

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಕೈಗೊಂಡಿದ್ದ ಟೀಮ್ ಇಂಡಿಯಾ, ನಿನ್ನೆ (ಜು.30) ಸೂಪರ್ ಓವರ್ನಲ್ಲಿ ರೋಚಕ ಜಯ ಸಾಧಿಸಿದ್ದು, ಇದೀಗ ಲಂಕಾ ಪಡೆಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ, ಸರಣಿ ವಶಪಡಿಸಿಕೊಂಡಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್ ಗೆಲ್ಲಲು ಎದುರುನೋಡುತ್ತಿದೆ. ಒಂದೆಡೆ ಸೂರ್ಯ ನಾಯಕತ್ವದಲ್ಲಿ ತಂಡ ಗೆಲುವನ್ನು ಸಾಧಿಸಿತು ಎಂದು ಕ್ರಿಕೆಟ್ ಅಭಿಮಾನಿಗಳು ಭಾರೀ ಸಂತಸಪಟ್ಟರೆ, ಅತ್ತ ಎರಡನೇ ಬಾರಿಗೆ ಡಕ್ಔಟ್ ಆದ ಸಂಜು ಸ್ಯಾಮ್ಸನ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಾಂತಿ, ನೆಮ್ಮದಿ ಬದುಕಿಗೆ ಧರ್ಮವೊಂದೇ ಆಶಾಕಿರಣ
ಟಿ20 ವಿಶ್ವಕಪ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡರೂ ಸಹ ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾದರು. ಮೊದಲ ಮ್ಯಾಚ್ನಲ್ಲಿ ಚಾನ್ಸ್ ಪಡೆಯದ ಸಾಮ್ಸನ್ಗೆ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಯಶಸ್ವಿ ಜೈಸ್ವಾಲ್ ಜತೆ ಓಪನಿಂಗ್ ಬಂದ ಸಂಜು, ಗೋಲ್ಡನ್ ಡಕ್ಗೆ ಪೆವಿಲಿಯನ್ತ್ತ ಮುಖಮಾಡಿದ್ದರು. ಇದು ನೋಡುಗರಿಗೆ ಬಹಳ ಶಾಕಿಂಗ್ ಆಗಿತ್ತು. ಭಾರೀ ಭರವಸೆ ಇಟ್ಟು ಕಳುಹಿಸಲಾಗಿದ್ದ ಸ್ಟಾರ್ ಬ್ಯಾಟ್ಸ್ಮನ್ ಇಂತಹ ಕಳಪೆ ಪ್ರದರ್ಶನ ತೋರಿದ್ದು, ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇದೀಗ ಅದರ ಬೆನ್ನಲ್ಲೇ ಮೂರನೇ ಪಂದ್ಯದಲ್ಲಿಯೂ ಡಕ್ಔಟ್ ಆಗಿದ್ದು ಸದ್ಯ ಫ್ಯಾನ್ಸ್ಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.
ಎರಡನೇ ಮ್ಯಾಚ್ನಲ್ಲಿ ಗೋಲ್ಡನ್ ಡಕ್ ಆಗಿದ್ದ ಸಂಜುಗೆ ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ನಿನ್ನೆ ನಡೆದ ಮೂರನೇ ಹಾಗೂ ಕಡೆಯ ಟಿ20 ಪಂದ್ಯದಲ್ಲಿ ಮತ್ತೊಂದು ಅವಕಾಶ ಕೊಟ್ಟಿದ್ದರು. ಆದ್ರೆ, ಈ ಚಾನ್ಸ್ ಕೂಡ ಮಿಸ್ ಮಾಡಿಕೊಂಡ ಸ್ಯಾಮ್ಸನ್, 4 ಎಸೆತಗಳಲ್ಲಿ ಒಂದು ರನ್ ಸಹ ಕಲೆಹಾಕದ ಡಕ್ಔಟ್ ಆದರು.
ಇದು ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಭಾರೀ ಆಘಾತ ಉಂಟುಮಾಡಿತು. ತನಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳದೆ ಎಡವುತ್ತಿದ್ದಾರಾ ಸಾಮ್ಸನ್? ಇಲ್ಲಿಗೆ ಮುಗಿಯುತ್ತಾ ಇವರ ಕ್ರಿಕೆಟ್ ಕರಿಯರ್ ಎಂಬ ಪ್ರಶ್ನೆಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ.