

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್, ಇಂದು ಆತಿಥೇಯ ಬಿಹಾರ ಮತ್ತು ಮುಂಬೈ ನಡುವಿನ ರಣಜಿ ಟ್ರೋಫಿ ಪಂದ್ಯ ನಡೆದ ಪಾಟ್ನಾ ಕ್ರಿಕೆಟ್ ಸ್ಟೇಡಿಯಂನ ದುಸ್ಥಿತಿ ಕಂಡು ತೀವ್ರ ಅಸಮಾಧಾನ ಹೊರಹಾಕಿದ್ದು, ಬಿಹಾರ ಕ್ರಿಕೆಟ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಣಜಿ ಟ್ರೋಫಿ 2023-24ರ ಸೀಸನ್ ಶುಕ್ರವಾರ ಪ್ರಾರಂಭವಾಗಿದ್ದು, ಭಾರತದಲ್ಲಿ 19 ಸ್ಥಳಗಳಲ್ಲಿ 19 ಪಂದ್ಯಗಳು ನಡೆಯುತ್ತಿವೆ. ಬಿಹಾರ ಮತ್ತು ಮುಂಬೈ ನಡುವಿನ ಪಂದ್ಯವು ಪಾಟ್ನಾದ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ನಡೆಯಿತು. ಆದರೆ, ಅಲ್ಲಿನ ಕ್ರೀಡಾಂಗಣದ ಸ್ಥಿತಿ ತೀರಾ ಹದಗೆಟ್ಟು ಹೋಗಿದೆ ಎಂದು ವರದಿಯಾಗಿದೆ.
ವರುಣ್ ಗಿರಿ ಎಂಬುವವರು ಪಾಟ್ನಾದ ಕ್ರಿಕೆಟ್ ಸ್ಟೇಡಿಯಂನ ದುಸ್ಥಿತಿಯ ವೀಡಿಯೋವನ್ನು ಎಕ್ಸ್ನಲ್ಲಿ (ಈ ಹಿಂದೆ ಟ್ವಿಟರ್) ಶೇರ್ ಮಾಡಿದ್ದು, ದೃಶ್ಯದಲ್ಲಿ ಸ್ಟೇಡಿಯಂನ ಕಳಪೆ ಮಟ್ಟ ಹಾಗೂ ಅಲ್ಲಿ ಬಟ್ಟೆಗಳನ್ನು ಒಣಗಿಸಲು ಬಳಸಲಾಗುತ್ತಿರುವುದನ್ನು ತೋರಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ, ಪಾಟ್ನಾ ಕ್ರೀಡಾಂಗಣದ ಕಳಪೆ ಸ್ಥಿತಿಯನ್ನು ಪುನರುತ್ಥಾನಗೊಳಿಸುವ ಜವಾಬ್ದಾರಿಯನ್ನು ಬಿಹಾರ ಕ್ರಿಕೆಟ್ ಸಂಸ್ಥೆ ಏಕೆ ವಹಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದ್ದು, "ಇದು ಒಪ್ಪುವಂತದ್ದಲ್ಲ, ರಣಜಿ ಟ್ರೋಫಿಯು ಭಾರತದಲ್ಲಿನ ಪ್ರಥಮ ದೇಶೀಯ ಸ್ಪರ್ಧೆಯಾಗಿದೆ ಮತ್ತು ಎಲ್ಲಾ ಪಾಲುದಾರರು ಅದರ ಮೌಲ್ಯವನ್ನು ಅರಿತುಕೊಳ್ಳುವ ಸಮಯ ಬಂದಿದೆ. ರಾಜ್ಯ ಸಂಘವು ಇದನ್ನು ಸರಿಪಡಿಸದಿರಲು ಯಾವುದೇ ಮಾನ್ಯ ಕಾರಣವನ್ನು ನೋಡಬೇಡಿ" ಎಂದು ಖಡಕ್ ಆಗಿ ಹೇಳಿದ್ದಾರೆ,(ಏಜೆನ್ಸೀಸ್).