

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಲವು ಗೊಂದಲ ಹಾಗೂ ವಿಳಂಬದ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) 2025-28ರ ಸಾಲಿನ ಆಡಳಿತ ಮಂಡಳಿಯ ಚುನಾವಣೆಯ ದಿನಾಂಕ ಈಗಾಗಲೆ ಘೋಷಣೆ ಆಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯ ವಿವರ ವಿಜಯವಾಣಿಗೆ ಲಭ್ಯವಾಗಿದೆ. ನವೆಂಬರ್ 30ರಂದು ನಿಗದಿಯಾಗಿರುವ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನವೆಂಬರ್ 12ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
ನಾಮಪತ್ರ ಸಲ್ಲಿಕೆಗೆ ನವೆಂಬರ್ 15 ಅಂತಿಮ ದಿನವಾಗಿದ್ದು, ಅಭ್ಯರ್ಥಿಗಳು ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಸ್ವೀಕೃತ ನಾಮಪತ್ರಗಳ ಪರಿಶೀಲನೆ ನವೆಂಬರ್ 17ರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಮಾನ್ಯತೆ ಹೊಂದಿರುವ ನಾಮಪತ್ರಗಳ ಪಟ್ಟಿ ಪ್ರಕಟವಾಗಲಿದೆ.
ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 18 ಅಂತಿಮ ದಿನವಾಗಿದ್ದು, ಮರುದಿನ ಅಂದರೆ 19ರ ಸಂಜೆ 5 ಗಂಟೆಗೆ ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನವೆಂಬರ್ 30ರಂದು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಮತದಾನ ಪ್ರಕ್ರಿಯೆ ಬಳಿಕ ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಮಂಗಳವಾರ ಚುನಾವಣಾಧಿಕಾರಿಯ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ತಂಡದ ಮಾಜಿ ವೇಗಿ ಹಾಗೂ ಕೆಎಸ್ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಬಣ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಆಗಸ್ಟ್ನಲ್ಲೇ ಅಧಿಕೃತವಾಗಿ ಘೋಷಿಸಿದೆ.