ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ತಂಡಕ್ಕೆ ಲಭ್ಯವಾಗುವ ನಿರೀೆಯಿದೆ. ಸೀನ್​ ಅಬೋಟ್​ ಸಹ ಗೈರಾಗಲಿದ್ದು, ಬೆನ್​ ಡ್ವಾಶುರ್ಯಿಸ್​ ಸೇರ್ಪಡೆಯಾಗಿದ್ದಾರೆ. ಮಹ್ಲಿ ಬಿಯರ್ಡ್​ಮನ್​ ಚೊಚ್ಚಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 1.45

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಪಿಚ್​ ರಿಪೋರ್ಟ್​

ಕ್ಯಾರಾರಾದ ಗೋಲ್ಡ್​ಕೋಸ್ಟ್​ ಕ್ರೀಡಾಂಗಣದಲ್ಲಿ ಇದುವರೆಗೆ ಕೇವಲ 2 ಅಂತಾರಾಷ್ಟ್ರೀಯ ಪಂದ್ಯಗಳು ಮಾತ್ರ ನಡೆದಿವೆ. ಇದರಲ್ಲಿ ಒಂದು 10 ಓವರ್​ಗಳ ಪಂದ್ಯವಾಗಿದೆ. ಆದರೆ ಬಿಗ್​ಬಾಷ್​ ಲೀಗ್​ನಲ್ಲಿ 10 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, ಬ್ಯಾಟರ್​ಗಳಿಗೆ ಹೆಚ್ಚಿನ ನೆರವು ನೀಡಿದೆ.

*39. ಅಭಿಷೇಕ್​ ಶರ್ಮ ಇನ್ನು 39 ರನ್​ಗಳಿಸಿದರೆ ಟಿ20ಯಲ್ಲಿ ವೇಗವಾಗಿ ಸಾವಿರ ರನ್​ ಗಳಿಸಿದ ಭಾರತೀಯ ಬ್ಯಾಟರ್​ ಎನಿಸಲಿದ್ದಾರೆ. ವಿರಾಟ್​ ಕೊಹ್ಲಿ 29 ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರೆ, ಅಭಿಷೇಕ್​ ಇದುವರೆಗೆ 26 ಇನಿಂಗ್ಸ್​ಗಳಷ್ಟೇ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net