

ಬ್ರಿಸ್ಬೇನ್: ಪರ್ತ್ನಲ್ಲಿ ಅಮೋ ನಿರ್ವಹಣೆ ತೋರಿ ಗೆದ್ದ ಬಳಿಕ ಪಿಂಕ್ ಬಾಲ್ನಲ್ಲಿ ಆಡಿದ ಅಡಿಲೇಡ್ ಟೆಸ್ಟ್ನಲ್ಲಿ ಎರಡೂವರೆ ದಿನಗಳಲ್ಲೇ ಸೋತರೂ, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮತ್ತೆ ಪುಟಿದೆದ್ದು ಬರಲು ಭಾರತ ತಂಡ ಸಜ್ಜಾಗಿದೆ. 1-1 ಸಮಬಲದಲ್ಲಿರುವ 5 ಪಂದ್ಯಗಳ ಸರಣಿಯ 3ನೇ ಪಂದ್ಯ ಗಾಬಾದ ಪೇಸ್-ಬೌನ್ಸಿ ಪಿಚ್ನಲ್ಲಿ ಶನಿವಾರದಿಂದ ನಡೆಯಲಿದ್ದು, ಆತಿಥೇಯ ಆಸ್ಟ್ರೆಲಿಯಾ ವಿರುದ್ಧ 3 ವರ್ಷಗಳ ಹಿಂದೆ ಇಲ್ಲಿ ಆಡಿದ ಕೊನೇ ಟೆಸ್ಟ್ ಪಂದ್ಯದಲ್ಲಿ ಗೆದ್ದ ಐತಿಹಾಸಿಕ ಸಾಧನೆಯನ್ನೇ ಪುನರಾವರ್ತಿಸುವ ಹಂಬಲ ರೋಹಿತ್ ಶರ್ಮ ಬಳಗದ್ದಾಗಿದೆ.
ಪರ್ತ್ ಗೆಲುವು ಭಾರತಕ್ಕೆ ಸರಣಿಯಲ್ಲಿ ಆರಂಭಿಕ ಮೇಲುಗೈ ತಂದುಕೊಟ್ಟಿದ್ದರೂ, ಅಡಿಲೇಡ್ನಲ್ಲಿ ಸೋತಿರುವುದರಿಂದ ಇನ್ನುಳಿದ 3 ಟೆಸ್ಟ್ಗಳು ಭಾರತದ ಪಾಲಿಗೆ ನಿರ್ಣಾಯಕ ಸವಾಲೆನಿಸಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಉಳಿಸಿಕೊಳ್ಳುವ ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೇರುವ ನಿಟ್ಟಿನಲ್ಲೂ ಭಾರತಕ್ಕೆ ಉಳಿದ 3ರಲ್ಲಿ ಕನಿಷ್ಠ 2 ಗೆಲುವಿನ ಅಗತ್ಯವಿದೆ.
ಪರ್ತ್ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ ಸದೃಢ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ, ಅಡಿಲೇಡ್ನ ಎರಡೂ ಇನಿಂಗ್ಸ್ಗಳಲ್ಲಿ ನೀರಸ ನಿರ್ವಹಣೆ ತೋರಿತ್ತು. ಬ್ರಿಸ್ಬೇನ್ನಲ್ಲಿ ಮತ್ತೆ ಭಾರತ ಅದೇ ಛಾತಿ ಮರುಕಳಿಸಬೇಕಾಗಿದೆ. ಪ್ರಮುಕವಾಗಿ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮ ದೊಡ್ಡ ಇನಿಂಗ್ಸ್ ಆಡುವ ಅಗತ್ಯವಿದೆ. ರೋಹಿತ್ ಕಳೆದ 6 ಟೆಸ್ಟ್ಗಳಲ್ಲಿ ಒಂದೇ ಅರ್ಧಶತಕ ಬಾರಿಸಿ ರನ್ಬರ ಎದುರಿಸುತ್ತಿದ್ದರೆ, ಕೊಹ್ಲಿ ಸ್ಥಿರ ನಿರ್ವಹಣೆ ಮುಂದುವರಿಸಬೇಕಾಗಿದೆ. ಪ್ರಮುಖವಾಗಿ ಕೆಟ್ಟ ಹೊಡೆತಗಳಿಗೆ ವಿಕೆಟ್ ಒಪ್ಪಿಸುವ ಚಾಳಿಯನ್ನು ಕೊಹ್ಲಿ ಬಿಡಬೇಕಾಗಿದೆ.
