

ನವದೆಹಲಿ: ಅ. 14ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದ ಗುಂಗಿನಿಂದ ಕ್ರೀಡಾಭಿಮಾನಿಗಳು ಇನ್ನೂ ಹೊರಬಂದಿಲ್ಲ. ಭಾರತೀಯ ಪಾಲಿಗೆ ಇದೊಂದು ಸುವರ್ಣ ದಿನವಾಗಿದ್ದರೆ, ಪಾಕ್ ಪಾಲಿಗೆ ಕರಾಳ ದಿನ. ವಿಶ್ವಕಪ್ ಇತಿಹಾಸದಲ್ಲಿ ಭಾರತದ ಮುಂದೆ ಸತತ 8 ಬಾರಿಗೆ ಪಾಕ್ ಮಂಡಿಯೂರಿದೆ. ಇದನ್ನು ಸಹಿಸಲಾಗದೇ ಪಾಕ್ ಕ್ರೀಡಾಭಿಮಾನಿಗಳು ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಪಾಕ್ ಟಿಕ್ಟಾಕರ್ ಒಬ್ಬಳು ಭಾರತದ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾಳೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನದ ವಿರುದ್ಧ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಪಾಕಿಸ್ತಾನದ ವಿವಾದಾತ್ಮಕ ಟಿಕ್ಟಾಕರ್ ಹರೀಮ್ ಶಾ ಆರೋಪ ಮಾಡಿದ್ದಾಳೆ.
ಟ್ವೀಟ್ನಲ್ಲಿ ಏನಿದೆ? ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಹರೀಮ್ ಶಾ, ನಂಬಲಾರ್ಹ ಮೂಲಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ತಂಡದ ವಿರುದ್ಧ ವಾಮಾಚಾರ ಮಾಡಲು ಖ್ಯಾತ ವಾಮಾಚಾರ ತಜ್ಞ/ಮಂತ್ರಗಾರ ಕಾರ್ತಿಕ್ ಚಕ್ರಬೂರ್ತಿ ಅವರನ್ನು ನೇಮಿಸಿದ್ದರು. ಐಸಿಸಿ ಈ ಬಗ್ಗೆ ತನಿಖೆ ಮಾಡಲೇಬೇಕು. ಇದು ನಿಜಕ್ಕೂ ಸ್ವೀಕಾರವಲ್ಲ ಎಂದು ಹರೀಮ್ ಷಾ ಆರೋಪಿಸಿದ್ದಾಳೆ.
ಹಿಗ್ಗಾಮುಗ್ಗಾ ಟ್ರೋಲ್ ಹರೀಮ್ ಶಾ ಮಾಡಿರುವ ಟ್ವೀಟ್ ಈವರೆಗೆ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಟ್ವೀಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಹರೀಮ್ ಶಾಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಅ.23ರಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆಯೂ ಅಫ್ಘಾನಿಸ್ತಾನಕ್ಕೂ ಭಾರತ ಇದೇ ರೀತಿಯಲ್ಲಿ ನೆರವಾಗಲಿ ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಭಾರತಕ್ಕೆ ಕೌಂಟರ್ ಕೊಡಲು ಪಾಕಿಸ್ತಾನ ಪಿಂಕಿ ಪೆರ್ನಿಯನ್ನು ನೇಮಿಸಿಕೊಳ್ಳಲಿ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದರೆ, ಇದು ಟ್ರೈಲರ್ ಅಷ್ಟೇ ಆಫ್ಘಾನ್ ಮತ್ತು ಪಾಕ್ ವಿರುದ್ಧದ ಪಂದ್ಯಕ್ಕೆ ಮತ್ತೊಂದನ್ನು ರೆಡಿ ಮಾಡುತ್ತಿದ್ದೇವೆ ಎಂದು ಮತ್ತೊರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ. ಯೋಚನೆ ಮಾಡಬೇಡಿ ಫೈನಲ್ಗೆ ಹೋಗಲು ಇನ್ನು ಎರಡ್ಮೂರು ಪಂದ್ಯಗಳಿವೆ ಎಂದು ಇನ್ನೊರ್ವ ನೆಟ್ಟಿಗ ಹರಿಮ್ ಶಾ ಕಾಲೆಳೆದಿದ್ದಾರೆ.
ಪಾಕ್ ವಿರುದ್ಧ ವಿಶ್ವಕಪ್ ಗೆಲುವಿನ ಸರಣಿ
ಪಂದ್ಯದ ವಿಚಾರಕ್ಕೆ ಬರುವುದಾದರೆ, ಅ.14ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್ಗಳು ಎದುರಾಳಿ ಪಾಕ್ ತಂಡವನ್ನು 42.5 ಓವರ್ಗಳಲ್ಲಿ 191ಕ್ಕೆ ಆಲೌಟ್ ಮಾಡಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ (7-1-19-2), ಮೊಹಮ್ಮದ್ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
192ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮಾ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್), ಶ್ರೇಯಸ್ ಅಯ್ಯರ್ (53 ರನ್, 62 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭ ಗುರಿಯನ್ನು 30.3 ಒವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ವಿಶ್ವಕಪ್ ಟೂರ್ನಿಯಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, 8 ಬಾರಿಯೂ ಭಾರತವೇ ಜಯಿಸಿದೆ. (ಏಜೆನ್ಸೀಸ್)