

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದಲ್ಲಿ ಜಯ ಸಾಧಿಸಿದ ಕಾಂಗರೂ ಪಡೆ, ಸದ್ಯ ಮುಂಬರುವ ಪಂದ್ಯಗಳಲ್ಲಿಯೂ ಜಯಭೇರಿಯಾಗಲು ಎದುರುನೋಡುತ್ತಿದೆ. ಈ ಮಧ್ಯೆ ಮೈದಾನದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವೆ ಉಂಟಾದ ಸಂಘರ್ಷ ಸದ್ಯ ದೊಡ್ಡ ವಿವಾದಕ್ಕೆ ತಿರುಗಿದೆ. ಒಂದೆಡೆ ಸಿರಾಜ್ ತಪ್ಪು ಎಂದು ಪತ್ರಕರ್ತರ ಮುಂದೆ ಆರೋಪಿಸಿರುವ ಹೆಡ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸಿರಾಜ್ ಅವರದ್ದು ಯಾವ ತಪ್ಪಿಲ್ಲ. ಬದಲಿಗೆ ಟ್ರಾವಿಸ್ ಅವರೇ ಸಿರಾಜ್ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಹರಿದಾಡುತ್ತಿರುವ ವಿಡಿಯೋ ಸಾಕ್ಷಿ ಎಂದು ಹೇಳಲಾಗುತ್ತಿದೆ. ಇದನ್ನು ಮರೆಮಾಚಿ ಕಿಡಿಕಾರಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್, ಟೀಮ್ ಇಂಡಿಯಾ ವೇಗಿಗೆ ದಂಡ (Fine) ವಿಧಿಸಬೇಕು ಎಂದಿದ್ದಾರೆ.
"ಐದು ಟೆಸ್ಟ್‌ಗಳ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಎಲ್ಬಿಡಬ್ಲ್ಯೂಗಾಗಿ ಅಂಪೈರ್ ಬಳಿ ಪದೇ ಪದೇ ಮನವಿ ಮಾಡಿದ್ದಾರೆ. ಅಂಪೈರ್ ನಿರ್ಧಾರವೇ ಅಂತಿಮ ಎಂದಮೇಲೂ ಸಹ ಅವರನ್ನು ಹಿಂತಿರುಗಿ ನೋಡದೆ, ತಮ್ಮಿಷ್ಟಕ್ಕೆ ಚಿರಾಡುವುದು ಸರಿಯಲ್ಲ. ಈ ನಡೆ ಒಪ್ಪುವಂತದ್ದಲ್ಲ. ಸಿರಾಜ್‌ನ ಈ ನಡೆಗೆ ಐಸಿಸಿ ದಂಡ ವಿಧಿಸಬೇಕು. ಅಸಲಿಗೆ ಐಸಿಸಿ ಏಕೆ ಈತನಿಗೆ ಇನ್ನೂ ಪೆನಾಲ್ಟಿ ಹಾಕಿಲ್ಲ, ಕ್ರಮ ಕೈಗೊಂಡಿಲ್ಲ ಎಂಬುದು ನಿಜಕ್ಕೂ ಆಶ್ಚರ್ಯ ತಂದಿದೆ. ಸಿರಾಜ್ ಮತ್ತು ಹೆಡ್ ನಡುವಿನ ಜಗಳಕ್ಕಿಂತ ನನಗೆ ಆ ಚಿಂತೆಯೇ ಹೆಚ್ಚು. ನೀವು ಎಷ್ಟು ಬಾರಿ ಬೇಕಾದರೂ ಮನವಿ ಮಾಡಬಹುದು. ಆದರೆ ಅಂಪೈರ್‌ಗಳ ಕಡೆಗೆ ಬೆನ್ನು ತಿರುಗಿಸಲು ಸಾಧ್ಯವಿಲ್ಲ" ಎಂದು ಕ್ಲಾರ್ಕ್ ಕಿಡಿಕಾರಿದ್ದಾರೆ.
"ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮ ಅವರು ಸಿರಾಜ್ ಜತೆಗೆ ಮಾತನಾಡುವುದನ್ನು ನಾನು ನೋಡಲು ಬಯಸುತ್ತೇನೆ. ಆತ ಒಳ್ಳೆಯ ಬೌಲರ್ ಆಗಿರಬಹುದು. ಆದರೆ, ಮೈದಾನದಲ್ಲಿ ನಿಮಗೆ ಹೇಗೆ ಬೇಕೋ ಹಾಗೇ ವರ್ತಿಸಲು ಸಾಧ್ಯವಿಲ್ಲ. ಬ್ಯಾಟರ್ ಔಟ್ ಎಂದು ಅಂಪೈರ್ ಘೋಷಿಸಿದರೋ, ಇಲ್ಲವೋ ಎಂಬುದನ್ನು ಹಿಂದೆ ತಿರುಗಿ ನೋಡಿ ಚೆಕ್ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ನೇರವಾಗಿ ವಿಕೆಟ್ ಕೀಪರ್ನತ್ತ ಓಡಿ ಹೋದರೆ ಏನು ಪ್ರಯೋಜನ. ಈ ನಡೆ ಸರಿಯಲ್ಲ" ಎಂದು ಕ್ಲಾರ್ಕ್ ಹೇಳಿದ್ದಾರೆ,(ಏಜೆನ್ಸೀಸ್).