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಕೂಡ ಪರ್ತ್ ಪಂದ್ಯದ ಲಯವನ್ನು ಮರುಕಳಿಸಬೇಕಿದೆ. ಶುಭಮಾನ್ ಗಿಲ್, ರಿಷಭ್ ಪಂತ್ಗೆ 2021ರ ಇನಿಂಗ್ಸ್ ಸ್ಫೂರ್ತಿ ತುಂಬುವ ನಿರೀೆ ಇದ್ದರೆ, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲೂ ಹೆಚ್ಚಿನ ಕೊಡುಗೆ ನೀಡಬೇಕಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾಗೆ ಇತರ ವೇಗಿಗಳಿಂದ ಸಮರ್ಥ ಬೆಂಬಲ ಸಿಗಬೇಕಾಗಿದೆ. ಪ್ರಮುಖವಾಗಿ ಭಾರತ ಮೊದಲ ಇನಿಂಗ್ಸ್ನಲ್ಲೇ ದೊಡ್ಡ ಮೊತ್ತ ಪೇರಿಸುವತ್ತ ಗಮನಹರಿಸಬೇಕಾಗಿದೆ.
ಆಸೀಸ್ಗೆ ಸ್ಮಿತ್, ಮೆಕ್ಸ್ವೀನಿ ಚಿಂತೆ: ಅಡಿಲೇಡ್ನಲ್ಲಿ ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್ ಮಿಂಚಿರುವ ನಡುವೆ ಆಸೀಸ್ ಬ್ಯಾಟಿಂಗ್ ವಿಭಾಗಕ್ಕೆ ಆರಂಭಿಕ ನಾಥನ್ ಮೆಕ್ಸ್ವೀನಿ ಮತ್ತು ಅನುಭವಿ ಸ್ಟೀವನ್ ಸ್ಮಿತ್ ವೈಲ್ಯ ಚಿಂತೆ ತಂದಿದೆ. ಕಳೆದೆರಡು ಟೆಸ್ಟ್ಗಳಲ್ಲಿ ಸ್ಮಿತ್ ಒಟ್ಟು 19 ರನ್ ಮಾತ್ರ ಗಳಿಸಿದ್ದಾರೆ. ಅವರು ಶತಕ ಸಿಡಿಸಿ 24 ಇನಿಂಗ್ಸ್ಗಳಾಗಿವೆ.
ಕೆಂಪು ಚೆಂಡಿನಲ್ಲಿ ಭಾರತ ಮೇಲುಗೈ
ಆಸ್ಟ್ರೆಲಿಯಾ ನೆಲದಲ್ಲಿ ಕುಕಾಬುರಾ ಕೆಂಪು ಚೆಂಡಿನಲ್ಲಿ ಆಡಿರುವ ಕಳೆದ 10 ಟೆಸ್ಟ್ಗಳಲ್ಲಿ 5ರಲ್ಲಿ ಗೆದ್ದಿರುವ ಬಲಿಷ್ಠ ದಾಖಲೆ ಭಾರತ ತಂಡದ್ದಾಗಿದೆ. ಈ ಪೈಕಿ ಆಸೀಸ್ 1ರಲ್ಲಿ ಮಾತ್ರ ಗೆದ್ದಿದ್ದರೆ, ಉಳಿದ 4 ಟೆಸ್ಟ್ಗಳು ಡ್ರಾಗೊಂಡಿವೆ. ಇದು ಟೀಮ್ ಇಂಡಿಯಾಗೆ ಮತ್ತೆ ಗೆಲುವಿನ ಹಳಿಗೆ ಮರಳಲು ಸ್ಫೂರ್ತಿ ತುಂಬುವ ಅಂಕಿ-ಅಂಶವೆನಿಸಿದೆ.
