

ದೋಹಾ: ಏಷ್ಯಾಕಪ್ ಟಿ20, ಮಹಿಳಾ ವಿಶ್ವಕಪ್ ಬಳಿಕ ಭಾರತ-ಪಾಕಿಸ್ತಾನ ತಂಡಗಳು ಮತ್ತೊಂದು ಕ್ರಿಕೆಟ್ ಕದನಕ್ಕೆ ಸಿದ್ಧಗೊಂಡಿವೆ. ನವೆಂಬರ್ 14ರಿಂದ ಕತಾರ್ನಲ್ಲಿ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಎ ತಂಡಗಳು ನವೆಂಬರ್ 16ರಂದು ಮುಖಾಮುಖಿ ಆಗಲಿವೆ.
ಏಷ್ಯಾಕಪ್ ಎಮರ್ಜಿಂಗ್ ಎಂಬ ಹೆಸರು ಹೊಂದಿದ್ದ ಈ ಟೂರ್ನಿ ಇದೀಗ ರೈಸಿಂಗ್ ಸ್ಟಾರ್ಸ್ ಟೂರ್ನಿಯಾಗಿ ಬದಲಾಗಿದೆ. ಇದು ಏಷ್ಯಾದ ಉದಯೋನ್ಮುಖ ಕ್ರಿಕೆಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಡುವ ಟೂರ್ನಿಯಾಗಿದೆ. 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಎ ತಂಡಗಳ ಜತೆಗೆ ಯುಎಇ, ಓಮನ್ ತಂಡಗಳಿದ್ದರೆ, ಎ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಎ ತಂಡಗಳ ಜತೆಗೆ ಹಾಂಕಾಂಗ್ ತಂಡ ಸ್ಥಾನ ಪಡೆದಿದೆ.
ಭಾರತ ಎ ನ.14ಕ್ಕೆ ಯುಎಇ ವಿರುದ್ಧ ಮೊದಲ ಪಂದ್ಯವಾಡಿದರೆ, ನ.18ರ ಕೊನೇ ಲೀಗ್ ಪಂದ್ಯದಲ್ಲಿ ಓಮನ್ ವಿರುದ್ಧ ಆಡಲಿದೆ. ಗುಂಪಿನ ಅಗ್ರ 2 ತಂಡಗಳು ನ.21ರಂದು ನಡೆಯಲಿರುವ ಸೆಮಿಫೈನಲ್ ಪ್ರವೇಶಿಸಲಿವೆ. ನ.23ರಂದು ಫೈನಲ್ ನಡೆಯಲಿದೆ.