ಮೂವರು ಸ್ಟಾರ್ ಆಟಗಾರರಿಗಿಲ್ಲ ಅವಕಾಶ! ಟೀಮ್ ಇಂಡಿಯಾ ಓಪನರ್​ ಆಗಿ 'ಬೇಬಿ ಬಾಸ್​' ಅಖಾಡಕ್ಕೆ? | Asia Cup 2025

ವಿಜಯವಾಣಿ - 2025-08-18T195605.639
Published on

Asia Cup 2025: ಇದೇ ಸೆ.9ರಿಂದ 28 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್​ ಟೂರ್ನಿಗೆ ಭಾರತ ತಂಡ ಪ್ರಕಟವಾಗುವುದಷ್ಟೇ ಬಾಕಿ ಉಳಿದಿದೆ. ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರಿಗೆಲ್ಲ ಅವಕಾಶ ಸಿಗಲಿದೆ? ಎಂಬ ಹಲವು ಕುತೂಹಲಕಾರಿ ಪ್ರಶ್ನೆಗಳು ಸದ್ಯ ಕ್ರಿಕೆಟ್​ ಪ್ರಿಯರನ್ನು ಕಾಡತೊಡಗಿದೆ. ಈ ಮಧ್ಯೆ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕ ಬ್ಯಾಟರ್ ಆಗಿ ಮಿಂಚಿದ್ದ 'ಬೇಬಿ ಬಾಸ್​', ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐಗೆ ಸಲಹೆಗಳು ಬಂದಿರುವುದಾಗಿ 'ಹಿಂದೂಸ್ತಾನ್​ ಟೈಮ್ಸ್​' ವರದಿ ಉಲ್ಲೇಖಿಸಿದೆ.

ಗಿಲ್​, ಸಿರಾಜ್​, ಅಯ್ಯರ್...

ಏಷ್ಯಾ ಕಪ್​ಗೆ ಯಾರನ್ನು ಆಡಿಸುವುದು ಉತ್ತಮ ಎಂಬ ಲೆಕ್ಕಾಚಾರದಲ್ಲಿ ಮ್ಯಾನೇಜ್​ಮೆಂಟ್​ ತೊಡಗಿದೆ. ಈ ಕುರಿತಂತೆ ಬಿಸಿಸಿಐ ಆಯ್ಕೆ ಸಮಿತಿಯು, ಸಾಕಷ್ಟು ಬಲವಾದ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಸುದ್ದಿಗಳಿವೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ನಾಳೆ (ಆ.19) ಮುಂಬೈನಲ್ಲಿ ಸಭೆ ಸೇರಲಿದೆ. ಈ ವೇಳೆ ಮೂರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಟೆಸ್ಟ್​ ಕ್ಯಾಪ್ಟನ್​ ಶುಭ್‌ಮನ್ ಗಿಲ್, ವೇಗಿ ಮೊಹಮ್ಮದ್​ ಸಿರಾಜ್ ಮತ್ತು ಶ್ರೇಯಸ್​ ಅಯ್ಯರ್​ರನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ.

ಬೇಬಿ ಬಾಸ್​ ಕ್ರೀಸ್​ಗೆ?

ಆಯ್ಕೆ ಸಮಿತಿಯು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್​ರನ್ನು ಆರಂಭಿಕ ಬ್ಯಾಟರ್​ ಆಗಿ ಕಳುಹಿಸಲು ಮೊದಲ ಆದ್ಯತೆ ನೀಡಿದೆ. ಹೀಗಾಗಿ, ಯಶಸ್ವಿ ಜೈಸ್ವಾಲ್​ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ಐಪಿಎಲ್​ 18ನೇ ಆವೃತ್ತಿಯಲ್ಲಿ ಆರ್​ಆರ್​ ಪರ ಸ್ಪೋಟಕ ಓಪನಿಂಗ್​ ನೀಡಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ತಾನೊಬ್ಬ ಟಿ20 ಸ್ಪೆಷಲಿಸ್ಟ್​ ಎಂಬುದನ್ನು ಇದೊಂದು ಆವೃತ್ತಿಯಲ್ಲೇ ಸಾಬೀತುಪಡಿಸಿದರು. ಈ ವಿಷಯವನ್ನು ಮಾಜಿ ರಾಷ್ಟ್ರೀಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಕೂಡ ಮುನ್ನೆಲೆಗೆ ತಂದಿದ್ದು, ವೈಭವ್​ರನ್ನು ಏಷ್ಯಾ ಕಪ್​ಗೆ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

"ಈ ವಿಷಯದಲ್ಲಿ ವೈಭವ್​ರನ್ನು ಕಾಯುವಂತೆ ಮಾಡಬೇಡಿ. ಈಗಾಗಲೇ ಆತ ಉತ್ತಮ ಫಾರ್ಮ್​ನಲ್ಲಿದ್ದಾನೆ. ನಾನೇನಾದರೂ ಅಧ್ಯಕ್ಷನಾಗಿದ್ದರೆ, ಖಂಡಿತವಾಗಿಯೂ ಅವರನ್ನು ತಂಡದಲ್ಲಿ ಆಡಿಸುತ್ತಿದ್ದೆ" ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net