ಟೀಮ್ ನ್ಯೂಸ್:
ಭಾರತ: ಆಡುವ ಹನ್ನೊಂದರ ಬಳಗದ ಆಯ್ಕೆ ಬಗ್ಗೆ ಭಾರತ ಇನ್ನೂ ಗೊಂದಲದಲ್ಲಿದೆ. ಪ್ರಮುಖವಾಗಿ 3ನೇ ವೇಗಿ ಮತ್ತು ಏಕೈಕ ಸ್ಪಿನ್ನರ್ ಆಯ್ಕೆ ಭಾರತಕ್ಕೆ ಸವಾಲೆನಿಸಿದೆ. ಆದರೆ ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್ ಮತ್ತು ಆರ್. ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುವ ನಿರೀೆ ಹೆಚ್ಚಿದೆ. ಇನ್ನು ನಾಯಕ ರೋಹಿತ್ ಶರ್ಮ ಮತ್ತೆ ಆರಂಭಿಕರಾಗಿ ಆಡುವರೇ ಅಥವಾ ಮಧ್ಯಮ ಕ್ರಮಾಂಕದಲ್ಲೇ ಮುಂದುವರಿಯುವರೇ ಎಂಬ ಬಗ್ಗೆಯೂ ಕತೂಹಲವಿದೆ. ರೋಹಿತ್ ಆರಂಭಿಕರಾಗಿ ಆಡಿದರೆ ಕೆಎಲ್ ರಾಹುಲ್ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲಿದ್ದಾರೆ.
ಆಸ್ಟ್ರೆಲಿಯಾ: ಆತಿಥೇಯ ಆಸೀಸ್ ಎಂದಿನಂತೆ ಪಂದ್ಯಕ್ಕೆ ಮುನ್ನಾದಿನವೇ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಿದ್ದು, ವೇಗಿ ಜೋಶ್ ಹ್ಯಾಸಲ್ವುಡ್ ಫಿಟ್ ಆಗಿರುವುದರಿಂದ ಮರಳಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸ್ಕಾಟ್ ಬೋಲ್ಯಾಂಡ್ ಸ್ಥಾನ ಬಿಟ್ಟುಕೊಡಲಿದ್ದಾರೆ. ಅಡಿಲೇಡ್ನಲ್ಲಿ ಉತ್ತಮ ದಾಳಿ ನಡೆಸಿದ್ದರೂ ಬೋಲ್ಯಾಂಡ್ರನ್ನು ಕೈಬಿಡುತ್ತಿರುವುದು ಕಠಿಣ ನಿರ್ಧಾರ. ಆದರೆ ಸರಣಿಯಲ್ಲಿ ಮತ್ತೆ ಅವರಿಗೆ ಅವಕಾಶ ಲಭಿಸಬಹುದು ಎಂದು ನಾಯಕ ಪ್ಯಾಟ್ ಕಮ್ಮಿನ್ಸ್ ತಿಳಿಸಿದ್ದಾರೆ.
*ಆರಂಭ: ಬೆಳಗ್ಗೆ 5.50
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*ಬ್ರಿಸ್ಬೇನ್ ಮುಖಾಮುಖಿ: 7
ಆಸ್ಟ್ರೆಲಿಯಾ: 5
ಭಾರತ: 1
ಡ್ರಾ: 1
*ಪ್ರತಿ ದಿನದಾಟ ಹೀಗಿರಲಿದೆ
ಮೊದಲ ಅವಧಿ: ಬೆಳಗ್ಗೆ 5.50-7.50
2ನೇ ಅವಧಿ: ಬೆಳಗ್ಗೆ 8.30-10.30
3ನೇ ಅವಧಿ: ಬೆಳಗ್ಗೆ 10.30-1.20
ಗಾಬಾದಲ್ಲಿ ತಗ್ಗಿದೆ ಆಸೀಸ್ ಪ್ರಾಬಲ್ಯ?
