

ಅಹಮದಾಬಾದ್: ಭಾರತ 2011ರಲ್ಲಿ ಕೊನೇ ಬಾರಿ ತವರಿನಲ್ಲೇ ಟೂರ್ನಿ ಆಯೋಜಿಸಿ ವಿಶ್ವಕಪ್ ಗೆದ್ದಾಗ ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಅದು 6ನೇ ಹಾಗೂ ಕೊನೇ ವಿಶ್ವಕಪ್ ಆಗಿತ್ತು. ಹೀಗಾಗಿ ಅವರಿಗೆ ವಿಶ್ವಕಪ್ ಗೆಲುವಿನ ಸಂಭ್ರಮ ನೀಡುವ ಹಂಬಲ ಟೀಮ್ ಇಂಡಿಯಾಗೆ ಸ್ಫೂರ್ತಿ ತುಂಬಿತ್ತು. ಅದೇ ರೀತಿ ಈ ಸಲ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಗೆ ಇದು ಬಹುತೇಕ ಕೊನೇ ವಿಶ್ವಕಪ್ ಆಗಿದ್ದು, ಅವರಿಗಾಗಿ ವಿಶ್ವಕಪ್ ಗೆಲ್ಲುವ ಛಲ ತಂಡದಲ್ಲಿದೆ. ಗೆಲುವಿನ ಬಳಿಕ ಯುವ ಆಟಗಾರರು ಕೊಹ್ಲಿ, ರೋಹಿತ್ರನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದರೆ ಅಚ್ಚರಿ ಇಲ್ಲ.
ಕೊಹ್ಲಿ, ರೋಹಿತ್, ವಾರ್ನರ್ಗೆ ವಿಶ್ವಕಪ್ನಲ್ಲಿ ಕೊನೆಯ ಪಂದ್ಯ!
ಕ್ರಿಕೆಟ್ ಜಗತ್ತಿನ ಹಾಲಿ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮೊಹಮದ್ ಶಮಿ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ಗೆ ಇದು ಏಕದಿನ ವಿಶ್ವಕಪ್ನಲ್ಲಿ ಕೊನೇ ಪಂದ್ಯವಾಗಿರಲಿದೆ. ಈ ಮೂಲಕ ಕ್ರಿಕೆಟ್ ಲೋಕದ ಒಂದು ಪ್ರಮುಖ ತಲೆಮಾರಿನ ಅಧ್ಯಾಯ ಕೊನೆಗೊಳ್ಳಲಿದೆ. ಈ ಮುನ್ನ 2011ರಲ್ಲೂ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್, ಆಡಂ ಗಿಲ್ಕ್ರಿಸ್ಟ್, ಗ್ರೇಮ್ ಸ್ಮಿತ್, ಶೋಯಿಬ್ ಅಖ್ತರ್, ಕೆವಿನ್ ಪೀರ್ಟಸೆನ್ರಂಥ ಪ್ರಮುಖ ಸ್ಟಾರ್ಗಳ ವಿಶ್ವಕಪ್ ಅಧ್ಯಾಯ ಮುಗಿದಿತ್ತು.