ರಿಷಭ್ ಪಂತ್ ಸಾಹಸದಿಂದ ಭಾರತ ತಂಡ 2021ರಲ್ಲಿ ಗಾಬಾದಲ್ಲಿ ಗೆಲ್ಲುವವರೆಗೆ ಆಸೀಸ್ ತಂಡ ಇಲ್ಲಿ 32 ವರ್ಷಗಳ ಕಾಲ ಸೋಲು ಕಂಡಿರಲಿಲ್ಲ. ನಂತರ ಹಾಲಿ ವರ್ಷದ ಆರಂಭದಲ್ಲೂ ಆಸೀಸ್ ತಂಡ ವಿಂಡೀಸ್ ವೇಗಿ ಶಮರ್ ಜೋಸ್ೆ ದಾಳಿಗೆ ತತ್ತರಿಸಿ ಸೋತಿತ್ತು. ಅಂದರೆ ಬ್ರಿಸ್ಬೇನ್ನಲ್ಲಿ ಆಡಿದ ಕಳೆದ 4 ಟೆಸ್ಟ್ಗಳಲ್ಲಿ 2ರಲ್ಲಿ ಸೋತಂತಾಗಿದೆ. ಈ ನಡುವೆ 2022ರ ಡಿಸೆಂಬರ್ನಲ್ಲಿ ದಣ ಆಫ್ರಿಕಾ ವಿರುದ್ಧ ಇಲ್ಲಿ ಎರಡೇ ದಿನಗಳಲ್ಲಿ ಗೆದ್ದಿತ್ತು. 2021ರಲ್ಲಿ ಇಲ್ಲಿ ಗೆದ್ದ ಭಾರತ ತಂಡದ ನಾಲ್ವರು ಆಟಗಾರರು (ರೋಹಿತ್, ಗಿಲ್, ಪಂತ್, ಸಿರಾಜ್) ಈ ಸಲವೂ ಆಡುವುದು ಖಚಿತವೆನಿಸಿದೆ. ವಾಷಿಂಗ್ಟನ್ ಕೂಡ ಕಣಕ್ಕಿಳಿದರೆ ಈ ಸಂಖ್ಯೆ 5ಕ್ಕೇರಲಿದೆ.
*ತಂಡ ಈಗ ಉತ್ತಮ ಮೂಡ್ನಲ್ಲಿದೆ. ನಿನ್ನೆ ನಾವೆಲ್ಲರೂ ಜತೆಯಾಗಿ ಡಿನ್ನರ್ಗೆ ಹೋಗಿದ್ದೆವು. ಅಡಿಲೇಡ್ನಲ್ಲಿ ನಾವು ಉತ್ತಮವಾಗಿ ಆಡಲಿಲ್ಲ. ಆದರೆ ಸರಣಿ ಈಗಲೂ ಜೀವಂತವಾಗಿದೆ ಮತ್ತು ಈಗ ಇದು 3 ಪಂದ್ಯಗಳ ಸರಣಿಯಂತಿದೆ. ನಾವು ಬ್ರಿಸ್ಬೇನ್ನಲ್ಲಿ ಗೆದ್ದರೆ ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲೂ ಮೇಲುಗೈ ಸಾಧಿಸಬಹುದು.
> ಶುಭಮಾನ್ ಗಿಲ್
ತಿಳಿಯಾದ ಹಸಿರು ಪಿಚ್
ಪಂದ್ಯಕ್ಕೆ ಮುನ್ನಾದಿನವಾದ ಶುಕ್ರವಾರ ಗಾಬಾ ಪಿಚ್ ಮೇಲಿನ ಹಸಿರು ಹುಲ್ಲು ಸಾಕಷ್ಟು ಕಡಿಮೆಯಾಗಿದೆ. ಇದರಿಂದ ಪಿಚ್ನ ಹಸಿರು ಬಣ್ಣವೂ ತಿಳಿಯಾಗಿದೆ. 2022ರಲ್ಲಿ ದಣ ಆಫ್ರಿಕಾ ವಿರುದ್ಧ ಇಲ್ಲಿ ಎರಡೇ ದಿನಗಳಲ್ಲಿ ಗೆದ್ದಿದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್, ಈ ಬಾರಿ ಪಿಚ್ ಆಗಿನಷ್ಟು ಹಸಿರಾಗಿಲ್ಲ ಎಂದಿದ್ದಾರೆ. ಪಿಚ್ ಎಂದಿನಂತೆ ವೇಗದ ಬೌಲಿಂಗ್ ಸ್ನೇಹಿಯಾಗಿಯೇ ಇರಲಿದೆ. ಪಂದ್ಯದ ವೇಳೆ ಮಳೆ ಸುರಿಯುವ ಭೀತಿ ಇದ್ದು, ಮಳೆ ಬಂದರೆ ಪಿಚ್ ವೇಗಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗಲಿದೆ.
*100: ವಿರಾಟ್ ಕೊಹ್ಲಿ ಈ ಪಂದ್ಯದೊಂದಿಗೆ ಆಸ್ಟ್ರೆಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ 2ನೇ ಭಾರತೀಯ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (110) ಮೊದಲಿಗ.